ಬಾಲಿವುಡ್ನಲ್ಲಿ ಆರಕ್ಕೇರದ ಮೂರಕ್ಕಿಳಿಯದ ನಾಯಕಿ ಅಂದ್ರೆ ಅದು ಸೋನಾಕ್ಷಿ ಸಿನ್ಹಾ. ಸಲ್ಮಾನ್ ಖಾನ್ ಅಭಿನಯದ ದಬಂಗ್ ಚಿತ್ರದ ಮೂಲಕ ಬಣ್ಣದ ಕನಸು ಕಾಣಲು ಶುರು ಮಾಡಿದ ಸೋನಾಕ್ಷಿ ಸಿನ್ಹಾ ನಿನ್ನೆ ತಮ್ಮ ಬಹುಕಾಲದ ಗೆಳೆಯನ ಜೊತೆ ಮದುವೆಯಾಗಿದ್ದಾರೆ.
ಇನ್ನೂ ಸೋನಾಕ್ಷಿ ಸಿನ್ಹಾ ಅವರದ್ದು ಅಂತರ ಧರ್ಮಿಯ ವಿವಾಹ. ಹೀಗಾಗಿ ಇವರ ಮದುವೆ ಹೇಗೆ ನಡೆಯಲಿದೆ ಅನ್ನುವ ಕುತೂಹಲ ಅನೇಕರಲ್ಲಿತ್ತು. ಆ ಕುತೂಹಲಕ್ಕೆ ತೆರೆ ಎಳೆದ ಸೋನಾಕ್ಷಿ ಮತ್ತು ಜಹೀರ್ ಇಕ್ಬಾಲ್ ರಿಜಿಸ್ಟರ್ ಮದುವೆ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಯಾವುದೇ ಧರ್ಮದ ಶಾಸ್ತ್ರಗಳ ಆಚರಣೆ ಮಾಡದೇ ತಮ್ಮ ಹೊಸ ಬದುಕನ್ನ ಆರಂಭ ಮಾಡಿದ್ದಾರೆ
ಅಂದ್ಹಾಗೇ ಜಹೀರ್ ಇಕ್ಬಾಲ್ ಜೊತೆ ಸೋನಾಕ್ಷಿ ಸಿನ್ಹಾ ಮದುವೆಯಾಗಲು ಮುಂದಾದಾಗ, ಅನೇಕರು ಕೆರಳಿ ಕೆಂಡವಾಗಿದ್ದರು. ಬಾಲಿವುಡ್ನ ಹಿರಿಯ ನಾಯಕ ಶತ್ರುಘ್ನ ಸಿನ್ಹಾ ಮಗ್ಳಾಗಿ ಅನ್ಯ ಧರ್ಮದ ಹುಡುಗನ ಜೊತೆ ಮದುವೆಯಾಗಲು ನಾಚಿಕೆಯಾಗಲ್ವಾ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.ಮನೆಯ ಹೆಸರು ರಾಮಾಯಣ. ಇಷ್ಟೇ ಅಲ್ಲ ಶತ್ರುಘ್ನ ಸಿನ್ಹಾ ಅವರಿಗೆ ರಾಮ್, ಭರತ್ ಮತ್ತು ಲಕ್ಷ್ಮಣ ಹೆಸರಿನ ಮೂವರು ಸೋದರರಿದ್ದಾರೆ. ಇನ್ನೂ ಶತ್ರುಘ್ನಾ ಸಿನ್ಹಾ ತಮ್ಮ ಇಬ್ಬರು ಮಕ್ಕಳಿಗೆ ಲವ ಮತ್ತು ಕುಶ ಎಂದು ಹೆಸರಿಟಿದ್ದಾರೆ.
ಮನೆಯ ವಾತಾವರಣ ಹೀಗೆ ಇದ್ದರೂ ಸೋನಾಕ್ಷಿ ಸಿನ್ಹಾ ಈ ಜಹೀರ್ ಇಕ್ಬಾಲ್ ಜೊತೆ ಮದುವೆಯಾಗ್ತಿದ್ದಾರೆ ಅಂದರೆ ಇದರ ಹಿಂದೆ ಲವ್ ಜಿಹಾದ್ ಪಿತೂರಿ ಇದೆ ಎಂದಿದ್ದರು. ಮನೆಯಲ್ಲಿ ಡಬಲ್ ಡೋರ್ ಪ್ರಿಡ್ಜ್ ಎಲ್ಲ ಇಡಬೇಡಿ ಎಂಬ ಸಲಹೆಯನ್ನೂ ಕೂಡ ಸೋನಾಕ್ಷಿಗೆ ಕೊಟ್ಟಿದ್ದರು. ಸೋನಾಕ್ಷಿ ಸಿನ್ಹಾ ಅವರನ್ನು ಟ್ರೋಲ್ ಮಾಡಿದ್ದರು.
ಈ ಕಾರಣಕ್ಕೆ ಮದುವೆಯಾದ ನಂತರ ತಮ್ಮ ಅಭಿಮಾನಿಗಳಿಗಾಗಿ, ಹಿತೈಷಿಗಳಿಗಾಗಿ ಮದುವೆಯ ಸಂಭ್ರಮದ ಫೋಟೋ ಹಂಚಿಕೊಂಡಿರುವ ಸೋನಾಕ್ಷಿ ಸಿನ್ಹಾ ಸದ್ಯಕ್ಕೆ ಕಾಮೆಂಟ್ ಬಾಕ್ಸ್ ಆಫ್ ಮಾಡಿದ್ದಾರೆ. ಫೋಟೋ ಜೊತೆ ಜೂನ್ 23ರಂದೇ ಮದ್ವೆಯಾಗಲು ಕಾರಣವೇನು ಅನ್ನುವುದನ್ನೂ ವಿವರಿಸಿದ್ದಾರೆ.
ತಮ್ಮ ಮದುವೆಯ ದಿನದ ಹಿಂದಿನ ರಹಸ್ಯವನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಸೋನಾಕ್ಷಿ ಸಿನ್ಹಾ, 07 ವರ್ಷದ ಹಿಂದೆ ಇದೇ ದಿನದಂದು ಪರಿಶುದ್ಧ ಪ್ರೀತಿ ನಮ್ಮಿಬ್ಬರ ಕಣ್ಣಲ್ಲಿ ಕಂಡಿತ್ತು.
ಆ ಪ್ರೀತಿ ಹಾಗೇ ಇರಬೇಕೆಂದು ನಾವು ಅಂದೇ ನಿರ್ಧರಿಸಿದೆವು. ಎಲ್ಲಾ ಸವಾಲುಗಳು ಮತ್ತು ಗೆಲುವಿಗೂ ಆ ಪ್ರೀತಿ ಮಾರ್ಗದರ್ಶನ ಮಾಡಿತು. ಅದು ಈ ಕ್ಷಣಕ್ಕೆ ಕಾರಣವಾಯಿತು. ಅಲ್ಲಿ ನಮ್ಮ ಎರಡೂ ಕುಟುಂಬಗಳು ಮತ್ತು ನಮ್ಮ ಎರಡೂ ದೇವರುಗಳ ಆಶೀರ್ವಾ ದದೊಂದಿಗೆ ನಾವು ಈಗ ದಂಪತಿಗಳಾಗಿದ್ದೇವೆ ಎಂದಿದ್ದಾರೆ.
ಇನ್ನೂ ಸೋನಾಕ್ಷಿ ಸಿನ್ಹಾ ಮತ್ತು ಜಹೀರ್ ಮದುವೆ, ಸೋನಾಕ್ಷಿ ಸಿನ್ಹಾ ಅವರ ತಂದೆ ಮತ್ತು ಬಾಲಿವುಡ್ನ ಹಿರಿಯ ನಟ ಶತ್ರುಘ್ನ ಸಿನ್ಹಾ ಅವರ ಕುಟುಂಬಕ್ಕೆ ಇಷ್ಟವಿರಲಿಲ್ಲ ಎಂಬ ಮಾತುಗಳು ಹರಿದಾಡಿದ್ದವು. ಖುದ್ದು ಶತ್ರುಘ್ನ ಸಿನ್ಹಾ ಕೂಡ ನಮಗೆ ಆಮಂತ್ರಣ ನೀಡಿದರೆ ನಾನು ಮತ್ತು ನನ್ನ ಪತ್ನಿ ಇಬ್ಬರೂ ಹೋಗಿ ಹಾರೈಸಿ ಬರುತ್ತೇವೆ ಯಾಕೆಂದರೆ ಹೆತ್ತವರಾಗಿ ನಮಗೆ ಆಕೆಯ ಸಂತೋಷ ಮುಖ್ಯವೆಂದಿದ್ದರು. ಹೀಗಾಗಿ ಮಗಳ ಮದುವೆಗೆ ಶತ್ರುಘ್ನ ಸಿನ್ಹಾ ಬರುತ್ತಾರಾ ಅನ್ನುವ ಪ್ರಶ್ನೆ ಅನೇಕರಲ್ಲಿತ್ತು.