ತಿಪಟೂರು: ಗ್ರಾಮೀಣ ಭಾಗದ ಮಕ್ಕಳಿಗೆ ಉತ್ತಮ ಸೌಕರ್ಯಗಳನ್ನು ಕಲ್ಪಿಸಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಎಸ್ಆರ್ಎಸ್ ಇಂಟರ್ನ್ಯಾಷನಲ್ ಶಾಲೆಯು ಮಾದರಿಯಾಗಿದೆ ಎಂದು ಸಂಸದ ಜಿ.ಎಸ್.ಬಸವರಾಜು ತಿಳಿಸಿದರು.
ತಿಪಟೂರು ತಾಲೂಕು ಕೋಟೆನಾಯಕನ ಹಳ್ಳಿಯಲ್ಲಿ ಷಡಕ್ಷರಮಠದ ರುದ್ರಮುನಿ ಸ್ವಾಮೀಜಿ ಸ್ಥಾಪಿಸಿರುವ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯ ಸಪ್ತೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಗ್ರಾಮೀಣ ಭಾಗದಲ್ಲಿ ಇಂತಹ ಉತ್ತಮ ಗುಣಮಟ್ಟದ ಶಾಲೆಗಳ ಅವಶ್ಯಕತೆ ಇದೆ.
ಮಕ್ಕಳ ಜ್ಞಾನಾರ್ಜನೆಗೆ ಬೇಕಾದ ಸಕಲವ್ಯವಸ್ಥೆ, ಬೋಧಕ ವರ್ಗ, ಸುಂದರ ಪರಿಸರದ ವಾತಾವರಣ ಇವುಗಳ ನೆರವಿನಿಂದ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆಯುವುದರಲ್ಲಿ ಸಂಶಯವಿಲ್ಲ ಎಂದ ಅವರು ಬೇರೆ ಶಿಕ್ಷಣ ಸಂಸ್ಥೆಗಳೂ ಕೂಡ ಕೇವಲ ನಗರದಲ್ಲಿ ಕೇಂದ್ರೀಕರಿಸದೆ ಗ್ರಾಮೀಣ ಭಾಗದಲ್ಲಿ ಶಾಲೆಗಳನ್ನು ತೆರೆದು ಗ್ರಾಮೀಣ ಮಕ್ಕಳ ಶಿಕ್ಷಣಕ್ಕೆ ಸಹಕರಿಸಬೇಕು ಎಂದರು.
ಶಾಸಕ ಕೆ.ಷಡಕ್ಷರಿ ಮಾತನಾಡಿ ವಾಣಿಜ್ಯೋಧ್ಯಮಿಗಳ ಪಾಲಾಗಬೇಹಿದ್ದ ಇಲ್ಲಿನ ಜಾಗವನ್ನು ಪಡೆದುಕೊಂಡು ಗ್ರಾಮೀಣ ಭಾಗದ ಮಕ್ಕಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಲ್ಲಿ ಈ ಭಾಗದಲ್ಲಿ ಪ್ರಾರಂಭಿಸಿದ ಸ್ವಾಮೀಜಿಗಳ ಕಾರ್ಯ ಅತ್ಯಂತ ಶ್ಲಾಘನೀಯವಾದುದು. ಕಡಿಮೆ ಶುಲ್ಕ ಪಡೆದು ಉತ್ತಮ ಶಿಕ್ಷಣ ನೀಡುತ್ತಿರುವ ಈ ಸಂಸ್ಥೆ ಉತ್ತಮವಾಗಿ ಬೆಳೆಯಲಿ ಎಂದು ಆಶಿಸಿದರು.
ಷಡಕ್ಷರ ಮಠದ ಶ್ರೀ ರುದ್ರಮುನಿ ಸ್ವಾಮೀಜಿ ಮಾತನಾಡಿ ಇಂದು ಮಕ್ಕಳಿಂದ ಹಿರಿಯರವರೆಗೆ ಎಲ್ಲರೂ ಮೊಬೈಲ್ ದಾಸರಾಗಿದ್ದಾರೆ. ಮೊಬೈಲ್ ಗೀಳು ವಿದ್ಯಾರ್ಥಿಗಳ ಶಿಕ್ಷಣವನ್ನು ಹಾಳುಗೆಡುವುದಲ್ಲದೆ ಮನಸ್ಸಿನ ಏಕಾಗ್ರತೆಯನ್ನು ಕಡಿಮೆ ಮಾಡುತ್ತದೆ. ಮನೆಯಲ್ಲಿ ಪೋಷಕರು ಮಕ್ಕಳಿಗೆ ಮೊಬೈಲ್ ನೀಡುವುದನ್ನು ಕಡಿಮೆ ಮಾಡಿ ಇನ್ನಿತರ ಚಟುವಟಿಕೆಗಳಿಗೆ ಪ್ರೋತ್ಸಾಹಿಸಬೇಕು ಎಂದು ತಿಳಿಸಿದರು.
ಶಾಲೆಯ ಪ್ರಾಂಶುಪಾಲೆ ರಶ್ನಿ ನಿರಂಜನ್, ಮಾಜಿ ತಾಪಂ ಅಧ್ಯಕ್ಷ ಸುರೇಶ್ ನ್ಯಾಕೇನಹಳ್ಳಿ, ಅಖಿಲ ಬಾರತ ವೀರಶೈವ ಯುವ ವೇದಿಕೆಯ ಅಧ್ಯಕ್ಷ ಜಯಂತ್ಕುಮಾರ್ ಇನ್ನಿತರರು ಉಪಸ್ಥಿತರಿದ್ದರು.