ಉಡುಪಿ: ಶ್ರೀಹರಿವಾಯುಗುರುಗಳ, ಹಾಗೂ ಸಕಲ ಮಾಧ್ವ ಮಠಾಧೀಶರ ಪರಮಾನುಗ್ರಹದಿಂದ, ಶ್ರೀಮಧ್ವನವಮೀ ಪ್ರಯುಕ್ತ, ಶ್ರೀಅನಂತಾಸನದೇವರ, ಶ್ರೀಮಧ್ವಾಚಾರ್ಯರ ದಿವ್ಯಸನ್ನಿಧಾನದಲ್ಲಿ, ಮಾಘ ಶುದ್ಧ ಅಷ್ಟಮಿಯಿಂದ ಆರಂಭವಾಗಿದ್ದ ಸಮಗ್ರ ಶ್ರೀಸರ್ವಮೂಲಗ್ರಂಥಗಳ ಐದು ದಿನಗಳ ಪಾರಾಯಣ ಯಜ್ಞವನ್ನು ಪರ್ಯಾಯ ಶ್ರೀಪುತ್ತಿಗೆ ಮಠದ ಉಭಯ ಶ್ರೀಪಾದಂಗಳವರು ಶ್ರೀಮಧ್ವಪತಿಗೆ ಸಮರ್ಪಿಸಿದರು….
ಅರ್ಚಕರು ಶ್ರೀಅನಂತಾಸನದೇವರಿಗೆ ಶ್ರೀವಿಷ್ಣುಸಹಸ್ರನಾಮಗಳಿಂದ ತುಳಸೀ ಅರ್ಚನೆ ನೆರವೇರಿಸಿದರು. ಸಂಜೆ ಗೋಧೂಳಿ ಸಮಯಕ್ಕೆ ಶ್ರೀಅನಂತಾಸನ ಸನ್ನಿಧಿಯಲ್ಲಿ ಪರ್ಯಾಯ ಶ್ರೀಪಾದರು, ಶ್ರೀಸರ್ವಮೂಲಗ್ರಂಥಗಳ ಮಾಧ್ಯಮದಲ್ಲಿ ಭಗವಂತನಿಗೆ ಹಾಗೂ ಆಚಾರ್ಯರಿಗೆ ಷೋಡಶೋಪಚಾರ ಪೂಜೆ ಮಾಡಿದರು.
ಪಲಿಮಾರುಮಠದ ಪ್ರಾತಃಸ್ಮರಣೀಯ ಶ್ರೀರಘುಪ್ರವೀರ ತೀರ್ಥಶ್ರೀಪಾದಂಗಳವರಿಂದ ರಚಿತವಾದ ಶ್ರೀಮಧ್ವಾ ಷ್ಟೋತ್ತರಶತ ನಾಮಗಳಿಂದ ತುಳಸಿ ಹೂವುಗಳಿಂದ ಅರ್ಚನೆ ಮಾಡಿದರು, ಆರತಿ ಬೆಳಗಿ, ಪಾರಾಯಣ ಯಜ್ಞವನ್ನು ಸಮರ್ಪಿಸಿದರು. ಪ್ರತೀವರ್ಷವೂ ಪಾರಾಯಣ ಯಜ್ಞ ಚ್ಯುತಿ ಬರದಂತೆ ನಡೆಯಲಿ ಎಂದು ಆಶೀರ್ವದಿಸಿದರು.
ರಾತ್ರಿ ಶ್ರೀಸರ್ವಮೂಲಗ್ರಂಥಪ್ರತಿಪಾದ್ಯ ಶ್ರೀಕೃಷ್ಣದೇವರಿಗೆ ಬ್ರಹ್ಮರಥೋತ್ಸವ, ಶ್ರೀಸರ್ವಮೂಲ ಗ್ರಂಥಗಳಿಗೆ ಸುವರ್ಣರಥೋತ್ಸವ, ಶ್ರೀಮುಖ್ಯಪ್ರಾಣದೇವರಿಗೆ ನವರತ್ನರಥೋತ್ಸವವು ವೈಭವದಿಂದ ನಡೆಯಿತು.ಉತ್ಸವ ಸಮಯದಲ್ಲಿ ಶ್ರೀಸುಮಧ್ವವಿಜಯದ 16 ನೇ ಸರ್ಗವನ್ನು ಪಾರಾಯಣ ಮಾಡುವ ಮೂಲಕ ಶ್ರೀಮಧ್ವಾಚಾರ್ಯರ ವಿಜಯೋತ್ಸವದ ಚಿಂತನೆಯನ್ನು ಮಾಡುತ್ತಾ ಶ್ರೀಸರ್ವಮೂಲಮಹೋತ್ಸವ ಕಾರ್ಯಕ್ರಮವು ವೈಭವದಿಂದ ಶ್ರೀಮಧ್ವಪತಿ ಶ್ರೀಕೃಷ್ಣದೇವರಿಗೆ ಸಮರ್ಪಿತವಾಯಿತು.
ಮಾಧ್ವ ವೈಷ್ಣವ ಸೇವಾ ಸಂಘ. ಇದನ್ನು ಆಯೋಜಿಸಿತ್ತು.