ಬೆಂಗಳೂರು: ನಿನ್ನೆ ರಾಜ್ಯಸಭಾ ಚುನಾವಣೆ ನಂತರ ವಿಜೇತ ಅಭ್ಯರ್ಥಿ ನಾಸಿರ್ ಹುಸೇನ್ ಬೆಂಬಲಿಗರು ಸಂಭ್ರಮಾಚರಣೆ ವೇಳೆ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದಾರೆ ಎಂಬ ವಿಷಯ ಪ್ರಸ್ತಾಪವಾಗಿ ಉಭಯ ಸದನಗಳಲ್ಲೂ ಗದ್ದಲ ಉಂಟಾದ ಪರಿಸ್ಥಿತಿ ನಿರ್ಮಾಣವಾಯಿತು.
ಇಂದು ಬೆಳಿಗ್ಗೆ ವಿಧಾನಸಭೆ, ವಿಧಾನ ಪರಿಷತ್ ಕಲಾಪ ಆರಂಭವಾಗುತ್ತಿದ್ದಂತೆ ಎರಡು ಸದನಗಳಲ್ಲೂ ಪಾಕಿಸ್ತಾನ್ ಪರ ಘೋಷಣೆ ಕೂಗಲಾಗಿದೆ ಎಂದು ಆರೋಪಿಸಿ ವಿಪಕ್ಷ ಬಿಜೆಪಿ ಸದಸ್ಯರು ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿ ಸರ್ಕಾರದ ವಿರುದ್ಧ ಹರಿಹಾಯ್ದರು.
ಪರಿಷತ್ನಲ್ಲಿ ವಿಷಯ ಪ್ರಸ್ತಾಪಿಸಿದ ವಿಪಕ್ಷ ನಾಯಕ ಕೋಟಾ ಶ್ರೀನಿವಾಸ್ ಪೂಜಾರಿ ವಿಧಾನಸೌಧದಂತಹ ಜಾಗದಲ್ಲಿ ಪಾಕಿಸ್ತಾನ್ ಪರ ಪಾಕಿಸ್ತಾನ್ ಜಿಂದಾಬಾದ್ ಎಂಬ ಘೋಷಣೆ ಕೂಗಲಾಗಿದೆ ಎಂದು ಆರೋಪಿಸಿ ರಾಷ್ಟ್ರ ದ್ರೋಹಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಚಿವ ಹೆಚ್.ಕೆ.ಪಾಟೀಲ್ ಇಂತಹ ಘೋಷಣೆ ಕೂಗಿಲ್ಲ ಎಂದು ಹೇಳಿದಾಗ ಆಡಳಿತ ಮತ್ತು ವಿಪಕ್ಷ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದು ಗದ್ದಲ ಉಂಟಾದ ಪರಿಣಾಮ ಸಭಾಪತಿ ಕಲಾಪವನ್ನು 10 ನಿಮಿಷಗಳ ಕಾಲ ಮುಂದೂಡಿದರು.
ಇತ್ತ ವಿಧಾನಸಭೆಯಲ್ಲೂ ಇದೇ ವಿಷಯ ಪ್ರಸ್ತಾಪವಾಗಿ ಇಲ್ಲಿಯೂ ಗದ್ದಲದ ವಾತಾವರಣ ಏರ್ಪಟ್ಟಿತು. ಪ್ರತಿಪಕ್ಷ ನಾಯಕ ಬಿಜೆಪಿಯ ಆರ್.ಅಶೋಕ್ ಮಾತನಾಡಿ, ವಿಧಾನಸೌಧದಂತಹ ರಾಜ್ಯದ ಏಳು ಕೋಟಿ ಜನರ ಆತ್ಮವಿರುವ ಜಾಗದಲ್ಲಿ ರಾಷ್ಟ್ರದ್ರೋಹಿ ಘೋಷಣೆ ಕೂಗಲಾಗಿದೆ. ಇಲ್ಲಿಯೇ ಭದ್ರತೆ ಇಲ್ಲ ಎಂದ ಮೇಲೆ ನಮಗೆಲ್ಲಿ ಭದ್ರತೆ ಸಿಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರಲ್ಲದೆ.
ಇಂತಹ ದ್ರೋಹಿಗಳನ್ನು ಜೊತೆಯಲ್ಲಿಟ್ಟುಕೊಂಡಂತಹ ವ್ಯಕ್ತಿ ನಾಸಿರ್ ಅಂತವರಿಗೆ ಟಿಕೆಟ್ ಹೇಗೆ ಕೊಟ್ಟಿರಿ ಎಂದು ಪ್ರಶ್ನಿಸಿದರು. ಈ ಸಂದರ್ಭದಲ್ಲಿ ಆಡಳಿತ ಪಕ್ಷದ ಸದಸ್ಯರು ವಿಪಕ್ಷದವರ ಮೇಲೆ ಹರಿಹಾಯ್ದಾಗ ಕೋಲಾಹಲ ಪರಿಸ್ಥಿತಿ ನಿರ್ಮಾಣವಾದ ಪರಿಣಾಮ ಸಭಾಧ್ಯಕ್ಷರು ಕಲಾಪವನ್ನು 10 ನಿಮಿಷಗಳ ಕಾಲ ಮುಂದೂಡಿದರು.
ವಿಧಾನಸಭಾಧ್ಯಕ್ಷರ ಕೊಠಡಿಯಲ್ಲಿ ಕೆಲ ಹೊತ್ತು ಎರಡು ಪಕ್ಷಗಳ ಮುಖಂಡರ ನಡುವೆ ಸಂಧಾನ ಸಭೆ ನಡೆದು ಈ ಬಗ್ಗೆ ವಿಸ್ತøತ ಚರ್ಚೆಗೆ ಅವಕಾಶ ನೀಡುವುದಾಗಿ ಸಭಾಧ್ಯಕ್ಷರು ತಿಳಿಸಿದರು ಎಂದು ತಿಳಿದು ಬಂದಿತು.ಮತ್ತೆ ಕಲಾಪ ಆರಂಭಗೊಂಡಾಗ ಇದೇ ವಿಷಯಕ್ಕೆ ಸಂಬಂಧಪಟ್ಟಂತೆ ಚರ್ಚೆ ನಡೆಯಿತು.
ಅತ್ತ ವಿಧಾನ ಪರಿಷತ್ನಲ್ಲಿಯೂ ಕಲಾಪ ಪುನಃ ಆರಂಭವಾದಾಗ ಚರ್ಚೆ ವಿಷಯ ವಿಕೋಪಕ್ಕೆ ಹೋಗಿ ಎರಡೂ ಪಕ್ಷದ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದು ಪರಿಸ್ಥಿತಿ ಸದಸ್ಯರುಗಳು ಕೈ ಕೈ ಮಿಲಾಯಿಸುವ ಹಂತ ತಲುಪಿತು.ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸತೊಡಗಿದರು.
ಒಂದು ಹಂತದಲ್ಲಿ ಬಿಜೆಪಿಯ ಎನ್ ರವಿಕುಮಾರ್ ಆಡಿದ ಮಾತಿಗೆ ಆಡಳಿತ ಪಕ್ಷದ ಅಬ್ದುಲ್ ಜಬ್ಬಾರ್ ರವಿಕುಮಾರ್ ಅವರನ್ನು ಏಕವಚನದಲ್ಲಿ ಸಂಬೋಧಿಸಿ ಮಾತನಾಡಿದಾಗ ಇದರಿಂದ ಕೆರಳಿದ ರವಿಕುಮಾರ್ ಜಬ್ಬಾರ್ ವಿರುದ್ಧ ಹರಿಹಾಯ್ದರು. ಇದಕ್ಕೆ ಪ್ರತಿಯಾಗಿ ಪರಸ್ಪರರು ಕೈಕೈ ಮಿಲಾಯಿಸಲು ಮುಂದಾದರು.
ಒಂದು ಹಂತದಲ್ಲಿ ಜಬ್ಬಾರ್ ಅವರು ಅವನ ಮುಚ್ಚಿಸಿರಿ ಎಂದು ರವಿಕುಮಾರ್ರನ್ನು ಉದ್ದೇಶಿಸಿ ಮಾತನಾಡಿದಾಗ ರವಿಕುಮಾರ್ ಜಬ್ಬಾರ್ ವಿರುದ್ಧ ತೀವ್ರ ಕೆಂಡಾಮಂಡಲರಾದರು. ಈ ಸಂದರ್ಭದಲ್ಲಿ ಬಿಜೆಪಿ ಸದಸ್ಯರು ರವಿಕುಮಾರ್ ಬೆಂಬಲಕ್ಕೆ ನಿಂತರು.
ಈ ಸಂದರ್ಭದಲ್ಲಿ ಪರಿಸ್ಥಿತಿ ನಿಭಾಯಿಸಲು ಸಭಾಪತಿಯವರು ಹರಸಾಹಸ ಪಡಬೇಕಾಯಿತು.