ನೆಲಮಂಗಲ: ನಗರದ ಪ್ರತಿಷ್ಠಿತ ಮಕ್ಕಳ ಆಸ್ಪತ್ರೆಯಲ್ಲಿ ಒಂದಾದ ಆಸರೆ ಆಸ್ಪತ್ರೆಯಲ್ಲಿ ಸುಮಾರು 74 ಭ್ರೂಣಹತ್ಯೆ ಪ್ರಕರಣಗಳು ನಡೆದಿವೆ ಎನ್ನಲಾದ ಘಟನೆಯು ತಡವಾಗಿ ಬೆಳಕಿಗೆ ಬಂದಿದೆ.
ಘಟನೆ ಹಿನ್ನಲೆ: ನಗರದ ಮುಖ್ಯರಸ್ತೆಯಲ್ಲಿರುವ ಆಸರೆ ಆಸ್ಪತ್ರೆಯಲ್ಲಿ ಕಳೆದ 2021ನೇ ಸಾಲಿನಿಂದ ಇಲ್ಲಿಯವರೆಗೂ ಸುಮಾರು 74 ಗರ್ಭಪಾತಗಳನ್ನು ನಡೆಸಿರುವುದಾಗಿ ದಾಖಲೆಗಳನ್ನು ನಿರ್ವಹಣೆ ಮಾಡಿರುವುದಿಲ್ಲ. ಜತೆಗೆ ಆಸ್ಪತ್ರೆಯಲ್ಲಿ ಗರ್ಭಪಾತ ನಡೆಸಿದ ಬಗ್ಗೆ ಮಾಸಿಕ ವಿವರಗಳನ್ನು ಜಿಲ್ಲಾ ಪ್ರಾಧಿಕಾರಕ್ಕೆ ಸಲ್ಲಿಸಿರುವುದಿಲ್ಲ.
ಈ ಮೂಲಕ ಆಸ್ಪತ್ರೆಯವರೂ ಗರ್ಭಪಾತ ಕಾಯ್ದೆ 1971ರ ನಿಯಮಗಳನ್ನು ಹಾಗೂ ಎಂಟಿಪಿ ಪರವಾನಗಿ ಯನ್ನು ಪಡೆದುಕೊಳ್ಳದೇ ನಿಯಮ ಉಲ್ಲಂಘಿಸಿದ್ದಾರೆಂದು ಕಳೆದ ಫೆ.20ರಂದು ರಾತ್ರಿ 8:30ಕ್ಕೆ ಗ್ರಾಮಾಂತರ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿಸಿದ್ದಾರೆ.
ಆಸ್ಪತ್ರೆಗೆ ನೋಟಿಸ್: ಕಳೆದ 2021ರ ಜ.1ರಿಂದ ಇಲ್ಲಿನವರೆಗೂ ಸಿಸಿಟಿಸಿ ಫುಟೇಜ್ ಹಾಗೂ ಆಸ್ಪತ್ರೆಯ ನೋಂದಣ ಪ್ರಮಾಣಪತ್ರ ನೀಡಬೇಕು. ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆಯ ನೋಂದಣ , ಕರ್ತವ್ಯ ನಿರ್ವಹಿಸಿದ್ದ ವೈದ್ಯರು, ಸಿಬ್ಬಂಧಿಗಳ ವಿವರ ಹಾಗೂ ಗರ್ಭಪಾತಗಳಿಗೆ ಸಂಬಂಧಿಸಿದಂತೆ ಅಲ್ಟ್ರಾ ಸೌಂಡ್ ರಿ ರ್ಪೋ ನೀಡಬೇಕು. ಜತೆಗೆ ಆಸ್ಪತ್ರೆಯಲ್ಲಿ ನಡೆಸಿದ್ದ ಗರ್ಭಪಾತಗಳಿಗೆ ಸಂಬಂಧಿಸಿದಂತೆ ಜಿಲ್ಲಾ ಪ್ರಾಧಿಕಾರಕ್ಕೆ ಸಲ್ಲಿಸಿದ್ದ ಮಾಸಿಕ ವಿವರಗಳನ್ನು 3ದಿನಗಳಲ್ಲಿ ನೀಡುವಂತೆ ಫೆ.22ರಂದು ಆಸ್ಪತ್ರೆ ಮುಖ್ಯಸ್ಥ ಡಾ.ರವಿಕುಮಾರ್ ಅವರಿಗೆ ನಗರ ಪೊಲೀಸ್ಠಾಣೆ ಮೂಲಕ ಜಿಲ್ಲಾ ಆರೋಗ್ಯ ಕಲ್ಯಾಣಾಧಿಕಾರಿಗಳು ನೋಟಿಸ್ ನೀಡಿದ್ದರಂತೆ.
ವೈದ್ಯರು ನಾಪತ್ತೆ: ಕಳೆದ 2ವರ್ಷದಿಂದ ಸುಮಾರು 74 ಭ್ರೂಣ ಹತ್ಯೆ ಪ್ರಕರಣಗಳು ನಡೆದಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ನೋಟಿಸ್ ನೀಡಿದ್ದು ಮಾ.06ರಂದು ಬುಧವಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಆಸ್ಪತ್ರೆ ಆಡಳಿತ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಹಾಗೂ ವೈದ್ಯ ರವಿಕುಮಾರ್ ನಾಪತ್ತೆ ಯಾಗಿದ್ದಾರೆ ಎನ್ನಲಾಗಿದೆ.
ಆಸ್ಪತ್ರೆಯಿಂದ ವೈದ್ಯರು ಸ್ಥಳದಿಂದ ಪರಾರಿಯಾದ ಹಿನ್ನಲೆ ಯಲ್ಲಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ರೋಗಿಗಳು ಪರದಾಡುವ ಸ್ಥಿತಿ ನಿರ್ಮಾಣ ಆಗಿತ್ತೆನ್ನಲಾಗಿದ್ದು ಬಳಿಕ ಆಸ್ಪತ್ರೆಯ ಸಿಬ್ಬಂಧಿಗಳು ರೋಗಿಗಳ ಯೋಗಕ್ಷೇಮ ವಿಚಾರಣೆ ಮಾಡಿದರು. ಸಾರ್ವಜನಿಕರು ಕೂಡ ಆಸ್ಪತ್ರೆ ಮುಂಭಾಗದಲ್ಲಿ ಆಗಮಿಸಿದ್ದು ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ಮಾಹಿತಿ: ಎಂಟಿಪಿ ಪರವಾನಗಿ ಇಲ್ಲದೆ ಕಾನೂನು ಬಾಹಿರವಾಗಿ ಗರ್ಭಪಾತವನ್ನು ನಡೆಸಿದ್ದ ಹಿನ್ನಲೆ ಆಸರೆ ಆಸ್ಪತ್ರೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆ ಹಾಗೂ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಹಂತ ಹಂತವಾಗಿ ತನಿಖೆ ನಡೆಯುತ್ತಿದ್ದು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸುನೀಲ್ಕುಮಾರ್ ಮಾಹಿತಿ ನೀಡಿದರು.