ದೊಡ್ಡಬಳ್ಳಾಪುರ: ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಇಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪ್ರವಾಸದಲ್ಲಿದ್ದರು, ನಗರಾಭಿವೃದ್ಧಿ ಖಾತೆಯನ್ನು ಹೊಂದಿರುವ ಅವರು ಬ್ರ್ಯಾಂಡ್ ಬೆಂಗಳೂರು ಮಾಡುವ ಕನಸು ಇಟ್ಟುಕೊಂಡಿದ್ದಾರೆ, ಗ್ರೇಟರ್ ಬೆಂಗಳೂರು ಯೋಜನೆಯಡಿ ಉಪನಗರ ಹೊರವರ್ತುಲ ರಸ್ತೆ (STRR) ಸಾಗುವ ಮಾರ್ಗದಲ್ಲಿ ಟೌನ್ ಶಿಪ್ ನಿರ್ಮಾಣ ಮಾಡುವ ಉದ್ದೇಶವನ್ನ ಇಟ್ಟುಕೊಂಡಿದ್ದಾರೆ.
ಬೆಂಗಳೂರು ನಗರಕ್ಕೆ ಬರುವ ಭಾರೀ ವಾಹನಗಳ ದಟ್ಟನೆಯನ್ನ ತಡೆಯುವುದು ಮತ್ತು ಬೆಂಗಳೂರಿನ ಹೊರಭಾಗದಲ್ಲಿ ಟೌನ್ ಶೀಪ್ ಗಳನ್ನ ನಿರ್ಮಾಣ ಮಾಡುವ ಉದ್ದೇಶದಿಂದ ಬೆಂಗಳೂರು ನಗರದ ಹೊರಭಾಗದಲ್ಲಿ ಉಪನಗರ ಹೊರವರ್ತುಲ ರಸ್ತೆ ಕಾಮಾಗಾರಿ ನಡೆಯುತ್ತಿದೆ, ರಾಮನಗರ,ಮಾಗಡಿ, ದಾಬಸ್ ಪೇಟೆ, ದೊಡ್ಡಬಳ್ಳಾಪುರ, ದೇವನಹಳ್ಳಿ, ಹೊಸಕೋಟೆ, ಅನೇಕಲ್, ಕನಕಪುರ ಸೇರಿದಂತೆ ಎಸ್.ಟಿ.ಆರ್. ಆರ್ ಯೋಜನೆ ನಡೆಯುತ್ತಿದೆ. ಈಗಾಗಲೇ ದಾಬಸ್ ಪೇಟೆ ಯಿಂದ ಹೊಸಕೋಟೆ ವರೆಗಿನ ರಸ್ತೆ ಮಾರ್ಗದಲ್ಲಿ ವಾಹನಗಳ ಸಂಚಾರ ನಡೆಯುತ್ತಿದೆ.
ಉಪನಗರ ಹೊರವರ್ತುಲ ರಸ್ತೆ ಯೋಜನೆಯ ಮಾರ್ಗದಲ್ಲಿ ನೂತನ ಟೌನ್ ಶಿಪ್ ಗಳನ್ನ ನಿರ್ಮಿಸುವ ಉದ್ದೇಶವಿದ್ದು, ಈ ಕಾರಣಕ್ಕಾಗಿ ಅಧಿಕಾರಿಗಳ ತಂಡದೊಂದಿ ಇಂದು ಡಿಸಿಎಂ ಡಿ.ಕೆ.ಶಿವಕುಮಾರ್ ಸ್ಥಳ ಪರಿಶೀಲನೆ ನಡೆಸಿದರು.ದೊಡ್ಡಬಳ್ಳಾಪುರದ ಬಳಿ ಎರಡು ಟೌನ್ ಶಿಪ್ ಗೆ ಸಂಬಂಧಿಸಿದಂತೆ ಉದ್ದೇಶಿತ ಸ್ಥಳಗಳು, ದಾಬಸ್ ಪೇಟೆಯ ಲಕ್ಕೂರು ಮತ್ತು ಹೊಸಕೋಟೆಯ ನಂದಗುಡಿ ಟೌನ್ ಶಿಪ್ ಸ್ಥಳ ಪರಿಶೀಲನೆ ನಡೆಸಿದರು,
ಈ ವೇಳೆ ಉದ್ದೇಶಿತ ಯೋಜನಾ ಪ್ರದೇಶದ ನೀಲನಕ್ಷೆಯನ್ನು ಪರಿಶೀಲಿಸಿದರು. ಬೆಂಗಳೂರನ್ನು ಗ್ರೇಟರ್ ಬೆಂಗಳೂರು ಮಾಡುವ ಉದ್ದೇಶವಿದ್ದು, ಸ್ಯಾಟಲೈಟ್ ರಿಂಗ್ ರಸ್ತೆ ಸಾಗುವ ಕಡೆಗೆ ಹೊಸ ಟೌನ್ಶಿಪ್ಗಳನ್ನು ನಿರ್ಮಿಸಿ ಅಗತ್ಯ ಮೂಲಸೌಕರ್ಯ ಒದಗಿಸುವುದು, ರಸ್ತೆ, ರೈಲು ಮೊದಲಾದ ಸಂಪರ್ಕ ವ್ಯವಸ್ಥೆ ಕಲ್ಪಿಸುವುದು ಸರ್ಕಾರದ ಮುಖ್ಯ ಗುರಿಯಾಗಿದ್ದು. ಈ ಮೂಲಕ ಬೆಂಗಳೂರನ್ನು ವಿಶ್ವ ದರ್ಜೆಯ ಅತ್ಯುತ್ತಮ ನಗರವಾಗಿಸುವುದು ನಮ್ಮ ಕನಸು ಎಂದು ಹೇಳಿದ್ದಾರೆ.