ಕ್ವಾಲಾಲಂಪುರ: ಹಿನ್ನಡೆ ಯಿಂದ ಚೇತರಿಸಿಕೊಂಡ ಭಾರತದ ಕಿದಂಬಿ ಶ್ರೀಕಾಂತ್, ಮಲೇಷ್ಯಾ ಓಪನ್ ಸೂಪರ್ 1000 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ವಿಶ್ವ ಐದನೇ ಕ್ರಮಾಂಕದ ಆಟಗಾರ ಜೊನಾಥನ್ ಕ್ರಿಸ್ಟಿ ಅವರ ಮೇಲೆ ಅಚ್ಚರಿಯ ಜಯಗಳಿಸಿ ಎರಡನೇ ಸುತ್ತನ್ನು ಪ್ರವೇಶಿಸಿದರು.
ಆಂಧ್ರ ಪ್ರದೇಶದ ಗುಂಟೂರಿನ 30 ವರ್ಷದ ಶ್ರೀಕಾಂತ್ ಕಳೆದ ಕೆಲ ಸಮಯದಿಂದ ಉತ್ತಮ ಪ್ರದರ್ಶನ ನೀಡಲು ವಿಫಲರಾಗಿದ್ದರು.
ಆದರೆ ಈ ಟೂರ್ನಿಯಲ್ಲಿ ಇಂಡೊನೇಷ್ಯಾದ ಕ್ರಿಸ್ಟಿ ಅವರ ಮೇಲೆ 12-21, 21-18, 21-16 ರಿಂದ 65 ನಿಮಿಷಗಳಲ್ಲಿ ಗೆದ್ದು ಗಮನಸೆಳೆದರು.
ವಿಶ್ವದ ಮಾಜಿ ಅಗ್ರಮಾನ್ಯ ಆಟಗಾರನಾದ ಶ್ರೀಕಾಂತ್ ಎರಡನೇ ಸುತ್ತಿನಲ್ಲಿ ಹಾಂಗ್ಕಾಂಗ್ನ ಎನ್ಜಿ ಕಾ ಲಾಂಗ್ ಆಯಂಗಸ್ ಅವರನ್ನು ಎದುರಿಸಲಿದ್ದಾರೆ.ಆದರೆ ಮಹಿಳೆಯರ ಸಿಂಗಲ್ಸ್ ಮೊದಲ ಸುತ್ತಿನಲ್ಲಿ ಚೀನಾದ ಝಾಂಗ್ ಯಿ ಮನ್ 21-15, 21-15 ರಿಂದ ಭಾರತದ ಆಕರ್ಷಿ ಕಶ್ಯಪ್ ಅವರನ್ನು ಮಣಿಸಿದರು.
ಮಹಿಳಾ ಡಬಲ್ಸ್ನಲ್ಲಿ ತನಿಶಾ ಕ್ರಾಸ್ಟೊ ಮತ್ತು ಅಶ್ವಿನಿ ಪೊನ್ನಪ್ಪ ಜೋಡಿ 21-13, 21-16 ರಿಂದ ಅಮೆರಿಕದ ಫ್ರಾನ್ಸೆಸ್ಕಾ ಕಾರ್ಬೆಟ್ ಮತ್ತು ಅಲಿಸನ್ ಲೀ ಜೋಡಿಯನ್ನು ಸೋಲಿಸಿತು. ಆದರೆ ಪುರುಷರ ಡಬಲ್ಸ್ನಲ್ಲಿ ಚೀನಾ ತೈಪೆಯ ಫಾಂಗ್ ಚಿ ಲೀ- ಫಾಂಗ್ ಜೆನ್ ಲೀ ಜೋಡಿ 21-16, 21-19 ರಿಂದ ಭಾರತದ ಎಂ.ಆರ್.ಅರ್ಜುನ್- ಧ್ರುವ್ ಕಪಿಲ ಜೋಡಿಯನ್ನು 44 ನಿಮಿಷಗಳಲ್ಲಿ ಸೋಲಿಸಿತು.