ಕ್ಯಾಂಡಿ: ಐಸಿಸಿ ಟಿ-೨೦ ವಿಶ್ವಕಪ್ ೨೦೨೬ರ ಪಂದ್ಯಾವಳಿಯ ಭಾಗವಾಗಿ ಕೊಲಂಬೊದಲ್ಲಿ ಪಾಕಿಸ್ತಾನ ವಿರುದ್ಧ ಭಾರತಕ್ಕೆ ಭರ್ಜರಿ ಜಯ ದೊರೆತಿದೆ. ಜಾಗತಿಕ ಕ್ರಿಕೆಟ್ ಲೋಕ ಈ ಪಂದ್ಯದ ಚರ್ಚೆ ಮುಂದುವರೆಸಿರುವಾಗಲೇ, ಕ್ಯಾಂಡಿಯಲ್ಲಿ ಸಹ-ಅತಿಥೇಯ ಶ್ರೀಲಂಕಾ ತಂಡ ದೈತ್ಯ ಆಸ್ಟ್ರೇಲಿಯಾ ತಂಡಕ್ಕೆ ಮಣ್ಣು ಮುಕ್ಕಿಸಿ ಗಮನ ಸೆಳೆದಿದೆ.
ಹೌದು, ನಿನ್ನೆ (ಫೆ.೧೬-ಸೋಮವಾರ) ಕ್ಯಾಂಡಿಯ ಪಲ್ಲೆಕೆಲೆಯಲ್ಲಿ ನಡೆದ ಪಂದ್ಯದಲ್ಲಿ ಶ್ರೀಲಂಕಾ ತಂಡ ಆಸ್ಟ್ರೇಲಿಯಾ ತಂಡವನ್ನು ೮ ವಿಕೆಟ್ಗಳ ಅಂತರದಿಂದ ಸೋಲಿಸಿದೆ. ಈ ಸೋಲು ಆಸ್ಟ್ರೇಲಿಯಾದ ಟಿ೨೦ ವಿಶ್ವಕಪ್ ೨೦೨೬ರ ಸೂಪರ್ ಎಂಟನೇ ಹಂತವನ್ನು ತಲುಪುವ ಕನಸಿಗೆ ಭಾರಿ ಹೊಡೆತ ನೀಡಿದೆ.
ಜಿಂಬಾಬ್ವೆ ವಿರುದ್ಧದ ಸೋಲಿನ ನಂತರ ಆಸ್ಟ್ರೇಲಿಯಾ ತಂಡವು ಸ್ಪರ್ಧೆಯಲ್ಲಿ ಅನುಭವಿಸಿದ ಎರಡನೇ ಸೋಲು ಇದಾಗಿದ್ದು, ದೈತ್ಯ ಕಾಂಗರೂ ಪಡೆ, ಪ್ರಸ್ತುತ ೩ ಪಂದ್ಯಗಳಿಂದ ಕೇವಲ ೨ ಅಂಕಗಳೊAದಿಗೆ +೦.೪೧೪ ರನ್ ರೇಟ್ ಹೊಂದಿದೆ. ಆಸ್ಟ್ರೇಲಿಯಾ ಗ್ರೂಪ್ ಬಿ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಸಹ-ಅತಿಥೇಯ ಶ್ರೀಲಂಕಾ ಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿದೆ.
ಪಾಥುಮ್ ನಿಸ್ಸಂಕಾ ಅವರ ಅಜೇಯ ಶತಕದ ನೆರವಿನೊಂದಿಗೆ ಆಸ್ಟ್ರೇಲಿಯಾ ವಿರುದ್ಧ ಭರ್ಜರಿ ಜಯ ಸಾಧಿಸಿದ ಶ್ರೀಲಂಕಾ, ತನ್ನ ಸೂಪರ್ ೮ ಹಂತದ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಶ್ರೀಲಂಕಾ ೩ ಪಂದ್ಯಗಳಿಂದ ೬ ಅಂಕಗಳನ್ನು ಪಡೆದುಕೊಂಡಿದೆ. ಆದರೆ ಆಸ್ಟ್ರೇಲಿಯಾ ಸೂಪರ್ ೮ ಹಂತ ತಲುಪಲು ಹರಸಾಹಸಪಡಬೇಕಿದೆ.
ಜಿಂಬಾಬ್ವೆ ವಿರುದ್ದ ಆಸ್ಟ್ರೇಲಿಯಾ ಸೋಲು ತಂಡ ಸೂಪರ್ ೮ ಹಂತ ತಲುಪುವುದನ್ನು ಕಷ್ಟಕರವಾಗಿಸಿತ್ತು. ಇದೀಗ ಶ್ರೀಲಂಕಾ ವಿರುದ್ಧವೂ ಕಾಂಗರೂ ಪಡೆ ಸೋತಿರುವುದರಿಂದ, ಅದರ ಟಿ-೨೦ ವಿಶ್ವಕಪ್ ೨೦೨೬ರ ಭವಿಷ್ಯ ಡೋಲಾಯಮಾನವಾಗಿದೆ. ಸೂಪರ್ ೮ ಹಂತಕ್ಕೆ ಅರ್ಹತೆ ಪಡೆಯಲು, ಆಸ್ಟ್ರೇಲಿಯಾವು ಓಮಾನ್ ವಿರುದ್ಧದ ಉಳಿದ ಪಂದ್ಯವನ್ನು ಗೆಲ್ಲಬೇಕು ಮತ್ತು ಇತರ ತಂಡಗಳ ಫಲಿತಾಂಶಗಳನ್ನು ಅವಲಂಬಿಸಬೇಕು.
ಕ್ಯಾಂಡಿಯಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ , ನಿಗದಿತ ೨೦ ಓವರ್ಗಳಲ್ಲಿ ೧೮೧ ರನ್ ಗಳಿಸಿತು. ೧೮೨ ರನ್ಗಳ ಗುರಿ ಬೆನ್ನಟ್ಟಿದ ಶ್ರೀಲಂಕಾ ಪಾಥುಮ್ ನಿಸ್ಸಂಕಾ ಅವರ ಸ್ಪೋಟಕ ಶತಕ (೫೨ ಎಸೆತಗಳಲ್ಲಿ ೧೦೦)ದ ನೆರವಿನಿಂದ ೧೨ ಎಸೆತಗಳು ಬಾಕಿ ಇರುವಾಗಲೇ ವಿಜಯದ ನಗೆ ಬೀರಿತು.
ಒಟ್ಟಿನಲ್ಲಿ ಆಸ್ಟ್ರೇಲಿಯಾ ಈ ಬಾರಿಯ ಟಿ-೨೦ ವಿಶ್ವಕಪ್ನಲ್ಲಿ ಕುಂಟುತ್ತಾ ಸಾಗಿದ್ದು, ಅದರ ಭವಿಷ್ಯ ಇತರ ತಂಡಗಳ ಫಲಿತಾಂಶವನ್ನು ನಿರ್ಧರಿಸಿದೆ. ಜಿಂಬಾಬ್ವೆ ತಂಡ ಆಸ್ಟ್ರೇಲಿಯಾ ಸೋಲಿಸಿದರೆ ಭಾರತಕ್ಕೆ ವಿಶ್ವಕಪ್ ಲಭಿಸಲಿದೆ ಎಂಬ ಮಾತು ಈ ಬಾರಿಯೂ ನಿಜವಾಗುತ್ತಾ ಕಾದು ನೋಡಬೇಕಿದೆ.



