ಲಕ್ಷ್ಮೇಶ್ವರ: ಮನುಷ್ಯನ ದೈಹಿಕ ವಿಕಾಸಕ್ಕೆ ನೀರು ಆಹಾರ ಮುಖ್ಯವಾಗಿರುವಂತೆ ಬದುಕಿನ ವಿಕಾಸಕ್ಕೆ ಧರ್ಮಾಚರಣೆ ಅಗತ್ಯವೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.ಅವರು ಸೋಮವಾರ ಸಮೀಪದ ಪಶುಪತಿಹಾಳ ಗ್ರಾಮದಲ್ಲಿ ಗ್ರಾಮದಲ್ಲಿ ಜರುಗಿದ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಸಮಾಜದ ಓರೆ ಕೋರೆಗಳನ್ನು ತಿದ್ಧಿ ತೀಡಿ ಬೆಳೆಸುವುದೇ ಗುರುವಿನ ಧರ್ಮ. ಸಂಸ್ಕಾರ ಕೊಟ್ಟು ಸಂಸ್ಕøತಿ ಕಲಿಸಿದ ಕೀರ್ತಿ ಶ್ರೀ ಜಗದ್ಗುರು ರೇಣುಕಾಚಾರ್ಯರಿಗೆ ಸಲ್ಲುತ್ತದೆ. ಆಹಾರ ಆರೋಗ್ಯ ಮತ್ತು ಆಧ್ಯಾತ್ಮ ಜೀವನ ವಿಕಾಸಕ್ಕೆ ಅತ್ಯಗತ್ಯವೆಂದು ಬೋಧಿಸಿದ ಶ್ರೀ ಜಗದ್ಗುರು ರೇಣುಕಾಚಾರ್ಯರು ಸಕಲ ಜೀವಾತ್ಮರಿಗೆ ಸದಾ ಒಳಿತನ್ನೇ ಬೋಧಿಸಿದ್ದನ್ನು ಮರೆಯಲಾಗದು. ತನಗಾಗಿ ಬದುಕುವುದು ಜೀವ ಗುಣ.
ಎಲ್ಲರಿಗಾಗಿ ಬದುಕುವುದು ದೇವಗುಣ. ಅಧಿಕಾರದ ಅಂತಸ್ತು ಮೇಲೇರಿದಂತೆ ನೀತಿಯ ಅಂತಸ್ತು ಮೇಲೆರಬೇಕು. ಅರುವಿನ ಆಚಾರ ಬದುಕಿನ ಉನ್ನತಿಗೆ ಸೋಪಾನವಾಗಿದೆ. ಪಶುಪತಿಹಾಳ ಗ್ರಾಮದ ಸಕಲ ಸದ್ಭಕ್ತರು ಶ್ರೀ ಜಗದ್ಗುರು ರೇಣುಕಾಚಾರ್ಯ ಮಂದಿರ ನಿರ್ಮಿಸಿ ಪ್ರತಿ ವರುಷ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುವುದು ತಮಗೆ ಅತ್ಯಂತ ಸಂತೋಷವನ್ನು ತಂದಿದೆ ಎಂದರು.
ನೇತೃತ್ವ ವಹಿಸಿದ ಮುಕ್ತಿಮಂದಿರ ಕ್ಷೇತ್ರದ ವಿಮಲ ರೇಣುಕ ಮುಕ್ತಿಮುನಿ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಜೀವನದಲ್ಲಿ ಬದಲಾವಣೆ ಮತ್ತು ಬೆಳವಣಿಗೆ ಎರಡೂ ಬೇಕು. ಮೌಲ್ಯಾಧಾರಿತ ಜೀವನ ಬದುಕಿಗೆ ಬೆಲೆ ತಂದು ಕೊಡುತ್ತದೆ ಎಂದರು. ಬನ್ನಿಕೊಪ್ಪ ಹಿರೇಮಠದ ಡಾ.ಸುಜ್ಞಾನದೇವ ಶಿವಾಚಾರ್ಯರು, ಅಮ್ಮಿನಭಾವಿಯ ಅಭಿನವ ಶಾಂತಲಿಂಗ ಶಿವಾಚಾರ್ಯರು ಮತ್ತು ಲಕ್ಷ್ಮೇಶ್ವರದ ಮಲ್ಲಿಕಾರ್ಜುನ ಶಿವಾಚಾರ್ಯರು ಪಾಲ್ಗೊಂಡಿದ್ದರು. ಹಲವಾರು ಗಣ್ಯರಿಗೆ ಮತ್ತು ದಾನಿಗಳಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರುರಕ್ಷೆಯಿತ್ತು ಶುಭ ಹಾರೈಸಿದರು. ಸಮಾರಂಭಕ್ಕೂ ಮುನ್ನ ಶ್ರೀ ರಂಭಾಪುರಿ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ ಗ್ರಾಮದಲ್ಲಿ ಸಂಭ್ರಮದಿಂದ ಜರುಗಿತು.