ವಿಜಯಪುರ: ದೇವನಹಳ್ಳಿಯ ತಾಲ್ಲೂಕು ಕ್ರೀಡಾಂಗಣದಲ್ಲಿ ನಡೆದ, ದೇವನಹಳ್ಳಿ ತಾಲ್ಲೂಕು ಮಟ್ಟದ ಪ್ರೌಢಶಾಲಾ ವಿಭಾಗದ, ೧೭ ವರ್ಷ ವಯೋಮಿತಿಯ, ಕುಸ್ತಿ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದ ಪ್ರಗತಿ ಪ್ರೌಢಶಾಲೆಯ ವಿದ್ಯಾರ್ಥಿಗಳು, ಉತ್ತಮ ಪ್ರದರ್ಶನವನ್ನು ನೀಡಿ ಹಲವಾರು ವಿಭಾಗಗಳಲ್ಲಿ ಜಯಗಳಿಸಿ ಜಿಲ್ಲಾ ಹಂತಕ್ಕೆ ಆಯ್ಕೆಯಾಗಿರುತ್ತಾರೆ.
ಬಾಲಕರ ತಂಡದಲ್ಲಿ, ಇಸ್ಮಾಯಿಲ್ ಖಾನ್ ೯೨ ಕೆಜಿ ವಿಭಾಗದಲ್ಲಿ, ನಿಶಾಂತ್ ಬಿ ರಾಜ್ ೬೫ ಕೆಜಿ ವಿಭಾಗದಲ್ಲಿ, ಪವನ್ ಕುಮಾರ್ ೬೦ ಕೆಜಿ ವಿಭಾಗದಲ್ಲಿ, ಶರಣ್ ರಾಜ್ ೪೮ ಕೆಜಿ ವಿಭಾಗದಲ್ಲಿ, ಹುಸೇನ್ ೪೬ ಕೆಜಿ ವಿಭಾಗದಲ್ಲಿ, ಕೇಶವ ಪ್ರಸಾದ್ ೫೧ ಕೆಜಿ ವಿಭಾಗದಲ್ಲಿ, ರಂಜಿತ್ ಪಿ ಆರ್ ೪೩ ಕೆಜಿ ವಿಭಾಗದಲ್ಲಿ, ಲಿತೀಶ್ ೭೧ ಕೆಜಿ ವಿಭಾಗದಲ್ಲಿ, ಬಾಲಕಿಯರ ತಂಡದಲ್ಲಿ ಎಸ್.ಪಾವನಿ ೬೫ ಕೆಜಿ ವಿಭಾಗದಲ್ಲಿ, ಪಿ.ಆರ್.ಸಹನಾ ೪೩ ಕೆಜಿ ವಿಭಾಗದಲ್ಲಿ ಪ್ರಥಮ ಸ್ಥಾನಗಳನ್ನು ಗಳಿಸಿ, ಜಿಲ್ಲಾ ಹಂತದ ಕುಸ್ತಿ ಪಂದ್ಯಾವಳಿಗೆ ಆಯ್ಕೆ ಆಗಿರುತ್ತಾರೆ.
ಪ್ರಗತಿ ಶಿಕ್ಷಣ ಸಮೂಹ ಸಂಸ್ಥೆಗಳ ಅಧ್ಯಕ್ಷ ಎಂ.ಸತೀಶ್ ಕುಮಾರ್ ಅವರು ಮಾತನಾಡಿ, ಕುಸ್ತಿ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ಮಹತ್ವವನ್ನು ಪಡೆದಿದ್ದು, ದೈಹಿಕ ಮತ್ತು ಮಾನಸಿಕ ಆರೋಗ್ಯದ ದೃಷ್ಟಿಯಿಂದ ಅತ್ಯವಶ್ಯಕ ಪಂದ್ಯವಾಗಿದ್ದು, ನಮ್ಮ ವಿದ್ಯಾರ್ಥಿಗಳು ಈ ಪಂದ್ಯದಲ್ಲಿ, ಉತ್ತಮ ಸಾಧನೆ ತೋರಿ ಜಿಲ್ಲಾ ಹಂತಕ್ಕೆ ಆಯ್ಕೆ ಆಗಿರುವುದು ಹೆಮ್ಮೆಯ ವಿಚಾರವಾಗಿದ್ದು, ಜಿಲ್ಲೆ ಮತ್ತು ರಾಜ್ಯಮಟ್ಟದಲ್ಲೂ ಉತ್ತಮ ಪ್ರದರ್ಶನವನ್ನು ನೀಡಿ ರಾಷ್ಟçಮಟ್ಟಕ್ಕೂ ಆಯ್ಕೆಯಾಗಲಿ ಎಂದರು.
ವಿಜೇತರಾದ ಎಲ್ಲಾ ವಿದ್ಯಾರ್ಥಿಗಳನ್ನು ಪ್ರಗತಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಎಂ.ಸತೀಶ್ ಕುಮಾರ್ ವ್ಯವಸ್ಥಾಪಕ ನಿರ್ದೇಶಕ ಎಸ್.ಕೃಪಾಶಂಕರ್, ಆಡಳಿತ ಅಧಿಕಾರಿ ರಜತಪಟೇಲ್, ಮುಖ್ಯಶಿಕ್ಷಕ ವಿ.ಬಸವರಾಜು, ಹಾಗೂ ಎಲ್ಲಾ ಶಿಕ್ಷಕರು ಅಭಿನಂದಿಸಿದರು.