ಕೆ.ಆರ್.ನಗರ: ಹಂಪಾಪುರ ಗ್ರಾಮದ ಶ್ರೀದುರ್ಗಾ ಪರಮೇಶ್ವರಿ ಅಮ್ಮನವರ ಬ್ರಹ್ಮರಥೋತ್ಸವ ಸಕಲ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಸಾವಿರಾರು ಜನರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.
ಹಂಪಾಪುರ ಗ್ರಾಮದ ಹೃದಯಭಾಗದ ಲ್ಲಿರುವ ದೇವಾಲಯದ ಆವರಣದಲ್ಲಿ ನಡೆದ ರಥೋತ್ಸವದಲ್ಲಿ ಜಿಲ್ಲೆ, ರಾಜ್ಯದ ವಿವಿಧೆಡೆಗಳಿಂದ ಆಗಮಿಸಿದ್ದ ಸಾವಿರಾರು ಭಕ್ತ ಜನರು ಜಯ ಘೋಷದೊಂದಿಗೆ ಅಮ್ಮನವರನ್ನು ಪ್ರತಿಷ್ಠಾಪಿಸಿದ್ದ ರಥವನ್ನು ದೇವಾಲಯದ ಸುತ್ತಾ ಎಳೆದು ತಂದು ನಿಲ್ಲಿಸಿದರು. ತದನಂತರ ಭಕ್ತ ಜನತೆ ಶ್ರದ್ಧಾ ಭಕ್ತಿಯಿಂದ ದೇವಿಗೆ ಪೂಜೆ ಸಲ್ಲಿಸಿ ಇಷ್ಟಾರ್ಥಗಳನ್ನು ನೆರವೇರಿಸುವಂತೆ ಬೇಡಿಕೊಂಡರು.
ಮಧ್ಯಾಹ್ನ 12 ರಿಂದ 12-30ಕ್ಕೆ ನಡೆದ ರಥೋತ್ಸವದಲ್ಲಿ ಮೊದಲಿಗೆ ಅಮ್ಮನವರಿಗೆ ಪೂಜೆ ಸಲ್ಲಿಸಿ ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ನಂತರ ಪೂಜೆ ಸಲ್ಲಿಸಿ ರಥವನ್ನು ದೇವಳದ ಸುತ್ತ ಪ್ರದಕ್ಷಣೆ ಹಾಕಲಾಯಿತು. ಜನರು ಶ್ರೀ ದುರ್ಗಾ ಪರಮೇಶ್ವರಿ ಅಮ್ಮನವರಿಗೆ ಜಯಘೋಷ ಮೊಳಗಿಸುತ್ತಾ ನಾಡಿನಲ್ಲಿ ಸುಖ, ಶಾಂತಿ ನೆಲೆಸಿ, ಸಮೃದ್ಧ ಮಳೆಯಾಗಿ ಎಲ್ಲೆಡೆ ಉತ್ತಮ ಬೆಳೆಯಾಗಿ ಜನತೆ ಸುಖಸಂತೋಷದಿಂದ ಇರಲಿ ಎಂದು ಪ್ರಾರ್ಥಿಸುತ್ತಿದ್ದರು.
ಬಿರು ಬಿಸಿಲನ್ನೂ ಲೆಕ್ಕಿಸದೆ ರಥೋತ್ಸವದಲ್ಲಿ ಪಾಲ್ಗೊಂಡ ನವಜೋಡಿ, ಮಹಿಳೆಯರು, ಮಕ್ಕಳು ಸೇರಿದಂತೆ ಎಲ್ಲರೂ ರಥದ ಮೇಲೆ ಹಣ್ಣುಧವನ ಎಸೆದು ದೇವರಿಗೆ ವಿಶೇಷ ಪೂಜೆಸಲ್ಲಿಸಿ ಇಷ್ಟಾರ್ಥ ನೆರವೇರುವಂತೆ ಭಕ್ತಿಪೂರ್ವಕ ನಮನವನ್ನು ಸಲ್ಲಿಸುತ್ತಿದ್ದರು.
ರಥೋತ್ಸವ ಮತ್ತು ಜಾತ್ರಾಮಹೋತ್ಸವದ ಪ್ರಯುಕ್ತ ಗ್ರಾಮದ ವಿವಿಧ ಸಂಘಟನೆಗಳ ವತಿಯಿಂದ ಪಾನಕ, ಮಜ್ಜಿಗೆ ತಂಪುಪಾನೀಯ ಹಾಗೂ ಪ್ರಸಾದ ವಿನಿಯೋಗ ವಿತರಿಸಲಾಗಿತ್ತು.
ರಥೋತ್ಸವದಲ್ಲಿ ಜೆಡಿಎಸ್ ಅಧ್ಯಕ್ಷ ಹಂಪಾಪುರ ಕುಮಾರ್, ಬಿಜೆಪಿ ಮುಖಂಡ ಪ್ರಭಾಕರ್ ಜೈನ್, ಹೋಟೆಲ್ ಮಾಲೀಕ ರಾಜೇಶ್, ಗ್ರಾಮ ಪಂಚಾಯಿತಿ ಸದಸ್ಯ ಹರಿರಾಜು, ರಾಮೇಗೌಡ, ಮುಖಂಡ ರಾದ ರಾಮಸ್ವಾಮಿಗೌಡ, ಹನುಮಂತೇ ಗೌಡ, , ಗುರು ಪ್ರಸಾದ್, ಲೋಕೇಶ್, , ನಾರಾಯಣ, ರೈತ ಮುಖಂಡ ಮಂಚನಹಳ್ಳಿ ಗಿರೀಶ್, ರೇವಣ್ಣ, ಮಂಜುನಾಥ್, ಸನ್ಯಾಸಿಪುರ ಬಸವರಾಜು, ಶಿವಣ್ಣ ಪಾಲ್ಗೊಂಡಿದ್ದರು.