ಬೆಂಗಳೂರು: ಕೋಣನಕುಂಟೆಯ ಸುಪ್ರಜಾ ನಗರದ ಆದರ್ಶ ಮಹಿಳಾ ವೇದಿಕೆಯಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಕೂಡ ಕಾರ್ತಿಕ ಹುಣ್ಣಿಮೆ ದಿನ ಸುಂದರವಾಗಿ ಅಲಂಕರಿಸಿದ ಮಂಟಪದಲ್ಲಿ, ತಳಿರು ತೋರಣಗಳಿಂದ ರಾರಾಜಿಸುತ್ತಿರುವ ವೇದಿಕೆಯಲ್ಲಿ, ಮಕ್ಕಳ ಕಲರವದೊಂದಿಗೆ, ವೇದಿಕೆಯ ಸದಸ್ಯರ ಜರಿ ಸೀರೆಗಳ ಓಡಾಟದ ನಡುವೆ ಶ್ರೀ ಕೃಷ್ಣ ಪರಮಾತ್ಮ ಮತ್ತು ಶ್ರೀ ತುಳಸಿ ದೇವಿಯ ವಿವಾಹವು ಶಾಸ್ತ್ರೋಕ್ತವಾಗಿ ವಿಜೃಂಭಣೆ ಹಾಗೂ ಸಂಭ್ರಮ ಸಡಗರದಿಂದ ನಡೆಸಲಾಯಿತು.
ಶ್ರೀಮತಿ ಸರಸ್ವತಿ ಹೆಗಡೆಯವರ ಮನೆಯಿಂದ ಸಾಲಂಕೃತ ಕನ್ಯೆ ತುಳಸಿದೇವಿಯನ್ನು, ಪುರೋಹಿತರನ್ನೊಳಗೊಂಡು , ಮಹಿಳೆಯರು ಸಂಭ್ರಮದಿಂದ ವೇದಿಕೆಗೆ ಕರೆತಂದರು. ವರನ ಮನೆಯಲ್ಲಿ ಇಡುವ ಎಲ್ಲಾ ಅಲಂಕೃತ ಸಾಮಾನುಗಳನ್ನು ವೇದಿಕೆಗೆ ತರಲಾಯಿತು.
ತದನಂತರ ಸುಧಾ ಲಕ್ಷ್ಮಣ್ರ ಮನೆ ಯಿಂದ ಸುಂದರವಾಗಿ ಅಲಂಕೃತಗೊಂಡ ಶ್ರೀ ಕೃಷ್ಣನನ್ನು ಮಹಿಳೆಯರು ವಿಜೃಂಭಣೆಯಿಂದ ಮೆರವಣಿಗೆ ಮೂಲಕ ವೇದಿಕೆಯ ಮುಂಬಾಗಕ್ಕೆ ಕರೆತಂದಾಗ ಉಳಿದ ಎಲ್ಲಸದಸ್ಯರು ಶಾಸ್ತ್ರೋಕ್ತ ಞವಾಗಿ ಅರಳು ಅಕ್ಕಿ ಎರಚಿ ದೃಷ್ಟಿ ನಿವಾರಿಸಿ ಪುರೋಹಿತರ ಮಾರ್ಗದರ್ಶನದಲ್ಲಿ ದಿಬ್ಬಣ ಎದುರುಗೊಂಡು ವೇದಿಕೆಗೆ ಕರೆ ತರಲಾಯಿತು.
ಪುರೋಹಿತರು ಶಸ್ತ್ರೋಕ್ತವಾಗಿ ಶ್ರೀಕೃಷ್ಣ ಮತ್ತು ಶ್ರೀ ದೇವಿ ತುಳಸಿಗೆ ವಿವಾಹ ನೆರವೇರಿಸಿದರು. ಯಾವ ಮದುವೆಯ ಮನೆಗೂ ಕಡಿಮೆ ಇಲ್ಲದಂತೆ ಆದರ್ಶ ಮಹಿಳಾ ವೇದಿಕೆಯು ಸಂತೋಷ ಸಂಭ್ರಮದಿಂದ ತುಳುಕಾಡುತ್ತಿತ್ತು. ಪುರೋಹಿತರು ತುಳಸಿ ಕೃಷ್ಣನ ಮದುವೆಯನ್ನು ಯಾಕಾಗಿ ನೆರವೇರಿಸಬೇಕೆಂದು ಕಥೆಯ ಮೂಲಕ ಎಲ್ಲಾ ಸದಸ್ಯರಿಗೂ ಮನವರಿಕೆ ಮಾಡಿಕೊಟ್ಟರು.
ಎಲ್ಲಾ ಸದಸ್ಯರು ಸಕ್ರಿಯವಾಗಿ ಪಾಲ್ಗೊಂಡರು ಹಾಗೂ ವಿವಾಹ ಮಹೋತ್ಸವವನ್ನು ಕಣ್ತುಂಬಿಕೊಂಡು ನಾವೇ ಧನ್ಯರೆನಿಸಿಕೊಂಡರು. ಹೀಗೆ ಆದರ್ಶ ಮಹಿಳಾ ವೇದಿಕೆಯು “ಹೊಸ ಚಿಗುರು ಹಳೇ ಬೇರು ಎನ್ನುವ ಡಿ.ವಿ.ಜಿ.ಯವರ ಕವನದಂತೆ ಹಳತನ್ನು ಮರೆಯದೆ, ಹೊಸತನ್ನು ಮೈಗೂಡಿಸಿಕೊಳ್ಳುತ್ತಾ, ಎಲ್ಲರೊಳಗೊಂದಾಗಿ ಮೈದುಂಬಿ ಮುನ್ನಡೆಯುತ್ತಿದೆ.