ಬೆಂಗಳೂರು: ವಿಚಾರಣೆಗೆ ಹಾಜರಾಗುವಂತೆ ಭವಾನಿ ರೇವಣ್ಣಗೆ ಎಸ್ಐಟಿ ನೊಟೀಸ್ ನೀಡಿದೆ. ಆದರೆ, ಈ ನೊಟೀಸ್ಗೆ ಭವಾನಿ ರೇವಣ್ಣ ಉತ್ತರ ನೀಡಿಲ್ಲ. ಅಲ್ಲದೆ, ಕಳೆದ ಹದಿನೈದು ದಿನಗಳಿಂದ ಯಾರ ಸಂಪರ್ಕಕ್ಕೂ ಸಿಕ್ಕಿಲ್ಲ. ಮೇ 4 ರಂದು ಸಂತ್ರಸ್ತೆಯರ ಸ್ಥಳ ಮಹಜರಿನ ವೇಳೆ ಹೊಳೆನರಸೀಪುರ ಮನೆಯಲ್ಲಿ ಭವಾನಿ ಹಾಜರಿದ್ದರು.
ಆ ನಂತರ ಮೇ 6 ರಂದು ಹೊಳೆನರಸೀಪುರದ ಮನೆಯಲ್ಲಿ ಜಿಲ್ಲೆಯ ಜೆಡಿಎಸ್ ಶಾಸಕರು ಹಾಗೂ ಮಾಜಿ ಶಾಸಕರು ಭವಾನಿಯನ್ನು ಬೇಟಿಯಾಗಿದ್ದರು. ಶಾಸಕರನ್ನು ಬೇಟಿಯಾದ ನಂತರ ಹೊಳೆನರಸೀಪುರ ಮನೆಯಿಂದ ಭವಾನಿ ರೇವಣ್ಣ ಹೊರ ಹೋಗಿದ್ದರು.ಆ ನಂತರ, ಅಂದರೆ ಮೇ 8 ರಿಂದ ಯಾರ ಸಂಪರ್ಕಕ್ಕೂ ಸಿಕ್ಕಿಲ್ಲ. ಜೈಲುಪಾಲಾಗಿದ್ದ ಪತಿ ರೇವಣ್ಣರನ್ನು ಬೇಟಿಯಾಗಲೂ ಬಂದಿಲ್ಲ. ಆ ಬಳಿಕ ರೇವಣ್ಣ ಜೈಲಿನಿಂದ ಬಿಡುಗಡೆ ಆದರೂ ಅವರನ್ನು ಬೇಟಿಯಾಗಲು ಭವಾನಿ ಬಂದಿಲ್ಲ. ಸದ್ಯ ಅವರು ನಿಗೂಢ ಸ್ಥಳದಲ್ಲಿ ಇದ್ದಾರೆ ಎನ್ನಲಾಗಿದೆ.
ಮತ್ತೊಂದೆಡೆ, ಭವಾನಿ ರೇವಣ್ಣ ಎಲ್ಲಿದ್ದಾರೆಂಬ ಬಗ್ಗೆ ಮಾಹಿತಿ ಕಲೆ ಹಾಕಲು ಎಸ್ಐಟಿ ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ. ನ್ಯಾಯಾಲಯದಲ್ಲಿ ಇಂದು ನಿರೀಕ್ಷಣಾ ಜಾಮೀನು ಅರ್ಜಿ ವಜಾ ಆದರೆ ಭವಾನಿ ರೇವಣ್ಣ ಬಂಧನ ಸಾದ್ಯತೆ ಇದೆ. ಹೀಗಾಗಿಯೇ ಅವರು ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದೆ. ಈ ಮಧ್ಯೆ, ಭವಾನಿಗೆ ಎಸ್ಐಟಿ ಮೊದಲ ನೊಟೀಸ್ ನೀಡಿದ್ದು, ಜೂನ್ 1 ರಂದು ಖುದ್ದು ಮನೆಯಲ್ಲಿ ಹಾಜರಿರಬೇಕು ಎಂದು ಸೂಚನೆ ನೀಡಿದೆ ಎನ್ನಲಾಗಿದೆ.