ಬೆಂಗಳೂರು: ಶ್ರೀ ಸಂಕಲ್ಪ ಸೇವಾ ಟ್ರಸ್ಟ್ ವತಿಯಿಂದ ಚಾಮರಾಜಪೇಟೆಯಲ್ಲಿ ಬೆಳಕಿಗೆ ಬೆಳಕು ಚೆಲ್ಲಿದ ದಿಗ್ಗಜ ಸರ್. ಸಿ. ವಿ. ರಾಮನ್ ರವರ ಹೆಜ್ಜೆ ಗುರುತು ಕಾರ್ಯಕ್ರಮವನ್ನು ಏರ್ಪಡಿಸಿದ್ದು, ಈ ಕಾರ್ಯಕ್ರಮವನ್ನು ಟ್ರಸ್ಟ್ನ ಸಂಸ್ಥಾಪಕ ಅಧ್ಯಕ್ಷ ಡಾ: ಹೆಚ್. ನರಸಿಂಹಮೂರ್ತಿರವರು ಪುಷ್ಪ ನಮನದ ಮೂಲಕ ಉದ್ಘಾಟಿಸಿದರು.
ಕಾರ್ಯಕ್ರಮದ ಉದ್ಥಾಟನೆ ನಂತರ ಮಾತನಾಡುತ್ತಾ ನೋಬೆಲ್ ಪ್ರಶಸ್ತಿ ಗಳಿಸಿರುವ ಭಾರತೀಯ ವಿಜ್ಞಾನ ಕ್ಷೇತ್ರದ ದಂತ ಕಥೆಗಳಲ್ಲಿ ಸಿ.ವಿ. ರಾಮನ್ರವರು ಒಬ್ಬರು. ಶಬ್ದ, ಬೆಳಕು, ಸ್ವರ, ನಾದಗಳಿಗೆ ವರ್ಣಮಯ ಬೆಳಕು ಚೆಲ್ಲಿನ ಧೀಮಂತ ಸಂಶೋಧಕ, ಭೌತಶಾಸ್ತ್ರ ವಿಭಾಗಕ್ಕೆ ಹೊಸ ಆಯಾಮ ನೀಡಿ, ಭಾರತದ ಹೆಸರಿಗೆ ಕೀರ್ತಿ, ಶ್ರೇಷ್ಠತೆಯನ್ನು ಚಿರಸ್ಥಾಯಿಗೊಳಿಸಿದ ದಿಗ್ಗಜ ಡಾ:ಸಿ.ವಿ.ರಾಮನ್ರವರು.
ಅವರ ಕಠಿಣ ಪರಿಶ್ರಮ ಮತ್ತು ಸಂಕಲ್ಪವು ಭಾರತವನ್ನು ಹೆಮ್ಮೆ ಪಡುವಂತೆ ಮಾಡಿತು. ಇವರ ಸಾಧನೆಯ ಹೆಜ್ಜೆ ಗುರುತನ್ನು ನಾವು ಮೆಲುಕು ಹಾಕುವುದೇ ನಮ್ಮಗಳ ಸೌಭಾಗ್ಯ. ಕೇವಲ 12ನೇ ವಯಸ್ಸಿನಲ್ಲೇ ಮೆಟ್ರಿಕ್ಯುಲೇಶನ್ ಮುಗಿಸಿದವರು. 1924 ರಲ್ಲಿ ಲಂಡನ್ನಿನ ಫೆಲೋಶಿಪ್ ರಾಯಲ್ ಸೊಸೈಟಿ ಆಗಿ ರಾಮನ್ ಆಯ್ಕೆಯಾದವರು. “ರಾಮನ್ ಎಫೆಕ್ಟ್ಸ್” ಸಿದ್ಧಾಂತಕ್ಕೆ 1930 ರಲ್ಲಿ ಭೌತಶಾಸ್ತ್ರ ವಿಭಾಗದ ನೋಬೆಲ್ ಪ್ರಶಸ್ತಿ ಪಡೆದ ಪ್ರಪ್ರಥಮ ಭಾರತೀಯ ವಿಜ್ಞಾನಿ.
1929 ರಲ್ಲಿ ನೈಟ್ ಹುಡ್ ಪ್ರಶಸ್ತಿ, ಮೈಸೂರು ಮಹಾರಾಜರಿಂದ ರಾಜಸಭಾ ಭೂಷಣ ಗೌರವ 1935 ರಲ್ಲಿ, 1954 ರಲ್ಲಿ ಭಾರತರತ್ನ ಪ್ರಶಸ್ತಿ ಪಡೆದ ದಿಗ್ಗಜ. ಅವರ ಅಪೂರ್ವ ಸಾಧನೆಯ ನೆನಪಿಗಾಗಿ ಫೆಬ್ರವರಿ 28 ರಂದು ರಾಷ್ಟ್ರೀಯ ವಿಜ್ಞಾನ ದಿನವೆಂದು ಆಚರಿಸಲಾಗುತ್ತದೆಂದು ತಿಳಿಸುವುದರ ಜೊತೆಗೆ, ಒಬ್ಬ ವ್ಯಕ್ತಿಯು ನಿಜವಾಗಿಯೂ ತನ್ನ ಆಸೆಗಳನ್ನು ಮುಂದುವರಿಸಲು ಬಯಸಿದರೆ ಯಾರೂ ತಡೆಯಲು ಸಾಧ್ಯವಿಲ್ಲ ಎಂದು ಸಾಬೀತುಪಡಿಸಿದ ಮಹಾನ್ ಚೇತನ ಎಂದರು.
ಈ ಸಂದರ್ಭದಲ್ಲಿ ಟ್ರಸ್ಟ್ನ ಉಪಾಧ್ಯಕ್ಷರಾದ ಎಂ.ಎಸ್. ಜಗದೀಶ್, ಪ್ರಧಾನ ಕಾರ್ಯದರ್ಶಿ ಎನ್. ನಾಗರಾಜ್, ಗಂಗಾಧರ ಮೂರ್ತಿ, ಹೆಚ್.ಎನ್. ಮಂಜುನಾಥ್, ಲಕ್ಷ್ಮೀನರಸಿಂಹಮೂರ್ತಿ, ಕೆ. ಎಂ. ಪೂರ್ಣಿಮ, ಲೋಚನ್ ಎನ್. ಗೌಡ, ಹಿತೈಷಿ ಎನ್. ಗೌಡ, ಎಸ್.ಆರ್. ಮುರಾರಿ ಮತ್ತು ಎಂ.ಸಿ. ಪ್ರಭುದೇವರವರು ಉಪಸ್ಥಿತರಿದ್ದರು.