ದೊಡ್ಡಬಳ್ಳಾಪುರ: ಮನುಷ್ಯನ ವ್ಯಕ್ತಿತ್ವ ವಿಕಸನಕ್ಕೆ ವಚನಗಳ ಅಧ್ಯಯನ ಸಹಕಾರಿಆಗುತ್ತವೆ. ವಚನಗಳು ಶರಣರ ಆತ್ಮ ವಿಮರ್ಶೆಯ ಮೂಲಕ ಮೂಡಿಬಂದಿವೆ. ಬಸವಣ್ಣನವರ ವಚನಗಳು ಜನರು ಜಗತ್ತನ್ನು ನೋಡುವ ದೃಷ್ಟಿಕೋನವನ್ನು ತಿಳಿಸುತ್ತವೆ ಎಂದು ತಾ.ಕಸಾಪ ಮಾಜಿ ಅಧ್ಯಕ್ಷ ಡಿ.ಶ್ರೀಕಾಂತ ತಿಳಿಸಿದರು.
ಇಲ್ಲಿನ ಶ್ರೀ ದೇವರಾಜ ಅರಸ್ ವ್ಯವಹಾರ ನಿರ್ವಹಣಾ ಮಹಾ ವಿದ್ಯಾಲಯದ ಆಂತರಿಕ ಗುಣಮಟ್ಟ ಭರವಸೆ ಕೋಶ-ಐಕ್ಯೂಎಸಿ ಸಹಯೋಗದಲ್ಲಿ ಕುವೆಂಪು ಸಾಹಿತ್ಯ ವೇದಿಕೆ, ಕನ್ನಡ ಹಾಗೂ ಸಂಶೋಧನಾ ವಿಭಾಗದ ನೇತೃತ್ವದಲ್ಲಿ ಬುಧವಾರ ನಡೆದ ಸಾಂಸ್ಕೃತಿಕ ನಾಯಕ ಬಸವಣ್ಣ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಜಾನಪದ ಸಾಹಿತ್ಯ ಬಿಟ್ಟರೆ, ಜನಸಾಮಾನ್ಯರನ್ನು ಸುಲಭವಾಗಿ ತಲುಪಿದ ಸಾಹಿತ್ಯ ವಚನ ಸಾಹಿತ್ಯ ಆಗಿದೆ. ಬಸವಣ್ಣನವರು ಎಲ್ಲಾ ಸಮುದಾಯವರನ್ನು ಅನುಭಾವ ಮಂಟಪದಲ್ಲಿ ಒಂದೆಡೆ ಸೇರಿಸುವ ಮೂಲಕ ಸಮಾನತೆ, ಸಹಬಾಳ್ವೆಯನ್ನು ಸಹಕಾರಗೊಳಿಸಿದರು. ಬಸವಣ್ಣನವರ ಸಂಘಟನಾಶಕ್ತಿ, ಸಾಮಾಜಿಕ ಕಳಕಳಿ, ವೈಚಾರಿಕ ಮನೋಭಾವ ಅನನ್ಯವಾದದ್ದು. ಅನುಭಾವ ಮಂಟಪ ಜಗತ್ತಿನ ಮೊದಲ ಸಂಸತ್ತು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಲಕ್ಷಾಂತರ ಶರಣರನ್ನು ಬಸವಣ್ಣನವರು ಮಾನವತಾವಾದಿಗಳಾಗಿ ಮಾಡಿದರು ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಲಯನ್ಸ್ ಕ್ಲಬ್ ಆಫ್ ಆರ್.ಎಲ್.ಜಾಲಪ್ಪ ಇನ್ಸ್ಟಿಟ್ಯೂಷನ್ಸ್ನ ಉಪಾಧ್ಯಕ್ಷ ಜೆ.ಆರ್.ರಾಕೇಶ್ ಮಾತನಾಡಿ, ವಿದ್ಯಾರ್ಥಿಗಳಿಗೆ ಸಮರ್ಪಕ ಭಾಷಾ ಜ್ಞಾನವನ್ನು ರೂಢಿಸುವುದು ಇಂದಿನ ಅಗತ್ಯವಾಗಿದೆ. ಕನ್ನಡವಾಗಲೀ, ಇಂಗ್ಲಿಷ್ ಆಗಲಿ ಪರಿಪಕ್ವವಾಗಿ ಕಲಿಯುವ ಮತ್ತು ಪರಿಣಾಮಕಾರಿಯಾಗಿ ಬಳಸುವ ಪ್ರಕ್ರಿಯೆ ಕಾಲೇಜು ಹಂತದಲ್ಲಿ ಆಗಬೇಕು. ಇದರಿಂದ ವಿವಿಧ ವಿಷಯಗಳ ಜ್ಞಾನ ವಿನಿಮಯಕ್ಕೆ ಸೂಕ್ತ ವೇದಿಕೆ ದೊರೆತಂತಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಪ್ರಾಂಶುಪಾಲ ಡಾ.ಆರ್.ನಾಗರಾಜ್ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ವಿಭಾಗ ಮುಖ್ಯಸ್ಥ ಡಾ.ಎಂ.ಚಿಕ್ಕಣ್ಣ, ಐಕ್ಯೂಎಸಿ ಸಂಯೋಜಕ ಕೆ.ಆರ್.ರವಿಕಿರಣ್, ಉಪಪ್ರಾಂಶುಪಾಲ ಕೆ.ದಕ್ಷಿಣಾಮೂರ್ತಿ, ನಿರ್ವಹಣಾ ವಿಭಾಗ ಮುಖ್ಯಸ್ಥೆ ಪಿ.ಚೈತ್ರ, ವಾಣಿಜ್ಯ ವಿಭಾಗ ಮುಖ್ಯಸ್ಥ ಸಿ.ಪಿ.ಪ್ರಕಾಶ್, ಉದ್ಯೋಗ ಕೌಶಲ ತರಬೇತಿ ಅಧಿಕಾರಿ ಬಾಬುಸಾಬಿ, ಉಪನ್ಯಾಸಕರಾದ ಭಾನುಶ್ರೀ, ವೆಂಕಟೇಶ್ ಮತ್ತಿತರರು ಉಪಸ್ಥಿತರಿದ್ದರು.