ಹೊಸಕೋಟೆ: ತಾಲೂಕಿನ ಸೂಲಿಬೆಲೆಯ ವಾಲ್ಮಿಕಿ ನಗರದಲ್ಲಿ ಡಿ.9ರಂದು ನಡೆದ ವೃದ್ದ ದಂಪತಿಗಳ ಕೊಲೆ ಪ್ರಕರಣ ಸಾರ್ವಜನಿಕರಲ್ಲಿ ಸಾಕಷ್ಟು ಕುತೂಹಲ ಮೂಡಿಸಿದ್ದು ಆಸ್ತಿಯಲ್ಲಿ ಮಗನಿಗೆ ಪಾಲು ನೀಡಿಲ್ಲ ಎಂಬ ಕಾರಣಕ್ಕಾಗಿ ಸೊಸೆ ಹಾಗೂ ಮೊಮ್ಮಕ್ಕಳು ಸೇರಿ ಇವರಿಬ್ಬರನ್ನೂ ಕೊಲೆ ಮಾಡಿರುವುದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ ಎಂದು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದರು.
ವಾಲ್ಮೀಕಿ ನಗರದ ನಿವಾಸಿಗಳಾದ ರಾಮಕೃಷ್ಣಪ್ಪ (70), ಮುನಿರಾಮಕ್ಕ (65) ಕೊಲೆಯಾದ ದುರ್ದೈವಿಗಳು. ಮೃತರ ಮಗಳು ಶಕುಂತಲಾ ನೀಡಿದ ದೂರಿನ ಮೇರೆಗೆ ಮಗ ನರಸಿಂಹಮೂರ್ತಿ, ಸೊಸೆ ಭಾಗ್ಯರನ್ನು ಸೂಲಿಬೆಲೆ ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಆಸ್ತಿ ಪಾಲು ನೀಡಿಲ್ಲ ಎಂದು ಸೊಸೆ ಹಾಗೂ ಮೊಮ್ಮಕ್ಕಳು ಸೇರಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.
ವೃದ್ಧ ದಂಪತಿಗಳ ಕೊಲೆಗೆ ಸಂಬಂಧಿಸಿ ದಂತೆ ಪೊಲೀಸರು ನರಸಿಂಹಮೂರ್ತಿಯನ್ನ ಮತ್ತಷ್ಟು ವಿಚಾರಣೆಗೆ ನಡೆಸಿದ್ದಾಗ ಭಯಾನಕ ಸತ್ಯ ಹೊರಗೆ ಬಂದಿದೆ. ಅಸಲಿಗೆ ನರಸಿಂಹಮೂರ್ತಿ ಕೊಲೆಯನ್ನ ಮಾಡಿಯೇ ಇರಲಿಲ್ಲ. ಆದರೆ ಕೊಲೆಯನ್ನ ಮಾಡಿದ್ದು ಆತನ ಪತ್ನಿ ಭಾಗ್ಯ, ಮಗಳು ವರ್ಷ (20) ಮತ್ತು ಅಪ್ರಾಪ್ತ ವಯಸ್ಸಿನ ಮಗನಾಗಿದ್ದ. ಟ್ರೇಡಿಂಗ್ ವ್ಯವಹಾರ ಮಾಡುತ್ತಿದ್ದ ನರಸಿಂಹಮೂರ್ತಿ 1 ಕೋಟಿ ರೂ.ಗಳಿಗೂ ಹೆಚ್ಚಿನ ಸಾಲ ಮಾಡಿಕೊಂಡಿದ್ದನು. ಸಾಲ ತೀರಿಸಲು ಹೆತ್ತವರ ಬಳಿ ಅಸ್ತಿಪಾಲು ಕೇಳುವಂತೆ ಗಂಡನಿಗೆ ಭಾಗ್ಯ ಹೇಳಿದ್ದು, ನರಸಿಂಹಮೂರ್ತಿ ಹೆತ್ತವರ ಬಳಿ ಅಸ್ತಿ ಭಾಗ ಮಾಡುವಂತೆ ಕೇಳಿದರೂ ಸಹ ಕೊಟ್ಟಿರಲಿಲ್ಲ, ಇದೇ ವೇಳೆ ವೃದ್ಧ ದಂಪತಿ ಹೆಣ್ಣು ಮಕ್ಕಳಿಗೆ ಅಸ್ತಿ ಕೊಡಲು ಮುಂದಾಗಿದ್ರು, ಇದು ಭಾಗ್ಯಳನ್ನು ಕೆರಳುವಂತೆ ಮಾಡಿತ್ತು.
ಗಂಡ ರಾತ್ರಿ ಮನೆಗೆ ಬಂದಾಗ ಅತ್ತೆ ಮಾವನನ್ನ ಕೊಲೆ ಮಾಡಿರುವ ವಿಚಾರವನ್ನು ತಿಳಿಸಿದ್ದಾರೆ. ನರಸಿಂಹಮೂರ್ತಿ ಕೆಲ
ಕಾಲ ಚಿಂತಿಸಿ, ಕಾನೂನು ಕುಣಿಕೆಯಿಂದ ತಪ್ಪಿಸಿಕೊಳ್ಳಲು ಕುಟುಂಬ ಸಮೇತ ಆತ್ಮಹತ್ಯೆಗೆ ಶರಣಾಗಬೇಕು ಇಲ್ಲವಾದರೆ ಊರು ಬಿಟ್ಟು ತಲೆಮರೆಸಿಕೊಳ್ಳುವುದೆ, ಪೊಲೀಸ್ ಠಾಣೆಗೆ ತೆರಳಿ ಶರಣಾಗುವುದೆ ಎಂಬ ಬಗ್ಗೆ ನಿರ್ಧಾರ ಮಾಡುತ್ತಿದ್ದಾಗ ಮೃತರ ಹೆಣ್ಣುಮಕ್ಕಳು, ಗ್ರಾಮಸ್ಥರು ಬಂದ ಹಿನ್ನೆಲೆ ಪೊಲೀಸರೇ ಸ್ಥಳಕ್ಕೆ ಬರುವಂತಾಯಿತು ಎಂದು ವಿಚಾರಣೆ ವೇಳೆ ನರಸಿಂಹಮೂರ್ತಿ ಹೇಳಿಕೆ ನೀಡಿರುವುದಾಗಿ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದರು.
ಗಂಡ ನರಸಿಂಹಮೂರ್ತಿ ಕೆಲಸ ನಿಮಿತ್ತ ಬೇರೆಡೆ ಹೋಗಿದ್ದ, ಡಿಸೆಂಬರ್ 9ರ ರಾತ್ರಿ ಭಾಗ್ಯ ತನ್ನ ಇಬ್ಬರು ಮಕ್ಕಳನ್ನು ಕರೆದುಕೊಂಡು ಅತ್ತೆ, ಮಾವನ ಮನೆಗೆ ಹೋಗಿದ್ದಾಳೆ, ಮನೆಯಲ್ಲಿದ್ದ ಅತ್ತೆ ಮುನಿರಾಮಕ್ಕನ ತಲೆಗೆ ಕಬ್ಬಿಣದ ರಾಡ್ನಿಂದ ಹೊಡೆದು ಸಾಯಿಸಿದ್ದಾರೆ, ಅರ್ಧಗಂಟೆಯ ನಂತರ ಬಂದ ರಾಮಕೃಷ್ಣಪ್ಪನ ತಲೆಗೆ ರಾಡ್ನಿಂದ ಹೊಡೆದು ಕೊಲೆಗೈದು ಮನೆಗೆ ಹಿಂದಿರುಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನರಸಿಂಹಮೂರ್ತಿ, ಭಾಗ್ಯ ಮತ್ತು ವರ್ಷಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ, ಅಪ್ತಾಪ್ತ ವಯಸ್ಸಿನ ಬಾಲಕನನ್ನ ಬಾಲಾ ಮಂದಿರಕ್ಕೆ ದಾಖಲಿಸಲಾಗಿದೆ.