ಬೆಂಗಳೂರು: ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಆಗುತ್ತಿರುವ ತಾರತಮ್ಯ ಧೋರಣೆಯನ್ನು ವಿರೋಧಿಸಿ ರಾಜ್ಯ ಸರ್ಕಾರದ ವತಿಯಿಂದ ಕೇಂದ್ರ ಸರ್ಕಾರದ ವಿರುದ್ಧ ದೆಹಲಿಯಲ್ಲಿ ಪ್ರತಿಭಟನೆ ನಡೆಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.ಈ ವಿಷಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.
ಕೇಂದ್ರ ಸರ್ಕಾರ ರಾಜ್ಯಕ್ಕೆ ಬರಬೇಕಾದ ಹಣವನ್ನು ಸಮರ್ಪಕವಾಗಿ ವಿತರಣೆ ಮಾಡಿಲ್ಲ. ರಾಜ್ಯದ ವಿರುದ್ಧ ಮಲತಾಯಿ ಧೋರಣೆ ಅನುಸರಿಸಲಾಗುತ್ತಿದೆ. ಈ ಹಿಂದೆ ಎಂದು ಕೇಂದ್ರದ ವಿರುದ್ಧ ಪ್ರತಿಭಟನೆ ನಡೆಸಿರಲಿಲ್ಲ. ದೇಶದ ಗಮನ ಸೆಳೆಯಲು ಈ ಧರಣಿಯನ್ನು ನಡೆಸಲಾಗುತ್ತಿದೆ. ಫೆ.7ರ ಬೆಳಿಗ್ಗೆ 11 ಗಂಟೆಗೆ ತಮ್ಮ ಸರ್ಕಾರದ ಶಾಸಕರು ತಾವು ದೆಹಲಿಯ ಜಂತರ್ಮಂಥರ್ನಲ್ಲಿ ಧರಣಿ ನಡೆಸುವುದಾಗಿ ತಿಳಿಸಿದ್ದಾರೆ.
ರಾಜ್ಯದಿಂದ ಕೇಂದ್ರ ಸರ್ಕಾರಕ್ಕೆ ತೆರಿಗೆ ಹಣವನ್ನು ಪಾವತಿಸಲಾಗುತ್ತದೆ. ಆ ಹಣದಲ್ಲಿ ಹಣಕಾಸು ಆಯೋಗದ ನಿರ್ಧಾರದಂತೆ ಕೇಂದ್ರ ರಾಜ್ಯಗಳಿಗೆ ಹಣವನ್ನು ನೀಡಬೇಕು. ಆದರೆ ಇದುವರೆಗೂ ಕೇಂದ್ರ ನಮ್ಮ ರಾಜ್ಯದ ಪಾಲಿನ ಹಣವನ್ನು ಸಮರ್ಪಕವಾಗಿ ವಿತರಣೆ ಮಾಡಿಲ್ಲ. 14ನೇ ಹಣಕಾಸಿನ ಆಯೋಗದ ಪ್ರಕಾರ ಶೇ.42 ಹಾಗೂ 15ನೇ ಹಣಕಾಸಿನ ಆಯೋಗದ ಪ್ರಕಾರ ಶೇ.41ರಷ್ಟು ತೆರಿಗೆ ಹಣ ನೀಡಬೇಕಾಗಿತ್ತು. ಆ ಹಣ ಸಮರ್ಪಕವಾಗಿ ವಿತರಣೆಯಾಗಿಲ್ಲ. ಸುಮಾರು 62 ಸಾವಿರದ 98 ಕೋಟಿ ರೂಪಾಯಿ ಹಣ ಕಡಿಮೆಯಾಗಿದೆ ಎಂದು ಅಂಕಿ ಅಂಶಗಳ ಸಮೇತ ಮುಖ್ಯಮಂತ್ರಿಯವರು ವಿವರಿಸಿದರು.
ನಾಳೆ ಸಂಜೆಯೇ ನಾವು ನಮ್ಮ ಶಾಸಕರೆಲ್ಲರೂ ದೆಹಲಿಗೆ ತೆರಳುತ್ತೇವೆ. ಇದು ರಾಜಕೀಯ ಪ್ರೇರಿತ ಪ್ರತಿಭಟನೆ ಅಲ್ಲ ಎಂದು ಇದೇ ಸಂದರ್ಭದಲ್ಲಿ ಸಪಷ್ಟಪಡಿಸಿದ್ದಾರೆ.ಇದಕ್ಕೂ ಮುನ್ನಾ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೇಂದ್ರದಿಂದ ರಾಜ್ಯ ಸಕ್ಕಾರಕ್ಕೆ ಆಗುತ್ತಿರುವ ತಾರತಮ್ಯ ನೀತಿ ಅನ್ಯಾಯದ ವಿರುದ್ಧ ಅಸಮಾಧಾನ ಹೊರ ಹಾಕಿದರು.