ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ತಾಲೂಕು ತೂಬಗೆರೆ ಹೋಬಳಿ ಶ್ರೀಕ್ಷೇತ್ರ ಘಾಟಿ ಸುಬ್ರಹ್ಮಣ್ಯ ಸ್ವಾಮಿ ದೇವಾಲಯ ಸಮೀಪವಿರುವ ದೇವರಬೆಟ್ಟದಲ್ಲಿ ಶನೈಶ್ಚರ ಸ್ವಾಮಿ ಜಯಂತಿ ಅಂಗವಾಗಿ ಭಾನುವಾರ 20ನೇ ವರ್ಷದ ಕಲ್ಯಾಣೋತ್ಸವ ಹಾಗೂ ಬ್ರಹ್ಮರಥೋತ್ಸವ ಕಾರ್ಯಕ್ರಮವು ಶ್ರದ್ಧಾಭಕ್ತಿಯಿಂದ ನೆರವೇರಿತು.
ದೇವಾಲಯದ ಸಂಸ್ಥಾಪಕ ಶ್ರೀಧರ್ ಶರ್ಮಾ ಗುರೂಜಿ ನೇತೃತ್ವದಲ್ಲಿ ಬೆಳಿಗ್ಗೆಯಿಂದ ವಿವಿಧ ಪೂಜಾ ಕಾರ್ಯಕ್ರಮ, ಕಲ್ಯಾಣೋತ್ಸವ, ಪ್ರಾಕಾರೋತ್ಸವ ಹಾಗೂ ಬ್ರಹ್ಮರಥೋತ್ಸವ ಜರುಗಿತು.ಶನೈಶ್ಚರ ಸ್ವಾಮಿಯ ಜಾತ್ರೆಯ ಅಂಗವಾಗಿ ಹಗಲು ಪರಿಷೆ, ಶನೇಶ್ವರ ಶಾಂತಿ ಹೋಮ, ಅಭಿಷೇಕ, ತೋಮಾಲೆಸೇವೆ, ಎಲ್ಲಾ ನಕ್ಷತ್ರ ರಾಶಿಗಳ ಹಾಗೂ ಸಂವತ್ಸರಗಳ ದೋಷ ನಿವಾರಣೆ, ಪ್ರಧಾನ ಪೂರ್ಣಾಹುತಿ, ಶೇಷವಾಹನೋತ್ಸವ ನಡೆಯಿತು.
ಸಂಜೆ ವಸಂತೋತ್ಸವ, ಉಯ್ಯಾಲೋತ್ಸವ ಹಾಗೂ ಶಯಾನೋತ್ಸವ ಕಾರ್ಯಕ್ರಮ ವಿಧಿ ವಿಧಾನದಂತೆ ನೆರವೇರಿತು.ಶ್ರೀಧರ ಶರ್ಮಾ ಗುರೂಜಿ ಮಾತನಾಡಿ, ವಿಶ್ವ ಶನೈಶ್ಚರ ಸ್ವಾಮಿಯ ಸನ್ನಿಧಿಯಲ್ಲಿ ಅಭಿಷೇಕ ಶನೈಶ್ಚರ, ಸಾಲಿಗ್ರಾಮ ಶನೈಶ್ಚರ ಹಾಗೂ ಅಲಂಕಾರಿಕ ಶನೈಶ್ಚರ ವಿಗ್ರಹಗಳಿವೆ. ಬೆಳಿಗ್ಗೆಯಿಂದ ವಿವಿಧ ಸೇವೆಗಳನ್ನು ನೆರವೇರಿಸಿ ಲೋಕಕಲ್ಯಾಣಾರ್ತವಾಗಿ ಮಹಾಯಾಗ ಮಾಡಿದ್ದೇವೆ. ಜೇಷ್ಠಾದೇವಿ, ನೀಲಾದೇವಿ ಸಮೇತ ಸ್ವಾಮಿಯ ಕಲ್ಯಾಣೋತ್ಸವ ನಡೆಸಿದ್ದೇವೆ. ವಿವಿಧೆಡೆಯಿಂದ ಸಾಕಷ್ಟು ಭಕ್ತರು ಬಂದು ಸ್ವಾಮಿಯ ಬ್ರಹ್ಮರಥೋತ್ಸವದಲ್ಲಿ ಪಾಲ್ಗೊಂಡು ಪುನೀತರಾಗಿದ್ದಾರೆ ಎಂದು ಹೇಳಿದರು.
ಬ್ರಹ್ಮರಥೋತ್ಸವದ ಬಳಿಕ ಅನ್ನಪ್ರಸಾದ ವ್ಯವಸ್ಥೆ ಮಾಡಲಾಯಿತು.