ಬೇಲೂರು: ಬೇಲೂರು ತಾಲ್ಲೂಕಿನಲ್ಲಿ ಈಗಾಗಲೇ ಉತ್ತಮ ಮಳೆಯಾದ ಹಿನ್ನಲೆಯಲ್ಲಿ ರೈತಾಪಿ ವರ್ಗಕ್ಕೆ ಅಗತ್ಯವಾದ ಬಿತ್ತನೆಬೀಜ, ರಸಗೊಬ್ಬರ ಯಾವುದೇ ಕಾರಣಕ್ಕೂ ಕೊರತೆಯಾಗದಂತೆ ದಾಸ್ತಾನು ಮಾಡಲಾಗಿದೆ. ತಾಲ್ಲೂಕಿನ ಐದು ಕೃಷಿ ಸಂಪರ್ಕ ಕೇಂದ್ರದಲ್ಲಿ ಬಿತ್ತನೆಬೀಜ ವಿತರಣೆಗೆ ಸಕಲ ವ್ಯವಸ್ಥೆ ಮಾಡಲಾಗಿದೆ ಎಂದು ಬೇಲೂರು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಎಸ್.ರಂಗಸ್ವಾಮಿ ಹೇಳಿದರು.
ಪತ್ರಿಕೆಯೊಂದಿಗೆ ಮಾತನಾಡಿದ ಅವರು ವಾಡಿಕೆಯಂತೆ 169 ಮಿಮಿ ಮಳೆಯಾಗಬೇಕಿತ್ತು. ಆದರೆ ಪ್ರಸಕ್ತ ಮುಂಗಾರಿನಲ್ಲಿ ಇಲ್ಲಿಯತನಕ 238 ಮೀಮಿ ಮಳೆಯಾಗಿದೆ. ಐದು ಹೋಬಳಿಗಳ ಪೈಕಿ ಬರಲುಪ್ರದೇಶ ಹಳೇಬೀಡಿಗೆ ಶೇ 99 ರಷ್ಟು ಮಳೆ ಬಂದಿದೆ. ಈ ನಿಟ್ಟಿನಲ್ಲಿ ಕೃಷಿ ತಮ್ಮ ಕೃಷಿ ಚಟುವಟಿಕೆಗಳಿಗೆ ಚಾಲನೆ ನೀಡಿದ್ದಾರೆ. 2024-25 ಸಾಲಿನಲ್ಲಿ ಇಲಾಖೆಯಿಂದ 23430 ಹೆಕ್ಟೇರ್ ಬಿತ್ತನೆ ಕಾರ್ಯದ ಗುರಿ ಹೊಂದಲಾಗಿದೆ.
ಇದರಲ್ಲಿ ಪ್ರಮುಖವಾಗಿ ಸುಮಾರು 17 ಸಾವಿರ ಹೆಕ್ಟೇರ್ ಮುಸುಕಿಜೋಳ ಬಿತ್ತನೆ ಗುರಿಯಿದೆ. ಐದು ಹೋಬಳಿಯಲ್ಲಿ ರೈತರಿಗೆ ಅಗತ್ಯವಾದ ಮುಸುಕಿಜೋಳ, ರಾಗಿ, ಅಲಸಂದೆ ಇನ್ನಿತರ ದಾನ್ಯಗಳ ಬಿತ್ತನೆಯನ್ನು ದಾಸ್ತಾನು ಮಾಡಲಾಗಿದೆ ಎಂದ ಅವರು ರೈತರು ಅಗತ್ಯ ದಾಖಲಾತಿಯನ್ನು ನೀಡಿ ರಿಯಾಯಿತಿ ದರದಲ್ಲಿ ಬಿತ್ತನೆಬೀಜಗಳನ್ನು ಪಡೆಯಬೇಕು ಎಂದ ಅವರು ಕಳೆದ ಭಾರಿಯಲ್ಲಿ ಮುಂಗಾರು ಮತ್ತು ಹಿಂಗಾರು ಮಳೆ ಕೈಕೊಟ್ಟ ಕಾರಣದಿಂದ ಅಂತಹ ಬೇಲೂರು ತಾಲ್ಲೂಕು ತೀವ್ರ ಬರಪೀಡಿತ ತಾಲ್ಲೂಕು ಎಂದು ಘೋಷಣೆ ಮಾಡಲಾಗಿತ್ತು.
ದೇವರ ದಯೆ ಸದ್ಯ ಪ್ರಸಕ್ತ ವರ್ಷದಲ್ಲಿ ಉತ್ತಮ ಮಳೆಯಾಗಿತ್ತಿದೆ. ರೈತರು ಉಳುಮೆ ನಡೆಸಿದ ಬಳಿಕ ದೃಡಿಕರಿಸಿದ ಬಿತ್ತನೆಬೀಜಗಳನ್ನು ಹಾಕಬೇಕಿದೆ ಮತ್ತು ಶಿಪಾರಸ್ಸು ತಕ್ಕಂತೆ ರಸಗೊಬ್ಬರವನ್ನು ಬಳಸಬೇಕಿದೆ. ವಿಶೇಷವಾಗಿ ರೈತರು ಅಂತರಬೆಳೆಯಾಗಿ ದ್ವಿದಳಧಾನ್ಯಗಳ ಬೆಳೆಗಳಿಗೆ ಹೆಚ್ಚಿನ ಒಲವು ನೀಡಬೇಕು ಎಂದು ತಿಳಿಸಿದರು.
ರೈತಾಪಿ ವರ್ಗದ ಕೃಷಿ ಚಟುವಟಿಕೆಗೆ ಯಾವುದೇ ರೀತಿಯಲ್ಲಿ ತೊಂದರೆಯಾಗಂತೆ ತಾಲ್ಲೂಕಿನ 74 ರಸಗೊಬ್ಬರ ಮಾರಾಟದ ಅಂಗಡಿಯಲ್ಲಿ ಎಲ್ಲಾ ರೀತಿಯ ರಸಗೊಬ್ಬರ ದಾಸ್ತಾನು ಮಾಡಿದೆ. ಕೃತಕ ಅಭಾವ ಸೃಷ್ಟಿಗೆ ಯತ್ನಿಸಿದವರ ವಿರುದ್ದ ಮತ್ತು ಹೆಚ್ಚಿನ ಬೆಲೆಯಲ್ಲಿ ಮಾರಾಟ ಕಂಡರೆ ಅವರ ಮೇಲೆ ಇಲಾಖೆ ಕಠಿಣ ಕ್ರಮಕೈಗೊಳ್ಳುತ್ತದೆ. ಅಲ್ಲದೆ ಪ್ರತಿ ರಸಗೊಬ್ಬರದ ಅಂಗಡಿಗಳಲ್ಲಿ ದರಪಟ್ಟಿಯನ್ನು ಪ್ರದರ್ಶಿಸಬೇಕಿದೆ. ಹೆಚ್ಚಿನ ಮಾಹಿತಿಗೆ ರೈತರು ತಮ್ಮ ಹತ್ತಿದ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಮಾಹಿತಿಯನ್ನು ಪಡೆಯಬಹುದು ಎಂದು ಹೇಳಿದರು.