ದೊಡ್ಡಬಳ್ಳಾಪುರ: ನಗರದ ಜಯಚಾಮರಾಜೇಂದ್ರ ವೃತ್ತದಲ್ಲಿ ವರನಟ ಡಾ.ರಾಜಕುಮಾರ್ ಕಂಚಿನ ಪುತ್ಥಳಿಯನ್ನು ಭಾನುವಾರ ನಟ ಶಿವರಾಜಕುಮಾರ್ ಅನಾವರಣಗೊಳಿಸಿದರು. ದೊಡ್ಡಬಳ್ಳಾಪುರ ನಗರಸಭೆ ಅನುದಾನದಲ್ಲಿ ತಾಲ್ಲೂಕು ಶಿವರಾಜಕುಮಾರ್ ಕನ್ನಡ ಸೇನಾ ಸಮಿತಿ ನೇತೃತ್ವದಲ್ಲಿ ಈ ಪುತ್ಥಳಿಯನ್ನು ನವೀಕರಿಸಲಾಗಿದೆ. ದೊಡ್ಡಬಳ್ಳಾಪುರ ಹಾಗೂ ನಮ್ಮ ಕುಟುಂಬಕ್ಕೆ ಅವಿನಾಭಾವ ಸಂಬAಧ ಇದೆ. ನಮ್ಮ ಕುಟುಂಬದ ಮೇಲೆ ನೀವುಗಳು ಇಟ್ಟಿರುವ ಪ್ರೀತಿ ದೊಡ್ಡಬಳ್ಳಾಪುರ ನಗರಕ್ಕೆ ನನ್ನನ್ನ ಕರೆತಂದಿದೆ. ಇಲ್ಲಿನ ಕೆಸಿಎನ್ ಗೌಡರವರನ್ನ ಅಪ್ಪಾಜಿ ಅನ್ನದಾತರು ಎಂದು ಕರೆಯುತ್ತಿದ್ದರು ಎಂದರು.
ದೊಡ್ಡಬಳ್ಳಾಪುರ ನನಗೆ ಹೊಸದಲ್ಲ. ‘ಮನಮೆಚ್ಚಿದ ಹುಡುಗಿ’, ‘ತವರಿಗೆ ಬಾ ತಂಗಿ’, ‘ವಾಲ್ಮೀಕಿ’ ಸಿನಿಮಾ ಶೂಟಿಂಗ್ ಇಲ್ಲಿ ಮಾಡಿದ್ದೇನೆ. ದೊಡ್ಡಬಳ್ಳಾಪುರದ ಮೇಲಿನ ಪ್ರೀತಿ, ಅಭಿಮಾನ ದೊಡ್ಡದು. ನಿಮ್ಮ ಪ್ರೀತಿಗೆ ನಾನು ಚಿರಋಣಿ’ ಎಂದು ಹೇಳಿದರು.
ಬಳಿಕ ಸಿನಿಮಾ ಸಂಭಾಷಣೆ ಹಾಗೂ ಹಾಡುಗಳನ್ನ ಹೇಳಿ ಅಭಿಮಾನಿಗಳನ್ನ ರಂಜಿಸಿದರು. ಹಾಡಿನ ಜೊತೆಗೆ ಒಂದೆರೆಡು ಹೆಜ್ಜೆ ಹಾಕಿದರು. ಶಿವಣ್ಣನ ಹಾಡಿಗೆ ಅಭಿಮಾನಿಗಳು ಶಿಳ್ಳೆ, ಚಪ್ಪಾಳೆ ಹೊಡೆದರು. ಅವರ ಹಾಡಿಗೆ ತಾವೂ ಧ್ವನಿಗೂಡಿಸಿದರು.
ಶಿವರಾಜ್ ಕುಮಾರ್ ಮತ್ತು ಗೀತಾ ದಂಪತಿಗೆ ಪೌರ ಸನ್ಮಾನ ನೀಡಲಾಯಿತು. ಬಳಿಕ ಬಾಗಿನ ಅರ್ಪಿಸಲಾಯಿತು.
ಶಾಸಕ ಧೀರಜ್ ಮುನಿರಾಜು ಅವರು ಮಾತನಾಡಿ ಡಾ.ರಾಜಕುಮಾರ್ ಅವರು ಕರ್ನಾಟಕ ಮತ್ತು ಕನ್ನಡಿಗರ ಶಕ್ತಿ.ಕಲೆಯ ಆರಾಧಕರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದಿದ್ದಾರೆ, ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಸದಭಿರುಚಿಯ ಚಿತ್ರಗಳನ್ನು ನೀಡಿದರು. ರಾಜ್ ಕುಟುಂಬ ಕಲೆಗಾಗಿ ತಮ್ಮ ಜೀವನ ಸಮರ್ಪಿಸಿಕೊಂಡಿದ್ದಾರೆ ಎಂದರು.
ನಗರಸಭೆ ಅಧ್ಯಕ್ಷೆ ಸುಮಿತ್ರ ಆನಂದ್, ಉಪಾಧ್ಯಕ್ಷ ಎಂ.ಮಲ್ಲೇಶ್, ಸ್ಥಾಯಿಸಮಿತಿ ಅಧ್ಯಕ್ಷ ವಿ.ಎಸ್.ರವಿಕುಮಾರ್, ಪೌರಾಯುಕ್ತ ಆರ್.ಕಾರ್ತಿಕೇಶ್ವರ, ನಗರಸಭೆ ಕಾರ್ಯಪಾಲಕ ಎಂಜಿನಿಯರ್ ರಾಮೇಗೌಡ, ನಗರಸಭೆ ಸದಸ್ಯ, ಚಿತ್ರ ನಿರ್ಮಾಪಕ ಕೆ.ಪಿ.ಶ್ರೀಕಾಂತ್, ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ರವಿ ಮಾವಿನಕುಂಟೆ, ಹರೀಶ್ಗೌಡ, ಎಸ್.ಆರ್. ಮುನಿರಾಜು, ಹಸನ್ಘಟ್ಟ ರವಿ, ಡಿ.ಪಿ. ಆಂಜನೇಯ, ತಾಲ್ಲೂಕು ಶಿವರಾಜ್ ಕುಮಾರ್ ಕನ್ನಡ ಸೇನಾ ಸಮಿತಿ ಅಧ್ಯಕ್ಷ ಜೆ.ಆರ್.ರಮೇಶ್, ಗೌರವ ಅಧ್ಯಕ್ಷ ಕೆ.ಆನಂದ್ ಕುಮಾರ್, ಪ್ರಧಾನ ಕಾರ್ಯದರ್ಶಿ ಎನ್.ಎಸ್.ಗುರುರಾಜ್. ಕಾರ್ಯಾಧ್ಯಕ್ಷ ಎ.ನಾರಾಯಣಸ್ವಾಮಿ, ಉಪಾಧ್ಯಕ್ಷ ಜಿ.ರಾಮು, ಸಮಿತಿಯ ಸಂಜಿವ, ರಂಗಸ್ವಾಮಿ, ಮಂಜುನಾಥ್, ಜೆ.ಆರ್.ರಾಘವೇಂದ್ರ ಭಾಗವಹಿಸಿದ್ದರು.