ಮುಂಬೈ: ಭಾರತೀಯ ಕ್ರಿಕೆಟ್ ತಾರೆ ಸ್ಮೃತಿ ಮಂಧಾನಾ ಮತ್ತು ಸಂಗೀತ ಸಂಯೋಜಕ ಪಲಾಶ್ ಮುಚ್ಚಲ್ ಅವರ ಬಹುನಿರೀಕ್ಷಿತ ವಿವಾಹ ಸಮಾರಂಭವು ಕೌಟುಂಬಿಕ
ತುರ್ತು ಪರಿಸ್ಥಿತಿಯ ಕಾರಣ ದಿಢೀರ್ ಮುಂದೂಡಲ್ಪಟ್ಟಿದೆ. ಸಮಾರಂಭಕ್ಕೆ ಸಿದ್ಧತೆಗಳು ನಡೆಯುತ್ತಿದ್ದಾಗಲೇ, ಸ್ಮೃತಿ ಮಂಧಾನಾ ಅವರ ತಂದೆ ಶ್ರೀನಿವಾಸ್ ಮಂಧಾನಾ ಅವರಿಗೆ ಹೃದಯಾಘಾತ ಸಂಭವಿಸಿದೆ. ಈ ಕಾರಣಕ್ಕಾಗಿ ವಿವಾಹ ಸಮಾರಂಭ ಅಂತಿಮ ಕ್ಷಣದಲ್ಲಿ ಮುಂದೂಡಿಕೆ ಮಾಡಲಾಗಿದೆ ಎಂದು ಸ್ಮೃತಿ ಅವರ ವ್ಯವಹಾರ ವ್ಯವಸ್ಥಾಪಕರಾದ ತುಹಿನ್
ಮಿಶ್ರಾ ಅವರು ದೃಢಪಡಿಸಿದ್ದಾರೆ.
ಸಿದ್ಧತೆ ವೇಳೆ ಹೃದಯಾಘಾತ: ತೀವ್ರ ನಿಗಾದಲ್ಲಿ ತಂದೆ ಮಹಾರಾಷ್ಟ್ರೀದ ಸಾಂಗ್ಲಿಯ ಸಮಡೋಲ್ನಲ್ಲಿರುವ ಮಂಧಾನಾ ಫಾರ್ಮ್ ಹೌಸ್ನಲ್ಲಿ ವಿವಾಹದ ಸಿದ್ಧತೆಗಳು ಬಿರುಸಿನಿಂದ ಸಾಗಿದ್ದವು. ಈ ಸಂದರ್ಭದಲ್ಲಿ ಶ್ರೀನಿವಾಸ್ ಮಂಧಾನಾ ಅವರು ಅಸ್ವಸ್ಥರಾದ ಕೂಡಲೇ ಅವರನ್ನು ತಕ್ಷಣ ಸಾಂಗ್ಲಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಿಗೆ
ತುರ್ತು ಚಿಕಿತ್ಸೆ ನೀಡಲಾಗುತ್ತಿದೆ. ಕುಟುಂಬದ ಆಪ್ತ ಮೂಲಗಳು ಖಚಿತ ಪಡಿಸಿದಂತೆ, ಈ ಸುದ್ದಿ ತಿಳಿಯುತ್ತಿದ್ದಂತೆ ಸ್ಮೃತಿ ಮಂಧಾನಾ ಮತ್ತು ಅವರ ಕುಟುಂಬದವರು ತಕ್ಷಣವೇ
ಆಸ್ಪತ್ರೆಗೆ ಧಾವಿಸಿದ್ದಾರೆ. ಸದ್ಯಕ್ಕೆ, ಶ್ರೀನಿವಾಸ್ ಮಂಧಾನಾ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಮತ್ತು ವೈದ್ಯರ ನಿಗಾದಲ್ಲಿದೆ ಎಂದು ಕುಟುಂಬ ಹೇಳಿದೆ.
ವಿವಾಹ ನಿರ್ವಹಣಾ ತಂಡವು ಇಂದು ನಡೆಯಬೇಕಿದ್ದ ಸಮಾರಂಭವನ್ನು ರದ್ದುಗೊಳಿಸಲಾಗಿದೆ ಎಂದು ಮಾಧ್ಯಮಗಳಿಗೆ ಅಧಿಕೃತವಾಗಿ ತಿಳಿಸಿದೆ. ಮದುವೆಸಮಾರಂಭಗಳು ಪುನರಾರಂಭಗೊಳ್ಳುವುದು ಯಾವಾಗ ಎಂಬ ಬಗ್ಗೆ ಇನ್ನೂ ಯಾವುದೇ ಮಾಹಿತಿ ಇಲ್ಲ. ಸ್ಮೃತಿ ಅವರ ವ್ಯವಸ್ಥಾಪಕರು ಈ ಬಗ್ಗೆ ಮಾತನಾಡಿ, “ಇಂದು ಬೆಳಗ್ಗೆ ಶ್ರೀನಿವಾಸ್
ಮಂಧಾನಾ ಅವರು ಉಪಾಹಾರಸೇವಿಸುತ್ತಿರುವಾಗ, ಅವರಿಗೆ ಅನಾರೋಗ್ಯ ಉಂಟಾಯಿತು. ಇದು ಸಾರ್ವತ್ರಿಕ ಎಂದು ನಾವು ಸ್ವಲ್ಪ ಸಮಯ ಕಾಯಿದೆವು, ಅವರು
ಗುಣಮುಖರಾಗುತ್ತಾರೆ ಎಂದು ಭಾವಿಸಿದ್ದೆವು. ಆದರೆ ಪರಿಸ್ಥಿತಿ ಹದಗೆಡುತ್ತಿರುವುದನ್ನು ಕಂಡು, ಯಾವುದೇ ಅಪಾಯ ತೆಗೆದುಕೊಳ್ಳದಿರಲು ನಿರ್ಧರಿಸಿ, ಆಂಬ್ಯುಲೆನ್ಸ್ ಕರೆದು ಆಸ್ಪತ್ರೆಗೆ ಕರೆದುಕೊಂಡು ಹೋದೆವು. ಈಗ ಅವರು ನಿಗಾದಲ್ಲಿದ್ದಾರೆ” ಎಂದು ಹೇಳಿದರು.



