ಬೆಂಗಳೂರು/ಹುಬ್ಬಳ್ಳಿ: ಸ್ವಾತಂತ್ರ್ಯ ನಂತರದಿಂದ ಇದುವರೆಗೆ ಕನ್ನಡ ನಾಡು, ನುಡಿ ಭಾಷೆ ಸೇರಿದಂತೆ ರಾಜ್ಯದ ಸರ್ವಾಂಗೀಣ ಅಭಿವೃದ್ದಿಗಾಗಿ ಬಹುವಾಗಿ ಶ್ರಮಿಸಿ ತಮ್ಮದೇ ಆದಂತಹ ವಿಶಿಷ್ಟ ಕೊಡುಗೆಗಳನ್ನು ನೀಡಿದ 23 ಜನರ ಮಹನೀಯರು ರಾಜ್ಯದ ಮುಖ್ಯಮಂತ್ರಿಗಳಾಗಿ ಸೇವೆ ಸಲ್ಲಿಸಿದ್ದು, ಅವರ ಪರಿಚಯವನ್ನು ಇಂದಿನ ಪೀಳಿಗೆಗೆ ಮಾಡಿಸುವ ಉದ್ದೇಶದಿಂದ ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿಯವರ ಸಲಹೆಯಂತೆ ಎಲ್ಲಾ ಮುಖ್ಯಮಂತ್ರಿಗಳ ಭಾವಚಿತ್ರಗಳನ್ನು ಅಳವಡಿಸುವ ಕುರಿತು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಹಿರಿಯ ಅಧಿಕಾರಿಗಳು ಸಭಾಪತಿ ಬಸವರಾಜ ಹೊರಟ್ಟಿ ಅವರೊಂದಿಗೆ ವಿಧಾನ ಸೌಧದಲ್ಲಿ ಸ್ಥಳ ಪರಿಶೀಲನೆ ನಡೆಸಿದರು.
ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿಯವರು ಕೆಲ ದಿನಗಳ ಹಿಂದೆ ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದು 1947 ರಿಂದ ಇಂದಿನವರೆಗೆ ರಾಜ್ಯವನ್ನು ಸಮರ್ಥವಾಗಿ ಮುನ್ನಡೆಸಿರುವ ಎಲ್ಲಾ ಮುಖ್ಯಮಂತ್ರಿಗಳ ಭಾವಚಿತ್ರವನ್ನು ವಿಧಾನ ಸೌಧದಲ್ಲಿ ಅಳವಡಿಸಿ ಸೂಕ್ತ ಗೌರವ ಸಲ್ಲಿಸುವಂತೆ ಮನವಿ ಮಾಡಿದ್ದರು. ಅಲ್ಲದೆ ಇಂದಿನವರೆಗಿನ 23 ಮುಖ್ಯಮಂತ್ರಿಗಳಲ್ಲಿ ಕೆಲ ಅನೇಕ ಮಾಜಿ ಮುಖ್ಯಮಂತ್ರಿಗಳು ನಮ್ಮನ್ನು ಅಗಲಿರುತ್ತಾರೆ.
ಕೆಲವು ದಿವಂಗತ ಮುಖ್ಯಮಂತ್ರಿಗಳಿಗೆ ವಿಧಾನ ಸೌಧದ ಆವರಣದಲ್ಲಿ ಅವರ ಪ್ರತಿಮೆಗಳನ್ನು ಸ್ಥಾಪಿಸಲಾಗಿದ್ದು, ಸನ್ಮಾನ್ಯರ ಜನ್ಮದಿನ ಹಾಗೂ ಪುಣ್ಯತಿಥಿಯ ದಿನಗಳಂದು ಅವರ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸುವ ಸಂಪ್ರದಾಯವಿದೆ. ಆದರೆ, ಹಲವಾರು ಮಾಜಿ ಮುಖ್ಯಮಂತ್ರಿಗಳ ಪ್ರತಿಮೆ ಅಥವಾ ಪುತ್ಥಳಿಗಳು ವಿಧಾನ ಸೌಧದ ಅವರಣದಲ್ಲಿ ಇಲ್ಲದಿರುವ ಕಾರಣ ಅಂತಹ ಮಹನೀಯರ ಜನ್ಮದಿನ ಮತ್ತು ಪುಣ್ಯತಿಥಿಯ ದಿನಗಳಂದು ಅವರಿಗೆ ಯಾವುದೇ ರೀತಿಯ ಗೌರವ ಸಲ್ಲಿಸುವಂತಹ ಪ್ರಕ್ರಿಯೆಗಳಿರುವುದಿಲ್ಲ.
ಇದರಿಂದಾಗಿ ಮಾಜಿ ಮುಖ್ಯಮಂತ್ರಿಗಳಾದ ಕಡಿದಾಳ ಮಂಜಪ್ಪ, ಎಸ್.ಆರ್. ಕಂಠಿ, ಬಿ.ಡಿ. ಜತ್ತಿ, ಆರ್. ಗುಂಡುರಾವ್, ವಿರೇಂದ್ರ ಪಾಟೀಲ್, ಬಂಗಾರಪ್ಪ, ರಾಮಕೃಷ್ಣ ಹೆಗಡೆ, ಎಸ್.ಆರ್ ಬೊಮ್ಮಾಯಿ, ಜೆ.ಹೆಚ್. ಪಟೇಲ್, ಧರ್ಮಸಿಂಗ್ ಇನ್ನು ಮುಂತಾದ ಗಣ್ಯರಿಗೆ ಇಂತಹ ಗೌರವಗಳು ಸಿಗುತ್ತಿಲ್ಲ. ಈ ಹಿನ್ನಲೆಯಲ್ಲಿ ದಿವಂಗತರಾಗಿರುವ ರಾಜ್ಯದ ಎಲ್ಲಾ ಮಾಜಿ ಮುಖ್ಯಮಂತ್ರಿಗಳಿಗೂ ಸಮಾನ ಗೌರವ ನೀಡುವ ಹಿನ್ನಲೆಯಲ್ಲಿ ವಿಧಾನ ಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ರಾಜ್ಯದ ಎಲ್ಲಾ ಮುಖ್ಯಮಂತ್ರಿಗಳ ಭಾವ ಚಿತ್ರವನ್ನು ಅವರುಗಳ ಅವಧಿಗಳನ್ನು ನಮೂದಿಸಿ, ಅವರುಗಳಿಗೆ ಸರ್ಕಾರದ ವತಿಯಿಂದ ಸಮಾನ ಗೌರವ ಸಲ್ಲಿಸುವಂತಹ ಕಾರ್ಯಕ್ರಮಗಳನ್ನು ರೂಪಿಸಬೇಕೆಂದು ಪತ್ರ ಮುಖೇನ ಮುಖ್ಯಮಂತ್ರಿಗಳನ್ನು ಕೋರಿದ್ದರು.
ಅಲ್ಲದೆ ಭಾರತ ದೇಶದ ಸಂಸತ್ತು ಭವನದಲ್ಲಿ ಇದುವರೆಗೂ ಈ ದೇಶವನ್ನು ಮುನ್ನಡೆಸಿದ ದಿವಂಗತ ಮಾಜಿ ಪ್ರಧಾನ ಮಂತ್ರಿಗಳ ಜನ್ಮದಿನ ಹಾಗೂ ಪುಣ್ಯತಿಥಿ ದಿನಗಳಂದು ಗಣ್ಯರು ಸೇರಿ ಅವರ ಭಾವ ಚಿತ್ರಗಳಿಗೆ ಪುಷ್ಪ ಸರ್ಮಪಿಸಿ ಅವರ ಸೇವೆಯನ್ನು ಸ್ಮರಿಸುವ ಪರಿಪಾಠವಿದೆ.ಎಲ್ಲಾ ಮಾಜಿ ಪ್ರಧಾನಿಗಳ ಜೀವನ, ಸಾಧನೆ ಹಾಗೂ ಸಮಾಜ ಸೇವೆಯನ್ನು ಪರಿಚಯಿಸುವ ಮ್ಯೂಸಿಯಂನ್ನು ಸಹ ಸ್ಥಾಪಿಸಲಾಗಿದೆ.
ಅದೇ ಮಾದರಿಯಲ್ಲಿ ನಮ್ಮ ರಾಜ್ಯದ ಬೆಳವಣಿಗೆಗೆ ಶ್ರಮಿಸಿದ ಎಲ್ಲಾ ಮಾಜಿ ಮುಖ್ಯಮಂತ್ರಿಗಳಿಗೂ ಸಮಾನ ಗೌರವ ನೀಡುವ ಹಿನ್ನಲೆಯಲ್ಲಿ ವಿಧಾನ ಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ರಾಜ್ಯದ ಎಲ್ಲಾ ಮಾಜಿ ಮುಖ್ಯಮಂತ್ರಿಗಳ ಭಾವ ಚಿತ್ರವನ್ನು ಅವರುಗಳ ಅವಧಿಗಳನ್ನು ನಮೂದಿಸಿ, ಅವರುಗಳಿಗೆ ಸರ್ಕಾರದ ವತಿಯಿಂದ ಸಮಾನ ಗೌರವ ಸಲ್ಲಿಸುವಂತಹ ಕಾರ್ಯಕ್ರಮಗಳನ್ನು ರೂಪಿಸಬೇಕು ಹಾಗೂ ದೆಹಲಿ ಮಾದರಿಯಲ್ಲಿಯೇ ಮ್ಯೂಸಿಯಂನ್ನು ಸಹ ಸ್ಥಾಪಿಸಬೇಕೆಂದು ಮುಖ್ಯಮಂತ್ರಿಗಳಿಗೆ ಆಗ್ರಹ ಪೂರ್ವಕವಾಗಿ ಕೋರಿದ್ದರು.
ಸಭಾಪತಿ ಬಸವರಾಜ ಹೊರಟ್ಟಿರವರ ಕೋರಿಕೆಗೆ ಸರ್ಕಾರ ಸ್ಪಂದಿಸಿದ್ದು, ಸಭಾಪತಿ ಬಸವರಾಜ ಹೊರಟ್ಟಿ ಅವರನ್ನು ಸಂಪರ್ಕಿಸಿದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಕಾರ್ಯದರ್ಶಿ ಡಿ. ರಂದೀಪ್ ಹಾಗೂ ಹಿರಿಯ ಅಧಿಕಾರಿಗಳು ಬಸವರಾಜ ಹೊರಟ್ಟಿ ಅವರೊಂದಿಗೆ ವಿಧಾನ ಸೌಧದ 3 ನೇ ಮಹಡಿಯಲ್ಲಿರುವ ಸಮ್ಮೇಳನ ಸಭಾಂಗಣ, ಬ್ಯಾಂಕ್ವೆಟ್ ಹಾಲ್ ಮೊದಲಾದಡೆ ವೀಕ್ಷಣೆ ನಡೆಸಿ ಭಾವಚಿತ್ರ ಅಳವಡಿಸುವ ಸ್ಥಳವನ್ನು ಪರಿಶೀಲಿಸಿದರು.
ಈ ವೇಳೆ ಮಾತನಾಡಿದ ಸಭಾಪತಿ ಬಸವರಾಜ ಹೊರಟ್ಟಿ ಇದುವರೆಗಿನ ರಾಜ್ಯದ ಆಡಳಿತದ ಚುಕ್ಕಾಣಿ ಹಿಡಿದಿರುವ ಎಲ್ಲಾ ಮುಖ್ಯಮಂತ್ರಿಗಳ ಭಾವಚಿತ್ರವನ್ನು ವ್ಯವಸ್ಥಿತವಾಗಿ ಅಳವಡಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಡಿಪಿಎಆರ್ನ ಜಂಟಿ ಕಾರ್ಯದರ್ಶಿ ಜಿ. ವೆಂಕಟೇಶ, ಸಭಾಪತಿಯವರ ವಿಶೇಷ ಕರ್ತವ್ಯಾಧಿಕಾರಿ ಡಾ. ಮಹೇಶ ವಾಳ್ವೇಕರ್, ಕಾರ್ಯದರ್ಶಿ ಹೆಚ್.ಡಿ ಪಾಟೀಲ, ವಿಶೇಷಾಧಿಕಾರಿ ಕೆ.ಡಿ. ಶೈಲಾ, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಟಿ.ಪಿ ಅರುಣ್ ಹಾಗೂ ರಾಜೇಶ್ ತಂಗಳಗಿ ಮತ್ತಿತ್ತರ ಅಧಿಕಾರಿಗಳು ಹಾಜರಿದ್ದರು.