ಕೋಲ್ಕತ್ತಾ: ವಿಶ್ವಕಪ್ ಕ್ರಿಕೆಟ್ ಸೆಮಿಫೈನಲ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ದಕ್ಷಿಣ ಆಫ್ರಿಕಾ ಸೋಲಲು ನಾಯಕ ಟೆಂಬ ಬವುಮಾ ಅವರ ನಿರ್ಧಾರವೇ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.
ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾದ ಮಧ್ಯಮ ಕ್ರಮಾಂಕದವರನ್ನು ಔಟ್ ಮಾಡಿದ್ದು ಅರೆಕಾಲಿಕ ಸ್ಪಿನ್ನರ್ ಟ್ರಾವಿಸ್ ಹೆಡ್.
ಲೀಗ್ನಲ್ಲಿ ವೇಗದ ಶತಕ ಸಿಡಿಸಿದ್ದ ಹೆನ್ರಿಕ್ ಕ್ಲಾಸನ್ 47 ರನ್(48 ಎಸೆತ, 4 ಬೌಂಡರಿ, 2 ಸಿಕ್ಸರ್) ಗಳಿಸಿದ್ದಾಗ ಹೆಡ್ ಬೌಲ್ಡ್ ಮಾಡಿದರು. ಮರು ಎಸೆತದಲ್ಲೇ ಮಾರ್ಕೊ ಜಾನ್ಸೆನ್ ಅವರನ್ನು ಎಲ್ಬಿಗೆ ಕೆಡವಿದ್ದರು. ಸಮಯ ಕಳೆಯುತ್ತಿದ್ದಂತೆ ಪಿಚ್ ಸ್ಪಿನ್ಗೆ ಸಹಕಾರಿ ಆಗುತ್ತಿತ್ತು. ಈ ವಿಷಯ ತಿಳಿದಿದ್ದರೂ ಬವುಮಾ ಆರಂಭದಲ್ಲೇ ಸ್ಪಿನ್ನರ್ಗಳಿಗೆ ಬೌಲ್ ನೀಡಲೇ ಇಲ್ಲ.
ದಕ್ಷಿಣ ಆಫ್ರಿಕಾದ ಪರ ಸ್ಪಿನ್ನರ್ಗಳು ದಾಳಿಗೆ ಇಳಿದಿದ್ದು 14ನೇ ಓವರ್ನಲ್ಲಿ. 14ನೇ ಓವರಲ್ಲಿ ತಬ್ರೇಜ್ ಶಮ್ಮಿ ಬೌಲಿಂಗ್ಗಿಳಿದರೆ, 15ನೇ ಓವರ್ ಎಸೆದ ವಿಶ್ವನಂ.1 ಸ್ಪಿನ್ನರ್ ಕೇಶವ್ ಮಹಾರಾಜ್ ತಮ್ಮ ಮೊದಲ ಎಸೆತದಲ್ಲೇ ಹೆಡ್ರನ್ನು ಬೌಲ್ಡ್ ಮಾಡಿ ಆಸ್ಟ್ರೇಲಿಯಾಗೆ ಶಾಕ್ ನೀಡಿದ್ದರು.
ತಬ್ರೇಜ್ ಶಮ್ಮಿ 42 ರನ್ ನೀಡಿ 2 ವಿಕೆಟ್ ಪಡೆದರೆ ಕೇಶವ್ ಮಹಾರಾಜ್ 10 ಓವರ್ ಎಸೆದು 24 ರನ್ ನೀಡಿ 1 ವಿಕೆಟ್ ಪಡೆದರು. ಸಾಧಾರಣವಾಗಿ ಕ್ರಿಕೆಟ್ನಲ್ಲಿ 5 ಮಂದಿ ಬೌಲರ್ಗಳನ್ನು ಇಳಿಸುತ್ತಾರೆ. ಓರ್ವ ಆಲ್ರೌಂಡರ್ ಆಟಗಾರ 6ನೇ ಬೌಲರ್ ಆಗಿರುತ್ತಾನೆ. ಆದರೆ ಸೆಮಿಯಲ್ಲಿ ಏಕದಿನ ಕ್ರಿಕೆಟ್ನಲ್ಲಿ 726 ರೇಟಿಂಗ್ ಪಡೆದು ಅಗ್ರ ಸ್ಥಾನದಲ್ಲಿರುವ ಕೇಶವ್ ಮಹಾರಾಜ್ ಅವರನ್ನು 6ನೇ ಬೌಲರ್ ಆಗಿ ಇಳಿಸಿದ ಬವುಮಾ ನಿರ್ಧಾರ ಈಗ ಅಚ್ಚರಿಗೆ ಕಾರಣವಾಗಿದೆ.
ಒಂದು ವೇಳೆ ಆರಂಭದಲ್ಲೇ ಸ್ಪಿನ್ನರ್ಗಳಿಗೆ ಬೌಲ್ ನೀಡುತ್ತಿದ್ದರೆ ಡೇವಿಡ್ ವಾರ್ನರ್ ಮತ್ತು ಟ್ರಾವಿಸ್ ಹೆಡ್ಗೆ ರನ್ ಗಳಿಸಲು ಕಷ್ಟವಾಗುತ್ತಿತ್ತು. ದೊಡ್ಡ ಆರಂಭ ಸಿಗುತ್ತಿರಲಿಲ್ಲ ಎಂಬ ವಿಶ್ಲೇಷಣೆ ಈಗ ವ್ಯಕ್ತವಾಗುತ್ತಿದೆ. ಯಾಕೆಂದರೆ ಇವರಿಬ್ಬರು ಮೊದಲ ವಿಕೆಟಿಗೆ ಕೇವಲ 37 ಎಸೆತಗಳಲ್ಲೇ 61 ರನ್ ಚಚ್ಚಿದ್ದರು.