ಬೆಂಗಳೂರು: ಗಾಯಕರು ಹಾಗೂ ಸಂಗೀತ ನಿರ್ದೇಶಕ ಡಾ. ಕಿಕ್ಕೇರಿ ಕೃಷ್ಣಮೂರ್ತಿ ಅವರು ಸಂಗೀತ ಕ್ಷೇತ್ರದಲ್ಲಿ ರಾಷ್ಟೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತಿ ಪಡೆದಿದ್ದು, “ಆದರ್ಶ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್” ಸ್ಥಾಪನೆ ಮಾಡಿ, ಅತ್ಯುತ್ತಮ ತಂಡವನ್ನು ನಿರ್ಮಿಸುವಲ್ಲಿ ಯಶಸ್ವಿಯಾಗಿರುತ್ತಾರೆ.
ಸುಗಮ ಸಂಗೀತ ಕ್ಷೇತ್ರದಲ್ಲಿ ಸಲ್ಲಿಸಿರುವ ಅಪಾರ ಸೇವೆಗಾಗಿ ‘ರಾಜ್ಯೋತ್ಸವ ಪ್ರಶಸ್ತಿ’, `ರಾಷ್ಟೀಯ ಪ್ರಶಸ್ತಿ’, ‘ಆರ್ಯಭಟ ಪ್ರಶಸ್ತಿ’ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದು, ಗಾಯನ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿರುವ ಇವರ ತಂಡವನ್ನು ಸಿಂಗಾಪುರದಲ್ಲಿ ಆಯೋಜನೆ ಮಾಡಿರುವ “ಎರಡನೇ ವಿಶ್ವಕನ್ನಡ ಹಬ್ಬ”ದಲ್ಲಿ ಸುಗಮ ಸಂಗೀತ ಗಾಯನ ಮಾಡಲು `ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್’ ಸಂಸ್ಥೆಯ ಸರ್ವ ಸದಸ್ಯರು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.
ಪ್ರಖ್ಯಾತ ಗಾಯಕರಿಗೆ `ವಿಶ್ವ ಕನ್ನಡ ಹಬ್ಬದ ಸಲಹಾ ಸಮಿತಿ’ಯ ಸರ್ವಾಧ್ಯಕ್ಷರಾದ ಡಾ. ಸಿ.ಸೋಮಶೇಖರ್ ಐಎಎಸ್ (ನಿ )ರವರು “ಆದೇಶ ಪತ್ರ” ನೀಡುವ ಮೂಲಕ ಅಭಿನಂದನೆಗಳನ್ನು ತಿಳಿಸಿದರು.ಈವೇಳೆ ಖ್ಯಾತ ಗಾಯಕ ಡಾ. ಕಿಕ್ಕೇರಿ ಕೃಷ್ಣಮೂರ್ತಿಯವರು, ನಮ್ಮ ತಂಡವನ್ನು ಆಯ್ಕೆ ಮಾಡಿದ್ದಕ್ಕೆ ಅಧ್ಯಕ್ಷರಾದ ಶಿವಕುಮಾರ್ ನಾಗರ ನವಿಲೆ ಹಾಗೂ ಡಾ. ಸೋಮಶೇಖರ್ ಸರ್ ರವರಿಗೆ ಧನ್ಯವಾದಗಳು. ಕಾರ್ಯಕ್ರಮಕ್ಕೆ ಎಲ್ಲಾ ಕನ್ನಡ ಅಭಿಮಾನಿಗಳಿಗೆ ಪ್ರೀತಿಯ ಸ್ವಾಗತ ಎಂದರು.