ತುಮಕೂರು: ದೇಶದ ಅಭಿವೃದ್ಧಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಇಚ್ಛೆ ಹಾಗೂ ದೂರದೃಷ್ಟಿಯಂತೆ ಸಾಮಾನ್ಯಜನರ ಅಗತ್ಯ ಸೌಲಭ್ಯಗಳಿಗಾಗಿ ಪ್ರಮಾಣಿಕವಾಗಿ ಕೆಲಸ ನಿರ್ವಹಿಸುವುದಾಗಿ ಕೇಂದ್ರ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ.
ಕೇಂದ್ರ ಸಚಿವರಾದ ನಂತರ ಇದೇ ಮೊದಲ ಬಾರಿಗೆ ಇಂದು ಬೆಳಿಗ್ಗೆ ಸಿದ್ದಗಂಗಾಮಠಕ್ಕೆ ಭೇಟಿ ನೀಡಿದ ಸೋಮಣ್ಣ ಶಿವಕುಮಾರ್ ಸ್ವಾಮಿಜೀಯವರ ಗದ್ದುಗೆಗೆ ನಮಸ್ಕರಿಸಿ ನಂತರ ಸಿದ್ದಲಿಂಗಾಸ್ವಾಮೀಜಿ ಅವರಿಂದ ಆಶೀರ್ವಾದ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.ತಮ್ಮನ್ನು ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರ ಮಂತ್ರಿಗಳನ್ನಾಗಿ ಮಾಡಿದ್ದಾರೆ.
ಅದಕ್ಕಾಗಿ ಪ್ರಧಾನಿಯವರಿಗೆ ಕೇಂದ್ರದ ಗೃಹಮಂತ್ರಿ ಅಮಿತ್ ಶಾ ಮತ್ತಿತರ ನಾಯಕರು ಸೇರಿದಂತೆ ಎನ್ಡಿಎ ಒಕ್ಕೂಟದ ಪ್ರಮುಖರಾದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಎಚ್.ಡಿ.ಕುಮಾರಸ್ವಾಮಿ ಮತ್ತಿತರ ನಾಯಕರಿಗೆ ಧನ್ಯವಾದ ಸಮರ್ಪಿಸುತ್ತೇನೆ.
ಇಂದು ತಾವು ಜಿಲ್ಲೆಯ ಹರಗುರು ಚರಮೂರ್ತಿಗಳ ದರ್ಶನ ಪಡೆದು ಆಶೀರ್ವಾದ ಪಡೆಯಲಿದ್ದೇನೆ. ಮಧುಗಿರಿ ತಾಲೂಕಿನ ಚಿನ್ನೇನಹಳ್ಳಿಯಲ್ಲಿ ಕಲುಷಿತ ನೀರು ಸೇವನೆಯಿಂದ ಅಸ್ವಸ್ಥಗೊಂಡು ಚಿಕಿತ್ಸೆ ಪಡೆಯುತ್ತಿರುವ ಅಸ್ವಸ್ಥರನ್ನು ಜಿಲ್ಲಾಸ್ಪತ್ರಗೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಲಿದ್ದೇನೆ.
ಘಟನೆಗೆ ಸಂಬಂಧಪಟ್ಟಂತೆ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದೇನೆ. ಪರಮೇಶ್ವರ್ ಅವರು ಪ್ರಕರಣದ ವರದಿಯನ್ನು ಜಿಲ್ಲಾಧಿಕಾರಿಯವರು ತಲುಪಿಸಲಿದ್ದಾರೆ ಎಂದು ತಿಳಿಸಿದ್ದಾರೆ.ವರದಿ ಪರಿಶೀಲಿಸಿ ಸೂಕ್ತ ಕ್ರಮ ಜರುಗಿಸಲಿದ್ದೇನೆ ಎಂದು ಸೋಮಣ್ಣ ತಿಳಿಸಿದ್ದಾರೆ. ಭಾನುವಾರ ಮತ್ತೆ ತುಮಕೂರಿಗೆ ಭೇಟಿ ನೀಡಲಿದ್ದೇನೆ. ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಮತ್ತು ಜೆಡಿಎಸ್ ಎರಡು ಪಕ್ಷಗಳಿಂದ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದೇನೆ ಎಂದು ಹೇಳಿದ್ದಾರೆ.
ಈ ಸಂದರ್ಭದಲ್ಲಿ ಮಾಜಿ ಸಂಸದ ಜಿ. ಎಸ್. ಬಸವರಾಜ್, ಮಾಜಿ ಸಚಿವ ಸೊಗಡು ಶಿವಣ್ಣ, ಶಾಸಕರಾದ ಜ್ಯೋತಿಗಣೇಶ್, ಬಿ.ಸುರೇಶ್ಗೌಡ, ಜಿಲ್ಲಾ ಬಿಜೆಪಿ ಜೆಡಿಎಸ್ ಅಧ್ಯಕ್ಷರಾದ ಹೆಬ್ಬಾಕ ರವಿಶಂಕರ್, ಟಿ.ಆರ್. ಆಂಜಿನಪ್ಪ ಮತ್ತು ಎರಡು ಪಕ್ಷಗಳ ಪ್ರಮುಖ ಮುಖಂಡರು ಹಾಜರಿದ್ದರು.