ಚಾಮರಾಜನಗರ: ಸಾರ್ವತ್ರಿಕ ಲೋಕಸಭಾ ಚುನಾವಣೆ 2024ರ ಸಂಬಂಧ ನೂತನ ಮತ್ತು ಭವಿಷ್ಯದ ಯುವ ಮತದಾರರಲ್ಲಿ ಚುನಾವಣೆ ಮತ್ತು ಮತದಾನದ ಪ್ರಕ್ರಿಯೆಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮವನ್ನು ಎಲ್ಲಾ ತಾಲೂಕಿನ ಗ್ರಾಮ ಪಂಚಾಯಿತಿಗಳಲ್ಲಿ ಹಮ್ಮಿಕೊಳ್ಳಲಾಗಿದೆ.
ಇದರ ಭಾಗವಾಗಿ ಪ್ರತಿ ಸಮುದಾಯ ಸಂಪನ್ಮೂಲ ವ್ಯಕ್ತಿಗಳು ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಸಂವರ್ಧನಾ ಸಂಸ್ಥೆ (ಎನ್.ಆರ್.ಎಲ್.ಎಂ) ಯೋಜನೆಯಡಿ ಗ್ರಾಮೀಣ ಭಾಗದ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಮುಖ್ಯ ಪುಸ್ತಕ ಬರಹಗಾರರು, ಸಮುದಾಯ ಸಂಪನ್ಮೂಲ ವ್ಯಕ್ತಿಗಳು, ಕೃಷಿ ಸಖಿಯರು, ಪಶು ಸಖಿಯರು, ವನ ಸಖಿಯರು, ಕೃಷಿ ಉದ್ಯೋಗ ಸಖಿಯರು ಮತ್ತು ಇತರೆ ಸಖಿಯರು ಪ್ರತಿ ಹಳ್ಳಿಗಳಲ್ಲಿ ಪ್ರತಿ ಮನೆಮನೆಗೂ ಭೇಟಿ ನೀಡಿ ಮತದಾರರ ಪಟ್ಟಿಯಿಂದ ಹೊರಗೆ ಉಳಿದಿರುವ ಮತದಾರರು ಹಾಗೂ ಯುವ ಮತದಾರರನ್ನು ನಮೂನೆ-6 ರಲ್ಲಿ ನೊಂದಣಿ ಮಾಡಿಸಿ ಅದರ ಮಾಹಿತಿಗಳನ್ನು ಸಂಬಂಧಪಟ್ಟ ಬಿ.ಎಲ್.ಒ ಗಳ ಮುಖಾಂತರ ಸಲ್ಲಿಸಿದ್ದಾರೆ. ಸ್ಥಳದಲ್ಲಿಯೇ ವಿಹೆಚ್ಎ ಆಪ್ ನಲ್ಲಿಯೂ ಕೂಡ ಮತದಾರರನ್ನು ಆನ್ಲೈನ್ ಮೂಲಕ ನೋಂದಾಯಿಸಲಾಗಿದೆ.
ಜಿಲ್ಲೆಯಲ್ಲಿ ಒಂದೇ ದಿನ ಸುಮಾರು 600 ಯುವ ಮತದಾರರನ್ನು ನೊಂದಣಿ ಮಾಡಿಸಲಾಗಿದೆ. ಡಿಸೆಂಬರ್ ಮಾಹೆಯ ಅಂತ್ಯದೊಳಗೆ ಶೇ.100ರಷ್ಟು ಪ್ರಗತಿಯನ್ನು ಸಾಧಿಸಲು ಕ್ರಮ ವಹಿಸಲಾಗುತ್ತಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರಾದ ಆನಂದ್ ಪ್ರಕಾಶ್ ಮೀನಾ ಅವರು ತಿಳಿಸಿದ್ದಾರೆ.