ದೆಹಲಿ: ತಮಗೆ ಯಾವುದೇ ಜವಾಬ್ದಾರಿ ನೀಡಿದರೂ ಸಮರ್ಪಕವಾಗಿ ನಿರ್ವಹಿಸುವೆ ಎಂದು ಕೇಂದ್ರ ನೂತನ ಸಚಿವ ವಿ. ಸೋಮಣ್ಣ ಹೇಳಿದ್ದಾರೆ.
ಸಚಿವರಾದ ನಂತರ ದೆಹಲಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಮೇಲೆ ವಿಶ್ವಾಸವಿಟ್ಟು ಪಕ್ಷ ಗುರುತರವಾದ ಜವಾಬ್ದಾರಿ ವಹಿಸಿದೆ. ತಮ್ಮ ಮೇಲಿಟ್ಟಿರುವ ವಿಶ್ವಾಸಕ್ಕೆ ಚ್ಯುತಿ ಬಾರದಂತೆ ಕಾರ್ಯ ನಿರ್ವಹಿಸುವುದಾಗಿ ಅವರು ಹೇಳಿದ್ದಾರೆ.
ಯಾವುದೇ ಖಾತೆ ಮಹತ್ವದ್ದಲ್ಲ ಎಂದು ಹೇಳುವ ಹಾಗಿಲ್ಲ. ಎಲ್ಲಾ ಖಾತೆಯೂ ಅದರದೆ ಆದ ಮಹತ್ವ ಹೊಂದಿರುತ್ತದೆ. ಪ್ರಧಾನಿ ಮೋದಿ ಅವರು….
ಮಂತ್ರಿಗಳಾದವರು ಯಾರು ಊರಿಗೆ ಹೋಗಬೇಡಿ, ಕೆಲಸ ಮಾಡಿ ಕ್ಷೇತ್ರಗಳಿಗೆ ತೆರಳಿ ಎಂದಿದ್ದಾರೆ.ಹಾಗಾಗಿ ಏನಾದರೂ ಕೆಲಸ ನಿರ್ವಹಿಸಿ ಕ್ಷೇತ್ರಕ್ಕೆ ತೆರಳುತ್ತೇನೆ.
ಇಂದು ಪಕ್ಷದ ಹಿರಿಯರಾದ ಅಮಿತ್ ಶಾ,ನಡ್ಡಾ, ಸಂತೋಷ್ ಅವರನ್ನು ಭೇಟಿಯಾಗುತ್ತೇನೆ. ಅವರಿಂದ ಸಲಹೆ ಸಹಕಾರ ಪಡೆಯುತ್ತೇನೆ. ನನ್ನನ್ನು ಗೆಲ್ಲಿಸಿ ಸಚಿವರನ್ನಾಗಿ ಮಾಡಲು ಪ್ರಮುಖ ಪಾತ್ರ ವಹಿಸಿದ ಕ್ಷೇತ್ರದ ಜನತೆ, ಕಾರ್ಯಕರ್ತರು ಸೇರಿದಂತೆ ಮುಖಂಡರಿಗೆ ಧನ್ಯವಾದ ಸಮರ್ಪಿಸುತ್ತೇನೆ. ನಾನು ಗೆಲ್ಲಲು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರು ಸಾಕಷ್ಟು ಸಹಾಯ ಮಾಡಿದ್ದಾರೆ ಎಂದು ದೇವೇಗೌಡರ ನೆರವನ್ನು ಇದೇ ಸಂದರ್ಭದಲ್ಲಿ ಸ್ಮರಿಸಿದರು.
ಇದಕ್ಕೂ ಮುನ್ನ ದೆಹಲಿಯಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಪಕ್ಷದ ಹಿರಿಯ ಮುಖಂಡ ಬಿ.ಎಸ್.ಯಡಿಯೂರಪ್ಪ ಅವರನ್ನು ದೆಹಲಿಯಲ್ಲಿ ಸಂಸದ ಬಿ.ವೈ. ರಾಘವೇಂದ್ರ ಅವರ ನಿವಾಸದಲ್ಲಿ ಭೇಟಿಯಾಗಿ ಧನ್ಯವಾದ ಸಮರ್ಪಿಸಿದರು. ಈ ಸಂದರ್ಭದಲ್ಲಿ ಪಕ್ಷದ ಹಿರಿಯ ಮುಖಂಡ ಹಾಗೂ ಸಂಸದ ಗೋವಿಂದಕಾರಜೋಳ ಹಾಗೂ ಬಿ.ವೈ. ರಾಘವೇಂದ್ರ ಅವರು ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ಯಡಿಯೂರಪ್ಪ ಅವರು ಸೋಮಣ್ಣ ಅವರಿಗೆ ಶುಭಾಶಯ ತಿಳಿಸಿದರು.