ಶಿಡ್ಲಘಟ್ಟ ಗ್ರಾಮಾಂತರ: ಬಣ್ಣದ ಜೋಳಗಳು, ಕೆಂಪು, ನೀಲಿ, ನೇರಳೆ ಮತ್ತು ಕಪ್ಪು ಈ ರೀತಿಯ ಬಣ್ಣಗಳನ್ನು ಹೊಂದಿರುವ ಜೋಳಗಳು ವಾಸ್ತವವಾಗಿ ಅಸ್ತಿತ್ವದಲ್ಲಿದೆ ಮತ್ತು ತಾಲ್ಲೂಕಿನ ಅಪ್ಪೇಗೌಡನಹಳ್ಳಿಯ ರೈತ ಎ.ಎಂ.ತ್ಯಾಗರಾಜ್ ಇವುಗಳನ್ನು ಬೆಳೆದಿದ್ದಾರೆ. ಈಗೀಗ ನಗರಗಳಲ್ಲಿ ಹಾಗೂ ವಿದೇಶಗಳಲ್ಲಿ ಇವನ್ನು ಹುರಿದು, ಬೇಯಿಸಿ ಮಾಡಿರುವ ತಿನಿಸುಗಳನ್ನು “ಸೂಪರ್-ಫುಡ್” ಎಂದು ಕರೆಯುತ್ತಾರೆ.
ಮೆಕ್ಸಿಕೋ ಮತ್ತು ಪೆರು ದೇಶಗಳ ಕೆಂಪು, ನೀಲಿ, ನೇರಳೆ ಮತ್ತು ಕಪ್ಪು ಬಣ್ಣಗಳ ಏಳು ಮೆಕ್ಕೆಜೋಳದ ತಳಿಗಳನ್ನು ತಾಲ್ಲೂಕಿನ ರೈತ ಎ.ಎಂ.ತ್ಯಾಗರಾಜ್ ಬೆಳೆದು ಯಶಸ್ಸು ಕಂಡಿದ್ದಾರೆ. ಇದೀಗ ಬೆಳೆ ಕಟಾವ್ ಮಾಡಲಾಗುತ್ತಿದ್ದು, ಕಡುಗೆಂಪು, ಕೆಂಪು, ನೇರಳೆ, ಹಳದಿ ಮತ್ತು ಕೆಂಪು – ಕಪ್ಪು ಮಿಶ್ರಿತ ಜೋಳದ ಕಾಳುಗಳನ್ನು ಹೊಂದಿರುವ ತೆನೆಗಳನ್ನು ನೋಡಲು ಸುತ್ತಮುತ್ತಲಿನ ರೈತರು ಬರುತ್ತಿದ್ದಾರೆ.
ರೈತ ಎ.ಎಂ.ತ್ಯಾಗರಾಜ್ ಈ ರೀತಿಯ ಜೋಳದ ತಳಿಗಳ ಎರಡೆರಡು ಬಿತ್ತನೆ ಬೀಜದ ತೆನೆಗಳನ್ನು ತಮ್ಮ ಸ್ನೇಹಿತರಾದ ಗಂಗಾವತಿಯ ಲಕ್ಷ÷್ಮಣ್ ಮತ್ತು ಅಮೆರಿಕೆಯ ಬಸವರಾಜ್ ಅವರಿಂದ ತರಿಸಿಕೊಂಡಿದ್ದಾರೆ. ತಮ್ಮ ಹತ್ತು ಗುಂಟೆ ಜಮೀನಿನಲ್ಲಿ ನಾಲ್ಕು ತಿಂಗಳ ಹಿಂದೆ ನಾಟಿ ಮಾಡಿದ್ದ ಇವರು, ಸ್ಥಳೀಯವಾಗಿ ಬೆಳೆಯುವ ಮೆಕ್ಕೆಜೋಳದಂತೆ ಈ ವಿಶೇಷ ತಳಿಯ ಜೋಳವನ್ನು ಬೆಳೆಸಿದ್ದಾರೆ. ಈ ಜೋಳಕ್ಕೆ ರಸಗೊಬ್ಬರದ ಬದಲಿಗೆ ಸಾವಯವ ಗೊಬ್ಬರ ಹಾಕಿದ್ದಾರೆ. ನಾಲ್ಕಾರು ತೆನೆಯಲ್ಲಿನ ಕಾಳುಗಳನ್ನು ನಾಟಿ ಮಾಡಿದ್ದ ರೈತನಿಗೆ ಇದೀಗ ಸುಮಾರು ೧೫೦ ಕೆ.ಜಿಯಷ್ಟು ಇಳುವರಿ ಬಂದಿದೆ.
ಈ ರೀತಿಯ ಜೋಳಗಳನ್ನು ಸುಮಾರು ೩೦೦೦ ವರ್ಷಗಳ ಹಿಂದೆಯೇ ದಕ್ಷಿಣ ಅಮೆರಿಕದಲ್ಲಿ ಬೆಳೆಯುತ್ತಿದ್ದರು ಎಂಬುದಕ್ಕೆ ದಾಖಲೆ ಸಿಗುತ್ತವೆ. ಮೆಕ್ಸಿಕೋ ದೇಶದಲ್ಲಿ ಕ್ರಿ.ಶ ೧೩೩೦ ರಿಂದ ೧೫೨೧ರವರೆಗೆ ಇದ್ದ ಅಜಟೆಕ್ ಜನಾಂಗದವರ ಮುಖ್ಯ ಆಹಾರವಾಗಿದ್ದ ಈ ಜೋಳದ ತಳಿಗಳು, ದಕ್ಷಿಣ ಅಮೆರಿಕದ ವಿವಿಧ ದೇಶಗಳಲ್ಲಿ ಈಗಲೂ ಆಹಾರ ಹಾಗೂ ಪಾನೀಯದ ರೂಪದಲ್ಲಿ ಬಳಕೆಯಲ್ಲಿವೆ.
ನಮ್ಮ ದೇಶದ ಮಿಜೋರಾಮ್ ರಾಜ್ಯದಲ್ಲಿ ಈ ಬಣ್ಣದ ಜೋಳಗಳನ್ನು ಬೆಳೆಯುತ್ತಾರೆ ಮತ್ತು ಆಹಾರವಾಗಿ ಬಳಸುತ್ತಾರೆ. ಮಿಜೋರಾಮ್ ಜನರು ಇವನ್ನು ಮಿಮ್ ಬಾನ್ (ಜಿಗುಟಾದ ಜೋಳ) ಎಂದು ಕರೆಯುತ್ತಾರೆ. ಈ ಪ್ರಭೇದಗಳು ಸಿಹಿ ಮತ್ತು ಒಗರಿನ ರುಚಿಯನ್ನು ಹೊಂದಿದ್ದು, ಬೇಯಿಸಿದಾಗ ರುಚಿ ಹೆಚ್ಚುತ್ತದೆ. ಫೀನಾಲಿಕ್ ಮತ್ತು ಆಂಥೋಸಯಾನಿನ್ ಗಳು ಅವುಗಳ ವಿಶಿಷ್ಟ ಬಣ್ಣಕ್ಕೆ ಕಾರಣವಾಗಿವೆ ಮತ್ತು ಅವುಗಳ ಪ್ರಮಾಣವನ್ನು ಅವಲಂಬಿಸಿ ಬಣ್ಣಗಳನ್ನು ಪಡೆದುಕೊಳ್ಳುತ್ತವೆ.
ಪೋಷಕಾಂಶಗಳ ಆಗರ:
ಮೆಕ್ಸಿಕೋ ಮತ್ತು ಪೆರು ದೇಶದಲ್ಲಿ ಹೆಚ್ಚಾಗಿ ಬೆಳೆಯುವ ಈ ವಿವಿಧ ಬಣ್ಣಗಳ ಮೆಕ್ಕೆಜೋಳಗಳು ಪೋಷಕಾಂಶಗಳ ಆಗರವಾಗಿವೆ. ಈ ಜೋಳ ಅಧಿಕ ಪ್ರಮಾಣದಲ್ಲಿ ಕಬ್ಬಿಣಾಂಶ ಹೊಂದಿದ್ದು, ದೇಹದಲ್ಲಿ ರಕ್ತ ಉತ್ಪತ್ತಿಗೆ ನೆರವಾಗುತ್ತದೆ. ಅಲ್ಲದೇ ರಕ್ತ ಹೀನತೆ ತಡೆಗಟ್ಟಿತ್ತದೆ. ಇದನ್ನು ಸೇವಿಸುವುದರಿಂದ ದೇಹದಾರ್ಢ್ಯತೆ ಹೆಚ್ಚಾಗುತ್ತದೆ. ಥಯಾಮಿನ್, ರಿಬೋಫ್ಲಾವಿನ್, ನಿಯಾಸಿನ್ ಸೇರಿದಂತೆ ಜೀವಸತ್ವಗಳಾದ ವಿಟಮಿನ್ ಎ, ವಿಟಮಿನ್ ಬಿ ಈ ಜೋಳದಲ್ಲಿವೆ.
ಆರೋಗ್ಯಕ್ಕೆ ಪ್ರಯೋಜನಕಾರಿ :
ರೋಗ ನಿರೋಧಕಗಳ ಶಕ್ತಿಕೇಂದ್ರದAತಿರುವ ಈ ಜೋಳಗಳು ಬೊಜ್ಜು ಮತ್ತು ಮಧುಮೇಹವನ್ನು ತಡೆಗಟ್ಟಬಲ್ಲವು. ಉರಿಯೂತ ನಿವಾರಕ, ಕ್ಯಾನ್ಸರ್ ವಿರೋಧಿ ಗುಣಲಕ್ಷಣಗಳನ್ನು ಹೊಂದಿವೆ. ನರಮಂಡಲದ ಕಾರ್ಯನಿರ್ವಹಣೆಯನ್ನು ಸುಧಾರಿಸುತ್ತದೆ, ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ, ಮೂತ್ರಪಿಂಡದ ಆರೋಗ್ಯವನ್ನು ಹೆಚ್ಚಿಸುತ್ತದೆ. ಕಣ್ಣಿನ ಆರೋಗ್ಯಕ್ಕೂ ಇದು ಸಹಾಯಕ.
ನೇರಳೆ, ನೀಲಿ, ಕೆಂಪು ಮತ್ತು ಕಪ್ಪು ಜೋಳಗಳು ದಕ್ಷಿಣ ಅಮೆರಿಕಾದ ದೇಶಗಳಲ್ಲಿ ಹೇರಳವಾಗಿ ಕಂಡುಬರುತ್ತವೆ. ಅಲ್ಲಿ ಇವುಗಳಿಂದ ಹಲವಾರು ರೀತಿಯ ಖಾದ್ಯಗಳನ್ನು ತಯಾರಿಸುತ್ತಾರೆ. ಪ್ಯಾಕ್ ಮಾಡಿದ ಚಿಪ್ಸ್, ಪಾಪ್ ಕಾರ್ನ್ಗಳು ಅಥವಾ ಹಿಟ್ಟುಗಳ ರೂಪದಲ್ಲಿ ಮತ್ತು ಪಾನೀಯಗಳಗಿಯೂ ಬಳಸುತ್ತಾರೆ.
ರೈತ ಎ.ಎಂ.ತ್ಯಾಗರಾಜ್ ಮಾತನಾಡಿ, “ಈ ಮೆಕ್ಕೆ ಜೋಳ ನಾಲ್ಕು ತಿಂಗಳಿಗೆ ಕಟಾವ್ ಹಂತಕ್ಕೆ ಬಂದಿದೆ. ಸ್ಥಳೀಯ ಮೆಕ್ಕೆಜೋಳದಲ್ಲಿ ಒಂದು ಗಿಡಕ್ಕೆ ಒಂದು ದೊಡ್ಡ ತೆನೆ ಮಾತ್ರ ಬಿಡುತ್ತದೆ. ಆದರೆ, ಈ ವಿದೇಶ ಜೋಳದ ತಳಿ ಗಿಡಕ್ಕೆ ಎರಡರಿಂದ ಮೂರು ತೆನೆ ಬಿಡುತ್ತದೆ. ಹೀಗಾಗಿ ಇಳುವರಿಯೂ ಹೆಚ್ಚಿದೆ. ತಳಿ ಅಭಿವೃದ್ಧಿ ಮಾಡಿ, ನಮ್ಮ ಭಾಗದ ರೈತರಿಗೆ ಇವುಗಳನ್ನು ಪರಿಚಯಿಸುವುದು ನನ್ನ ಮುಖ್ಯ ಉದ್ದೇಶ. ಮಾರುಕಟ್ಟೆಯಲ್ಲಿ ಸಹ ಇವುಗಳಿಗೆ ಬೇಡಿಕೆ ಇದೆ” ಎಂದರು.