ಹೊಸಕೋಟೆ: ರಾಜ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ವತಿಯಿಂದ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ತಾಲೂಕು ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘದರಾಜ್ಯಾಧ್ಯಕ್ಷ ಎನ್.ಶ್ರೀನಿವಾಸಚಾರ್, ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರನ್ನು ಮುಂದುವರೆಸಿ ಸೇವಾ ಭದ್ರತೆ ಒದಗಿಸುವ ಕುರಿತು ಮನವಿ ಪತ್ರ
ಸಲ್ಲಿಸಲಾಗಿದೆ.
ರಾಜ್ಯದ 432 ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ 12 ಸಾವಿರಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ಹಲವಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಗಣನೀಯ ಪಾತ್ರ ವಹಿಸುತ್ತಿದ್ದಾರೆ. ನಮಗೆ ಸೇವಾಭದ್ರತೆ ನೀಡಿ ಯುಜಿಸಿ ನಿಯಮಾವಳಿಗಳಂತೆ ವೇತನ ಹೆಚ್ಚಿಸಬೇಕೆಂದು ಹಲವಾರು ಬಾರಿ ಉಪವಾಸ, ಧರಣಿ, ಪ್ರತಿಭಟನೆ ಮತ್ತು ಹೋರಾಟಗಳ ಮೂಲಕ ಬೇಡಿಕೆಗಳನ್ನು ಈಡೇರಿಸಲು ಮನವಿ ಮಾಡಿಕೊಳ್ಳಲಾಗಿತ್ತು.
ನೂತನ ಸರಕಾರ ಅಧಿಕಾರಕ್ಕೆ ಬರುವ ಮುನ್ನಪಕ್ಷದ ಪ್ರಣಾಳಿಕೆಯಲ್ಲಿ ಸೇವಾ ಭದ್ರತೆಯನ್ನು ನೀಡುವುದಾಗಿ ಹೇಳಲಾಗಿತ್ತು. ಹಿಂದಿನ ಸರಕಾರದಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದಾಗಲೂ ಸದನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅತಿಥಿ ಉಪನ್ಯಾಸಕರ ವಿಷಯವನ್ನು ಪ್ರಸ್ಥಾಪ ಮಾಡಿ ಸೇವಾ ಭದ್ರತೆಯನ್ನು ನೀಡಲೇಬೇಕೆಂದು ಒತ್ತಾಯಿಸಿದ್ದರು.
ಇದೀಗ ತಾವೇ ಅಧಿಕಾರಿದಲ್ಲಿರುವುದರಿಂದ ಈ ಬಗ್ಗೆ ಸೂಕ್ತತೀರ್ಮಾನವನ್ನು ತೆಗೆದುಕೊಂಡು ಸಾವಿರಾರು ಅತಿಥಿ ಉಪನ್ಯಾಸಕರು ಹಲವಾರು ವರ್ಷಗಳಿಂದಅತ್ಯಂತ ಕಡಿಮೆ ಗೌರವಧನಕ್ಕೆ ದುಡಿಯುತ್ತಿದ್ದು, ಸೇವಾಭದ್ರತೆಯಿಲ್ಲದೆ ಕುಟುಂಬಗಳ ನಿರ್ವಹಣೆ ಮಾಡುವುದು ಬಹಳಷ್ಟು ಕಟ್ಟವಾಗಿದೆ. ಹಾಗಿದ್ದರೂ ಸಹ ಸಾವಿರಾರು ಬಡ, ಮಧ್ಯಮ ವರ್ಗದ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ನಿರಂತರ ಪಾತ್ರವನ್ನು ವಹಿಸುತ್ತಿರುವುದರಿಂದ ರಾಜ್ಯ ಸರಕಾರ ನಮಗೆ ಸೇವಾಭದ್ರತೆಯನ್ನು ನೀಡಿ ನ್ಯಾಯಸಮ್ಮತವಾದ ಬೇಡಿಕೆಗಳನ್ನು ಈಡೇರಿಸಲು ಕ್ರಮ ಕೈಗೊಳ್ಳಬೇಕು.
ಪ್ರಥಮ ಹಂತವಾಗಿ ತರಗತಿಗಳನ್ನು ಬಹಿಷ್ಕರಿಸಿತಹಶೀಲ್ದಾರ್ ಮೂಲಕ ಈ ಮನವಿಯನ್ನು ಸಲ್ಲಿಸುತ್ತಿದ್ದು, ಡಿಸೆಂಬರ್ನಲ್ಲಿ ನಡೆಯುವಅಧಿವೇಶನದಲ್ಲಿ ಅತಿಥಿ ಉಪನ್ಯಾಸಕರ ಬೇಡಿಕೆಗಳ ಬಗ್ಗೆಸ್ಪಂದಿಸದಿದ್ದಲ್ಲಿ ಹೋರಾಟವನ್ನು ತೀವ್ರಗೊಳಿಸು
ವುದು ಅನಿವಾರ್ಯವಾಗಲಿದೆ ಎಂದರು.
2022-23ನೇ ಸಾಲಿನಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರನ್ನು ಮುಂದಿನ ವರ್ಷಕ್ಕೆ ಆನ್ಲೈನ್ ಕೌನ್ಸಿಲಿಂಗ್ ಮೂಲಕ ನೇಮಕ ಮಾಡದೆ ಈಗ ಸೇವೆ ಸಲ್ಲಿಸುತ್ತಿರುವವರನ್ನೇ ಮುಂದುವರೆಸಬೇಕು,ಎಲ್ಲಾ ಅತಿಥಿ ಉಪನ್ಯಾಸಕರಿಗೂ ಸೇವಾ ಭದ್ರತೆಯನ್ನು ಒದಗಿಸಬೇಕು, ಎಂ.ಫಿಲ್ ಪದವಿಯನ್ನು ವೇತನ ನೀಡಲು ಪರಿಗಣಿಸಬೇಕು, ಯುಜಿಸಿ ನಿಯಮದಂತೆ ವೇತನವನ್ನು ಹೆಚ್ಚಿಸಬೇಕು, ನಿವೃತ್ತಿ ಅಂಚಿನಲ್ಲಿರುವ ಅತಿಥಿ ಉಪನ್ಯಾಸಕರಿಗೆ 25 ಲಕ್ಷ ರೂ.ಗಳ ಇಡುಗಂಟು ನೀಡಬೇಕು,
ಮಹಿಳಾ ಅತಿಥಿ ಉಪನ್ಯಾಸಕರಿಗೆ ಸರಕಾರದ ನಿಯಮದಂತೆ ವೇತನ ಸಹಿತ ಹೆರಿಗೆ ರಜೆ ನೀಡಬೇಕು, ಪ್ರತಿ ತಿಂಗಳು 5ನೇ ತಾರೀಖಿನೊಳಗೆ ವೇತನ ನೀಡಬೇಕು, ಈಗ ಸೇವೆ ಸಲ್ಲಿಸುತ್ತಿರುವ ಅಥಿಥಿ ಉಪನ್ಯಾಸಕರಲ್ಲಿ 15 ಗಂಟೆಗೆ ಕಾರ್ಯಭಾರ ಹೆಚ್ಚಾದಲ್ಲಿ ಹೆಚ್ಚಿಸಿಕೊಳ್ಳಲು ಅವಕಾಶ ಕಲ್ಪಿಸಿಕೊಡಬೇಕು, ಆರೋಗ್ಯ ವಿಮಾ ಸೌಲಭ್ಯ ಒದಗಿಸಬೇಕು ಎಂಬುದು ಪ್ರಮುಖ ಬೇಡಿಕೆಗಳಾಗಿವೆ ಎಂದು ತಿಳಿಸಿದರು.ಉಪನ್ಯಾಸಕರಾದ ಡಾ: ಎಂ.ವಿ.ದ್ಯಾವಪ್ಪ, ಎಂ. ಶ್ರೀನಿವಾಸಪ್ಪ, ಜಿ. ತ್ರಿಮೂರ್ತಿ, ಎ.ದಾಮೋದರ ರೆಡ್ಡಿ ಇನ್ನಿತರರು ಭಾಗವಹಿಸಿದ್ದರು.