ರೈಲು ಪ್ರಯಾಣ ಎಂದರೆ ಗಿಜಿ ಗಿಜಿ ಎನ್ನಿಸುವುದು ಸಹಜ. ಆ ಗಿಜಿ ಗಿಜಿ ಗೂಡಲ್ಲಿ ಒಬ್ಬಾತ ಭಗವದ್ಗೀತೆ ಓದುತ್ತಾ ಇದ್ದಾನೆ ಅಕ್ಕಪಕ್ಕ ಏನು ನಡೆಯುತ್ತಿದೆ ಎಂಬ ಪರಿವೆ ಇಲ್ಲದೆ, ಓದುವುದರಲ್ಲಿ ತಲ್ಲೀನನಾಗಿದ್ದಾನೆ. ಎದುರುಗಡೆ ಕುಳಿತಿದ್ದ ಒಬ್ಬ ಯುವಕ ಅತ್ತ ಇತ್ತ ನೋಡುತ್ತಾ, ಭಗವದ್ಗೀತೆ ಓದುತ್ತಿರುವವನ ಕಡೆ ನೋಡಿದ. `ಸ್ವಾಮಿ, ತಾವು ದೇವರಿದ್ದಾನೆ ಎಂದು ನಂಬುವಿರಾ?’ ಎಂದು ಕಾಲಕ್ಷೇಪಕ್ಕಾಗಿ ಮಾತಿಗೆಳೆದ.
ಆತ ತಲೆ ಎತ್ತಿ ನೋಡಿ ಇದಾನೆ ಎನ್ನುವಂತೆ ತಲೆ ಆಡಿಸಿದ. ಮತ್ತೆ ಓದುವುದರಲ್ಲಿ ತಲ್ಲೀನನಾದ. ಎರಡೇ ಸೆಕೆಂಡ್ ನಲ್ಲಿ ಮತ್ತೆ ಪ್ರಶ್ನೆ ಹಾಕಿದ. `ನನಗೂ ದೇವರನ್ನು ನೋಡುವ ಕುತೂಹಲ ಇದೆ. ದಯವಿಟ್ಟು ದೇವರು ಎಲ್ಲಿ ಸಿಗುತ್ತಾನೆ ಹೇಳಬಲ್ಲಿರಾ?’ ಆ ಯುವಕನ ಮಾತಿನಲ್ಲಿ ಅಪಹಾಸ್ಯ ಎದ್ದು ಕಾಣುತ್ತಿತ್ತು. ಅದನ್ನು ಅರ್ಥ ಮಾಡಿಕೊಂಡ ಹಿರಿಯವನು, ”ನಿನಗೊಂದು ಕಥೆ ಹೇಳ್ತೀನಿ. ಅದನ್ನು ಕೇಳಿದ ಮೇಲೆ ನಿನ್ನ ಸಂದೇಹ ನಿವಾರಣೆ ಆಗಬಹುದೇನೋ” ಎಂದು, ತಾನು ಓದುತ್ತಿದ್ದ ಭಗವದ್ಗೀತೆಯ ಪುಸ್ತಕ ಮುಚ್ಚಿಟ್ಟು, ಕಥೆ ಹೇಳಲು ಪ್ರಾರಂಭಿಸಿದ.
`ಒಂದು ಊರು. ಆ ಊರಿನಲ್ಲಿ ಒಬ್ಬ ಯುವತಿ. ಅವಳಿಗೆ ಮದುವೆಯ ವಯಸ್ಸು ಬಂದಿತೆಂದು ಅವಳ ತಂದೆತಾಯಿಗಳು ತಮ್ಮ ನೆರೆಮನೆ ಯುವಕನೊಂದಿಗೆ ಮದುವೆ ಮಾಡಲು ಆಲೋಚಿಸಿದರು. ದೂರಾಭಾರವಿಲ್ಲದೆ ಮಗಳು ಪಕ್ಕದಲ್ಲೇ ಇರುತ್ತಾಳೆ ಎಂಬ ಆಲೋಚನೆ ಅವರದು. ಆದರೆ, ಆ ಯುವತಿ ಮದುವೆಗೆ ಒಪ್ಪಲಿಲ್ಲ. ”ನಾನು ಸುಮ್ಮನೆ ಯಾರು ಯಾರನ್ನೋ ಮಾಡಿಕೊಳ್ಳಲು ತಯಾರಿಲ್ಲ. ಎಲ್ಲರಿಗಿಂತ ದೊಡ್ಡ ಮನುಷ್ಯನನ್ನೇ ಮಾಡಿಕೊಳ್ಳುವೆ. ಪಕ್ಕದ ಮನೆಯ ಹುಡುಗನನ್ನಲ್ಲ” ಎಂದಳು.
`ಅಪ್ಪಾ, ನಮ್ಮ ಊರಲ್ಲಿ ಎಲ್ಲರಿಗಿಂತ ಅತಿ ದೊಡ್ಡ ಮನುಷ್ಯ ಎಂದು ಯಾರನ್ನ ಕರೀತಾರೆ?’
`ಈ ರಾಜ್ಯದ ಮಹಾರಾಜರನ್ನ’ ಎಂದು ಉತ್ತರಿಸಿದ ತಂದೆ.
`ಸರಿ. ಹಾಗಾದರೆ ನಾನು ಮಹಾರಾಜನನ್ನೇ ಮದುವೆ ಆಗುತ್ತೇನೆ’ ಎಂದು ಹೇಳಿದಳು.
ಹಟಮಾರಿ ಮಗಳ ಮಾತಿಗೆ ವಿಧಿ ಇಲ್ಲದೆ ಒಪ್ಪಕೊಳ್ಳಲೇ ಬೇಕಾಯಿತು. ಆ ಯುವತಿ ರಾಜಧಾನಿ ಸೇರಿದಳು. ಅದೇ ಸಮಯದಲ್ಲಿ, ಪಲ್ಲಕ್ಕಿಯಲ್ಲಿ ಕುಳಿತು ಊರಿನ ಆಗು ಹೋಗುಗಳನ್ನು ಗಮನಿಸುತ್ತಿದ್ದ ರಾಜ. ಆ ಯುವತಿ ಓಡಿಬಂದು, ”ನನ್ನನ್ನು ಮದುವೆಯಾಗು” ಎಂದು ಕೇಳಲಿದ್ದಳು, ಅಷ್ಟರಲ್ಲಿ ಮಹಾರಾಜ ಪಲ್ಲಕ್ಕಿಯಿಂದ ಕೆಳಗಿಳಿದು ಬಂದು, ತನಗೆ ಎದುರಾಗಿ ಬಂದ ಒಬ್ಬ ಸಾಧು ಪುಂಗವನಿಗೆ ತಲೆಬಾಗಿ ನಮಸ್ಕರಿಸಿದ.
‘ಓಹೋ, ಈ ಸನ್ಯಾಸಿ ಯಾರೋ ರಾಜನಿಗಿಂತ ಮಹಾನ್ ಮನುಷ್ಯ ಇರಬೇಕು. ಇಲ್ಲವೆಂದರೆ ರಾಜನೇಕೆ ಆತನ ಕಾಲಿಗೆರಗುತ್ತಾನೆ’ ಎನ್ನಿಸಿತು. ವಿನಾಯಕನ ಮುಂದೆ ನಿಂತು ನೂರಾ ಎಂಟು ನಮಸ್ಕಾರಗಳನ್ನು ಹಾಕಿದ ಆ ಸನ್ಯಾಸಿ. ಅದನ್ನು ನೋಡಿದ ಆ ಯುವತಿ, ‘ಮಹಾರಾಜನಿಗಿಂತ ಸನ್ಯಾಸಿಗೆ ಹೆಚ್ಚು ಮರ್ಯಾದೆ ಇದೆ ಎಂದುಕೊಂಡರೆ, ಈ ವಿನಾಯಕನಿಗೇ ಇನ್ನೂ ಹೆಚ್ಚಿನ ಮರ್ಯಾದೆ ಸಿಗುತ್ತಿದೆ. ಹಾಗಾದರೆ, ಈ ವಿನಾಯಕನನ್ನೇ ಮದುವೆಯಾಗೋಣ’ ಎಂದುಕೊಳ್ಳುತ್ತಿರುವಾಗಲೇ, ”ಹೋ ಹೋ, ನಮ್ಮೆಲ್ಲರ ಅಚ್ಚುಮೆಚ್ಚಿನ ಗೆಳೆಯ, ಪರಾಕ್ರಮಿ, ವೀರ ಯೋಧ ಮನಸ್ವಿಗೆ ಜೈ” ಎಂದು ಹಾರಗಳು ಹಾಕಿ ಅಭಿನಂದಿಸುತ್ತಾ ಬಂದ ಗುಂಪೊಂದನ್ನು ನೋಡಿದಳು.
‘ಇಷ್ಟು ಜನರ ಪ್ರೀತಿಪಾತ್ರನಾದ ಈ ಯುವಕನೇ ಬಹಳ ಶ್ರೇಷ್ಠ ನಿದ್ದಾನೆ’ ಎಂದು ಯೋಚಿಸಿ, ಮನೆಗೆ ಬಂದಳು. ತಂದೆತಾಯಿಗೆ ವಿಷಯ ತಿಳಿಸಿದಳು. ಅವರಿಗೂ ಸಂತೋಷವಾಗಿ, ಆ ಯುವಕನ ತಂದೆ ತಾಯಿಯನ್ನು ಸಂಪರ್ಕಿಸಿದರು. ಯಾವ ಯುವಕನೊಂದಿಗೆ ಮಗಳ ಮದುವೆ ನಡೆಸಲು ತಂದೆ ತಾಯಿ ಮೊಟ್ಟಮೊದಲಿಗೆ ಬಯಸಿದ್ದರೋ, ಅದೇ ನೆರೆಮನೆಯ ಹುಡುಗನನ್ನು ತಮ್ಮ ಮಗಳು ಮದುವೆಯಾಗಲು ಬಯಸಿದ್ದು, ಅವರಿಗೂ ಸಂತೋಷತಂದಿತ್ತು”. ಕಥೆ ಮುಗಿಸಿದ.
ಆತ ತನ್ನನ್ನು ಪ್ರಶ್ನಿಸಿದ ಯುವಕನಿಗೆ ಹೇಳಿದ,
”ನಮ್ಮ ಹೃದಯ ಆ ಯುವತಿಯ ಪುಟ್ಟ ಗ್ರಾಮದಂತೆಯೇ. ದೇವರೆಲ್ಲಿದ್ದಾನೆ ಎಂದು ವಿಳಾಸಕ್ಕಾಗಿ ಎಲ್ಲೆಲ್ಲೋ ಹುಡುಕಾಡಿದರೂ, ನಮ್ಮ ಅಂತರಾಳದಲ್ಲಿಯೇ ಇದ್ದಾನೆಂಬ ಸತ್ಯದ ಅರಿವು ಆಗುತ್ತದೆ. ನಮ್ಮ ಹೃದಯವೇ ನಮಗೆ ಬೇಕಾದ ದೇವರ ವಿಳಾಸ” ಎಂದು ನಸುನಕ್ಕು, ಪುನಃ ಭಗವದ್ಗೀತೆ ಯಲ್ಲಿ ತಲ್ಲೀನನಾಗುತ್ತಾನೆ.* ದೇವರೆಲ್ಲಿದ್ದಾನೆ ಎಂಬ ಪ್ರಶ್ನೆ ಮೂಡಿದಾಗ ಇದನ್ನು ನೆನಪಿಡಿ*