ಹೊಸಕೋಟೆ: ಗ್ರಾಮಗಳಲ್ಲಿ ದೇವಾಲಯ ನಿರ್ಮಿಸಿ ಧಾರ್ಮಿಕ ಕಾರ್ಯ ಮಾಡಿದರೆ, ಗ್ರಾಮಗಳಲ್ಲಿ ಶಾಂತಿ ಸುವ್ಯವಸ್ಥೆಯೊಂದಿಗೆ ಪರಸ್ಪರ ಸಂಬಂಧಗಳು ಉತ್ತಮಗೊಂಡು ಸಾಮಾಜಿಕ ಸ್ವಾಸ್ಥತೆಗೆ ಸಹಕಾರಿಯಾಗಲಿದೆ ಎಂದು ಸಂಸದ ಬಿ.ಎನ್.ಬಚ್ಚೇಗೌಡ ತಿಳಿಸಿದರು.
ತಾಲ್ಲೂಕಿನ ಮಲ್ಲಿಮಾಕನಪುರ ಗ್ರಾಮದಲ್ಲಿ ಸುಮಾರು 2 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಶ್ರೀ ಬಸವೇಶ್ವರಸ್ವಾಮಿ ಮತ್ತು ಶ್ರೀ ವೇಣುಗೋಪಾಲಸ್ವಾಮಿ ದೇವಾಲಯದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.ದೇವಾಲಯಗಳನ್ನು ನಿರ್ಮಾಣ ಹಾಗೂ ಗ್ರಾಮಗಳಲ್ಲಿ ಪಾಳುಬಿದ್ದ ದೇವಾಲಯಗಳನ್ನು ಜೀರ್ಣೋದ್ದಾರ ಮಾಡುವುದು ಒಂದು ಮಹತ್ವದ ಕಾರ್ಯವಾಗಿದೆ.
ಲ್ಲಿಮಾಕನಪುರ ಗ್ರಾಮಸ್ಥರು ಸತತ 10 ವರ್ಷಗಳಿಂದ ದೇವಾಲಯವನ್ನು ದಾನಿಗಳ ನೆರವಿನಿಂದ ನಿರ್ಮಿಸಿ ಜೀರ್ಣೋದ್ದಾರ ಮಾಡಿದ್ದಾರೆ. ಗ್ರಾಮಗಳಲ್ಲಿ ಧಾರ್ಮಿಕ ಕಾರ್ಯಗಳು ಹೆಚ್ಚೆಚ್ಚು ಆದರೆ ಮನುಷ್ಯರ ಬದುಕಿನಲ್ಲಿ ಸಾಮರಸ್ಯ ಉಂಟಾಗಿ ಶಾಂತಿ ನೆಮ್ಮದಿ ಲಭಿಸಲು ಸಾಧ್ಯವಾಗುತ್ತದೆ. ಎಂದರು.
ಶಾಸಕ ಶರತ್ ಬಚ್ಚೇಗೌಡ ಮಾತನಾಡಿ ಮಲ್ಲಿಮಾಕನಪುರ ಗ್ರಾಮ ಕಡಪ-ಬೆಂಗಳೂರು ಹೆದ್ದಾರಿ ಪಕ್ಕದಲ್ಲಿರುವ ಕಾರಣ ಹೆದ್ದಾರಿ ಪಕ್ಕದಲ್ಲಿ ದೇವಾಲಯ ನಿರ್ಮಾಣದಿಂದ ಈ ರಸ್ತೆಗೆ ಕಲಶಪ್ರಾಯವಾಗಿದ್ದು ನೋಡುಗರ ಕಣ್ಮನ ಸೆಳೆಯುವಂತಿದೆ. ದಾನಿಗಳ ನೆರವಿನಿಂದ ಪಾಳುಬಿದ್ದ ದೇವಾಲಯವನ್ನು ನಿರ್ಮಾಣ ಮಾಡಿದ್ದು ಮುಂದಿನ ದಿನಗಳಲ್ಲಿ ಸಮುದಾಯ ಭವನವನ್ನು ದೇವಾಲಯದ ಆವರಣದಲ್ಲಿ ನಿರ್ಮಿಸಿ ಬಡ ಹಾಗೂ ಮಧ್ಯಮವರ್ಗದವರಿಗೆ ಶುಭ ಸಮಾರಂಭ ಮಾಡಿಕೊಳ್ಳಲು ವ್ಯವಸ್ಥೆ ಕಲ್ಪಿಸಬೇಕು. ನನ್ನ ವೈಯುಕ್ತಿಕ ಅನುದಾನದೊಂದಿಗೆ ಸರಕಾರದಿಂದ ಸಹ ಆರ್ಥಿಕ ನೆರವು ದೊರಕಿಸಿಕೊಡುವ ಭರವಸೆ ನೀಡಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ತುಮಕೂರು ಸಿದ್ದಗಂಗಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ, ಕೆಂಗೇರಿ ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ಸಿ.ಕುಮಾರಚಂದ್ರಶೇಖರ ಸ್ವಾಮೀಜಿ, ಶಿರಾದ ಪಟ್ಟದನಾಯಕನಹಳ್ಳಿ ಸ್ಪಟಿಕಪುರಿ ಮಹಾಸಂಸ್ಥಾನ ಮಠದ ಶ್ರೀ ನಂಜಾವದೂತ ಮಹಾ ಸ್ವಾಮೀಜಿ, ಆದಿಚುಂಚನಗಿರಿ ಚಿಕ್ಕಬಳ್ಳಾಪುರ ಶಾಖ ಮಠದ ಶ್ರೀ ಮಂಗಳಾನಂದನಾಥ ಸ್ವಾಮೀಜಿ, ಬನಶಂಕರಿ ಕಾಳಿಕಾದೇವಿ ದೇವಸ್ಥಾನದ ಅರ್ಚಕರಾದ ಶ್ರೀ ವೇದಮೂರ್ತಿ ಮನೋಹರ ಸ್ವಾಮೀಜಿ ವಹಿಸಿ ಆಶೀರ್ವಚನ ನೀಡಿದರು.
ಬಿಡಿಸಿಸಿ ಬ್ಯಾಂಕ್ ನಿರ್ದೇಶಕರುಗಳಾದ ಬಿ.ವಿ.ಸತೀಶ್ಗೌಡ, ಕೃಷ್ಣಮೂರ್ತಿ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಬಿ.ವಿ.ರಾಜಶೇಖರ್ಗೌಡ, ಮಾಜಿ ನಿರ್ದೇಶಕ ಬಿ.ಎನ್. ಗೋಪಾಲಗೌಡ, ಟಿಎಪಿಸಿಎಂಎಸ್ ನಿರ್ದೇಶಕ ಎನ್.ಮಂಜುನಾಥ್, ಎಂಪಿಸಿಎಸ್ ಅಧ್ಯಕ್ಷ ಮಂಡೂರಪ್ಪ, ಗ್ರಾಮ ಪಂಚಾಯಿತಿ ಸದಸ್ಯ ತಮ್ಮಯ್ಯಗೌಡ, ಮುಖಂಡರಾದ ಹುಲ್ಲೂರು ರಾಜ್ಗೋಪಾಲ್, ಕಲ್ಕೆರೆ ಮಹದೇವಯ್ಯ, ಮಂದೀಪ್ಗೌಡ ಹಾಜರಿದ್ದರು.