This is the title of the web page
This is the title of the web page

ಪರಿಸರ ಸ್ನೇಹಿ ಗಣಪ ಮೂರ್ತಿಗಳನ್ನು ತಯಾರಿಸಿ ಉತ್ತಮ ಸಂದೇಶ ಸಾರಿದ ಅಗ್ರಹಾರ ದಾಸರಹಳ್ಳಿ ಸರ್ಕಾರಿ ಪ್ರೌಢ ಶಾಲಾ ಮಕ್ಕಳು

ಬೆಂಗಳೂರು: ಪರಿಸರ ಸ್ನೇಹಿ ಗಣಪನ ಮೂರ್ತಿ ತಯಾರಿ ಪ್ರಾತ್ಯಕ್ಷಿಕೆ ಮತ್ತು ಪರಿಸರ ಸ್ನೇಹಿ ಆಚರಣೆಯ ಮಾಹಿತಿ ಕಾರ್ಯಾಗಾರದಲ್ಲಿ, ಪರಿಸರಕ್ಕೆ ಪೂರಕವಾದ ಗಣಪತಿ ತಯಾರಿಕೆ ಬಗ್ಗೆ ಮುಂದಿನ ಪೀಳಿಗೆಯ ಮಕ್ಕಳಲ್ಲಿ ಜಾಗೃತಿ ಮೂಡಿಸುವಂತಹ ಕಾರ್ಯಕ್ಕೆ ಸಹಕಾರ ನೀಡುತ್ತಿರುವ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಪ್ರಿಯಕಷ್ಣ ರವರ ಕಾಳಜಿ ಶ್ಲಾಘನೀಯ ಎಂದು ಕೆಪಿಸಿಸಿ ಹಿಂದುಳಿದ ವರ್ಗ ವಿಭಾಗದ ಉಪಾಧ್ಯಕ್ಷ ವೇಣುಗೋಪಾಲ್ ಪರಿಸರ ಹೇಳಿದರು.

ಗೋವಿಂದರಾಜನಗರದ ಬಿ ಜಿಎಸ್ ಕ್ರೀಡಾಂಗಣದಲ್ಲಿ ಬಿ ಪ್ಯಾಕ್, ಸ್ವಸ್ತಿಕ್ ಚಾರಿಟಬಲ್ ಟ್ರಸ್ಟ್, ಪರಿಸರ ನ್ಯೂಸ್ ಮತ್ತು ಸೌಹಾರ್ದ ಕರ್ನಾಟಕ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಗ್ರಹಾರ ದಾಸರಹಳ್ಳಿ ಸರ್ಕಾರಿ ಪ್ರೌಢಶಾಲೆಯ ಮಕ್ಕಳು ಭಾಗವಹಿಸಿ ಪರಿಸರ ಸ್ನೇಹಿ ಮಣ್ಣಿನ ಗಣೇಶ ಮೂರ್ತಿಗಳನ್ನು ತಯಾರಿಸುವ ವಿಧಾನದ ಪ್ರಾತ್ಯಕ್ಷಿಕೆ ಮತ್ತು ಪರಿಸರ ಸ್ನೇಹಿ ಮಣ್ಣಿನ ಗೌರಿ ಮತ್ತು ಗಣಪತಿ ಹಬ್ಬ ಆಚರಣೆ ಮಾಹಿತಿ ಕಾರ್ಯಾಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಪರಿಸರಕ್ಕೆ ಹಾನಿಯಾಗುವ ವಿಜೃಂಭಣೆ ಬೇಡ: ಹಿಂದೆ ಹಬ್ಬ ಹರಿದಿನಗಳು ಪರಿಸರ ಸ್ನೇಹಿಯಾಗಿ ಆಚರಿಸಲಾಗುತ್ತಿತ್ತು. ಆದರೆ ಇದೀಗ ಅತಿ ವಿಜೃಂಭಣೆಯಿಂದ ಸಮಸ್ಯೆಯಾಗಿದೆ. ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ವಿಜೃಂಭಣೆಯಿಂದ ಸಂಭ್ರಮದ ಗಣೇಶೋತ್ಸವ ಗಳನ್ನು ಆಚರಣೆ ಮಾಡುವಲ್ಲಿ ಆಯ್ಕೆ ಮಾಡುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಸ್ವಸ್ತಿಕ್ ಚಾರಿಟಬಲ್ ಟ್ರಸ್ಟ್ ನ ಅಧ್ಯಕ್ಷ ಡಿ ಸಿ ಯತೀಶ್ ತಿಳಿಸಿದರು.

ಮಕ್ಕಳಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮಾಡುತ್ತಿರುವ ಈ ಕಾರ್ಯಾಗಾರ ಅಭಿನಂದನೀಯ. ಪರಿಸರಕ್ಕೆ ಪೂರಕವಾದ ಮಣ್ಣಿನ ಗಣಪತಿ ರಚನೆಯ ಬಗ್ಗೆ ಮಕ್ಕಳು ಮನೆಯವರ ಹಾಗೂ ಸುತ್ತಮುತ್ತಲಿನವರ ಗಮನಕ್ಕೆ ತಂದು ಪರಿಸರ ಸ್ನೇಹಿಯಾಗಿ ಆಚರಿಸಿದಾಗ ಇಂತಹ ಕಾರ್ಯಾಗಾರಗಳಿಂದ ಪರಿವರ್ತನೆ ಸಾಧ್ಯ ಎಂದು ಸೌಹಾರ್ದ ಕರ್ನಾಟಕ ಸಂಘಟನೆಯ ರಾಜ್ಯಾಧ್ಯಕ್ಷ ರ.ನರಸಿಂಹಮೂರ್ತಿ ಹೇಳಿದರು.

ಕರ್ನಾಟಕ ಚಿತ್ರಕಲಾ ಪರಿಷತ್ತಿನಿಂದ ಪದವಿ ಪಡೆದಿರುವ ದೀಕ್ಷ ಮತ್ತಿತರರು ಅತ್ಯಂತ ಸರಳ ರೀತಿಯಲ್ಲಿ ಪರಿಸರ ಪೂರಕ ಬಣ್ಣ ರಹಿತ ಗಣಪತಿ ತಯಾರಿ ಮಾಡುವ ವಿಧಾನವನ್ನು ಮಕ್ಕಳಿಗೆ ಹೇಳಿಕೊಟ್ಟರು. ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳಿಗೆ ಮಣ್ಣುನ್ನು ನೀಡುತ್ತಿದ್ದಂತೆ ಆಸಕ್ತಿಯಿಂದ ಮಣ್ಣನ್ನು ಹದಮಾಡಿ ಗಣಪತಿಯ ವಿವಿಧ ಭಾಗಗಳ ತಯಾರಿಯಲ್ಲಿ ಮುಂದಾದರು.

ಕೆಲವು ವಿದ್ಯಾರ್ಥಿಗಳು ಹೇಳಿಕೊಟ್ಟದ್ದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ ಆಸಕ್ತಿ ವಿವಿಧ ಬಗೆಯ ಗಣಪತಿಗಳ ತಯಾರಿಕೆ ಗಮನ ಸೆಳೆಯಿತು. ಗಣಪತಿ ರಚನೆಯ ಜತೆ ಭಾಗವಹಿಸಿದ ಮಕ್ಕಳು ಗಣಪತಿಗೆ ಜಯ ಘೋಷಣೆ ಕೂಗಿ ಸಂಭ್ರಮಿಸಿದರು. ಶಾಲಾ ಮುಖ್ಯೋಪಾಧ್ಯಾಯ ಹೆರಾಲ್ಡ್ ರವರು ಮತ್ತು ಶಿಕ್ಷಕ ವೃಂದದ  ಪ್ರೋತ್ಸಾಹದಿಂದ ಸುಮಾರು 300 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿ ಸಂಭ್ರಮಿಸಿದರು.