ಚಿಕ್ಕಬಳ್ಳಾಪುರ: ಮುಕ್ತ, ನ್ಯಾಯಸಮ್ಮತ, ಪಾರದರ್ಶಕ ವಾಗಿ, ಚುನಾವಣೆ ನಡೆಯಲು ಚುನಾವಣಾ ವೆಚ್ಚ ಸಂಬಂಧ ನಿಯೋಜಿತ ಅಧಿಕಾರಿಗಳು ಕಟ್ಟುನಿಟ್ಟಾಗಿ ಕಾರ್ಯನಿರ್ವಹಿಸುವಂತೆ ರಾಜ್ಯ ವಿಶೇಷ ವೆಚ್ಚ ವೀಕ್ಷಕರಾದ ಬಿ.ಮುರಳಿ ಕುಮಾರ್ ಅವರು ಸೂಚನೆ ನೀಡಿದರು.
ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಲೋಕಸಭಾ ಚುನಾವಣಾ ಸಂಬಂಧ ವೆಚ್ಚ ನಿಗಾ ಕುರಿತು ಇಂದು ನಡೆದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾನತಾಡಿದರು.ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಚೆಕ್ ಪೋಸ್ಟ್ ಗಳಲ್ಲಿ ತಪಾಸಣೆಯನ್ನು ತೀವ್ರಗೊಳಿಸಿ ಸಾಗಿಸಲಾಗುವ ಹಣ, ಮದ್ಯ ಇನ್ನಿತರ ಸಾಮಗ್ರಿಗಳ ಬಗ್ಗೆ ಕುಲಂಕಷವಾಗಿ ಪರಿಶೀಲಿಸಬೇಕು. ವಸ್ತುಗಳು ಎಲ್ಲಿಂದ ಬರುತ್ತಿದೆ, ಯಾವ ಪ್ರದೇಶಕ್ಕೆ ತಲುಪುತ್ತಿದೆ ಎಂಬ ದಾಖಲೆಗಳನ್ನು ನೋಡಬೇಕು. ಯಾವುದೇ ಅಕ್ರಮಗಳಿಗೆ ಅವಕಾಶವಾಗದಂತೆ ಕಟ್ಟೆಚ್ಚರ ವಹಿಸಬೇಕು ಎಂದು ವಿಶೇಷ ವೆಚ್ಚ ವೀಕ್ಷಕರು ನಿರ್ದೇಶನ ನೀಡಿದರು.
ವಾಣಿಜ್ಯ ತೆರಿಗೆ, ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಮುತುವರ್ಜಿಯಿಂದ ಎಲ್ಲವನ್ನು ಪರಿಶೀಲನೆ ಮಾಡಬೇಕು. ಚುನಾವಣಾ ಸಮಯ ವಾದ್ದರಿಂದ ವಿಶೇಷ ಗಮನ ಇರಬೇಕು. ವಾಣಿಜ್ಯ ವಹಿವಾಟು, ಹಣಕಾಸು ವ್ಯವಹಾರಗಳ ಬಗ್ಗೆ ಸಂಪೂರ್ಣವಾಗಿ ನಿಗಾ ಇಟ್ಟಿರಬೇಕು. ಪರಸ್ಪರ ಸಮನ್ವಯ ಸಹಕಾರ ಪಡೆದುಕೊಂಡು ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಎಚ್ಚರ ವಹಿಸ ಬೇಕೆಂದು ವಿಶೇಷ ವೆಚ್ಚ ವೀಕ್ಷಕರು ತಿಳಿಸಿದರು.
ಬ್ಯಾಂಕುಗಳಲ್ಲಿ ನಡೆಯುವ ವಹಿವಾಟಿನ ಬಗ್ಗೆ ಹೆಚ್ಚು ಪರಿಶೀಲಿಸಬೇಕಿದೆ. ಯಾವುದೇ ಅಸಹಜ ವಹಿವಾಟುಗಳು ಕಂಡುಬಂದಲ್ಲಿ ಅಗತ್ಯ ಕ್ರಮ ತೆಗೆದುಕೊಳ್ಳಬೇಕು. ಹಣವರ್ಗಾವಣೆಯಂತಹ ಪ್ರಕ್ರಿಯೆಯನ್ನು ಗಮನಿಸಬೇಕು ಎಂದರು.ಚೆಕ್ ಪೋಸ್ಟ್ ಗಳಲ್ಲಿ ಪರಿಶೀಲನೆ ಸಂಬಂಧ ವಹಿಗಳು ನಿರ್ವಹಣೆ ಮಾಡಬೇಕು. ವಾಹನಗಳ ವಿವರ ಇನ್ನಿತರ ಅಂಶಗಳನ್ನು ದಾಖಲು ಮಾಡಿಕೊಳ್ಳಬೇಕು.
ಉಲ್ಲಂಘನೆ ಪ್ರಕರಣಗಳು ಕಂಡುಬಂದಲ್ಲಿ ಕೂಡಲೇ ಕ್ರಮ ವಹಿಸಬೇಕು. ಪಾರದರ್ಶನವಾಗಿ ಚುನಾವಣೆ ನಡೆಯಲು ಎಲ್ಲಾ ಪೂರಕ ಅಗತ್ಯ ಕ್ರಮಗಳನ್ನು ನಿರ್ವಹಿಸಬೇಕು ಎಂದು ರಾಜ್ಯ ವಿಶೇಷ ವೆಚ್ಚ ವೀಕ್ಷಕರಾದ ಬಿ.ಮುರಳಿ ಕುಮಾರ್ ಅವರು ತಿಳಿಸಿದರು.ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ವೆಚ್ಚ ವೀಕ್ಷಕರಾದ ದೆಬಾಶಿಶ್ ಮಜುಮ್ ದಾರ್ ಅವರು ಕ್ಷೇತ್ರದ ಕಾರ್ಯ ನಿರ್ವಹಣೆ ಸಂಬಂಧ ಅಗತ್ಯ ಸೂಚನೆಗಳನ್ನು ನೀಡಿದರು.
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿ ಪಿ.ಎನ್. ರವೀಂದ್ರ, ಬೆಂಗಳೂರು ಗ್ರಾಮಾಂತ ಜಿಲ್ಲೆಯ ಜಿಲ್ಲಾಧಿಕಾರಿ ಡಾ. ಎನ್. ಶಿವಶಂಕರ, ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ್ ಜಿ.ಟಿ. ನಿಟ್ಟಾಲಿ, ಬೆಂಗಳೂರು ಗ್ರಾಮಾಂತ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕೆ.ಎನ್. ಅನುರಾಧ, ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್. ನಾಗೇಶ್, ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಚಿಕ್ಕಬಳ್ಳಾಪುರ ಅಪರ ಜಿಲ್ಲಾಧಿಕಾರಿ ಡಾ. ಎನ್. ತಿಪ್ಪೇಸ್ವಾಮಿ ಹಾಗೂ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.