ಹೊಸಕೋಟೆ: ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿ ವ್ಯಾಸಂಗದೊಂದಿಗೆ ಏಕಾಗ್ರತೆ ವಹಿಸಿ ಶಿಸ್ತುಬದ್ಧವಾಗಿ ಶ್ರಮ ವಹಿಸಿದರೆ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ರೂಪುಗೊಳ್ಳುವುದರೊಂದಿಗೆ ಉತ್ತಮ ಸಮಾಜ ನಿರ್ಮಾಣದಲ್ಲಿ ತೊಡಗಲು ಸಹಕಾರಿಯಾಗುತ್ತದೆ ಎಂದು ಮಾಲೂರಿನ ಸರ್ಕಲ್ ಇನ್ಸ್ಪೆಕ್ಟರ್ ವಸಂತಕುಮಾರ್ ಹೇಳಿದರು.
ಅವರು ನಗರದ ಸರಕಾರಿ ಪ್ರಥಮ ದರ್ಜೆಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿ ಗಾಗಿ ಏರ್ಪಡಿಸಿದ್ದ ಯಶಸ್ಸು, ಸಮಸ್ಯೆ ಮತ್ತು ಸವಾಲುಗಳ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಗುರುಗಳ ಮಾರ್ಗದರ್ಶನ, ತಂದೆ-ತಾಯಿಗಳಆಶೀರ್ವಾದದೊಂದಿಗೆ ವಿದ್ಯಾರ್ಥಿಗಳು ಸಹ ಸರ್ವತೋಮುಖ ಬೆಳವಣಿಗೆ ಹೊಂದಲು ಸಾಧ್ಯವಾಗುತ್ತದೆ.
ಈ ದಿಶೆಯಲ್ಲಿ ಸೂಕ್ತ ಮಾರ್ಗದರ್ಶನ ನೀಡುವಲ್ಲಿ ಇಂತಹ ಕಾರ್ಯಕ್ರಮಗಳು ಅಗತ್ಯ ವಾಗಿದೆ ಎಂದರು.ತಾಲೂಕು ವಕೀಲರ ಸಂಘದ ಉಪಾಧ್ಯಕ್ಷ ಕೆ. ನಾಗರಾಜ್ ಮಾತನಾಡಿ ವಿದ್ಯಾರ್ಥಿಗಳು ದೇಶದ ಸಂವಿಧಾನದ ಮಹತ್ವವನ್ನು ತಿಳಿದುಕೊಳ್ಳಬೇಕಾಗಿದೆ. ಡಾ: ಬಿ.ಆರ್.ಅಂಬೇಡ್ಕರ್ ರವರ ಪರಿಶ್ರಮ ಸಾಧನೆಯಿಂದ ದೇಶದ ಎಲ್ಲಾ ಜಾತಿ,ಧರ್ಮ, ಭಾಷೆಗಳನ್ನು ಒಂದುಗೂಡಿಸುವಂತಹ ಪವಿತ್ರವಾದ ಸಂವಿಧಾನ ರಚನೆ ಸಾಧ್ಯವಾಯಿತು.
ಭಾರತದ ಜಾತ್ಯಾತೀತ ಮತ್ತು ಧರ್ಮಾತೀತ ಮೌಲ್ಯಗಳನ್ನು ಉಳಿಸಲು ವಿದ್ಯಾರ್ಥಿಗಳು ಮುಂದಾಗಬೇಕಾದ್ದು ಇಂದಿನ ಪರಿಸ್ಥಿತಿಯಲ್ಲಿ ಅತ್ಯಶ್ಯವಾಗಿದೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಿನ್ಸಿಪಾಲ್ ಡಾ: ಮುನಿನಾರಾಯಣಪ್ಪ ಮಾತನಾಡಿ ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಇಂತಹ ತರಬೇತಿಶಿಬಿರಗಳನ್ನು ಕಾಲೇಜಿನಲ್ಲಿ ಆಯೋಜಿಸುತ್ತಿದ್ದು
ವಿದ್ಯಾರ್ಥಿಗಳು ಇದರ ಸದುಪಯೋಗಪಡಿಸಿ ಕೊಂಡು ತಮ್ಮ ಗುರಿ ತಲುಪಲು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಿರ್ಭೀತಿಯಿಂದ ಎದುರಿಸಲು ಸಾಧ್ಯವಾಗುತ್ತದೆ ಎಂದರು.ಉಪನ್ಯಾಸಕರಾದ ಡಾ: ಈರಣ್ಣ, ಡಾ: ಕಾವಲಯ್ಯ, ಡಾ: ಅಶ್ವಥನಾರಾಯಣ್, ಎನ್. ಶ್ರೀನಿವಾಸಚಾರ್, ಡಾ: ಅಡಿವಾಳ್ ವೆಂಕಟೇಶ್, ಡಾ: ಶರಣಪ್ಪ, ಗ್ರಂಥಪಾಲಕ ಶ್ರೀನಿವಾಸಪ್ಪ, ತ್ರಿಮೂರ್ತಿ ಇನ್ನಿತರರು ಭಾಗವಹಿಸಿದ್ದರು.