ಬೆಂಗಳೂರು: 2024ರ ಲೋಕಸಭಾ ಚುನಾವಣೆಯ ಹೊಸ್ತಿಲಿನಲ್ಲಿಯೇ ಕೆಲ ಅನಿರೀಕ್ಷಿತ ಘಟನೆಗಳು ರಾಜಕಾರಣದಲ್ಲಿ ನಡೆದು ಹೋಗುತ್ತಿದೆ. ಅದರಲ್ಲೂ ಪ್ರಮುಖವಾಗಿ ಬಿಜೆಪಿ-ಜೆಡಿಎಸ್ ಮೈತ್ರಿಯಾಗಿ ಚುನಾವಣೆ ಎದುರಿಸುತ್ತಿರುವ ಈ ಸಂದರ್ಭದಲ್ಲಿ, ಮಂಡ್ಯ ಲೋಕಸಭಾ ಅಖಾಡ ರಂಗೇರ ತೊಡಗಿದೆ. ಬಿಜೆಪಿ-ಜೆಡಿಎಸ್ ಮೈತ್ರಿಯಾಗಿ ಎನ್ಡಿಎ ಅಭ್ಯರ್ಥಿ ಕಣಕ್ಕಿಳಿಯುತ್ತಾರೆ ಎಂದಿದ್ದೇ ತಡ, ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಫುಲ್ ಆ್ಯಕ್ಟೀವ್ ಆಗಿದ್ದಾರೆ.
ನಿನ್ನೆ ತಡರಾತ್ರಿ ಮಾಜಿ ಸಚಿವ ಹಾಗೂ ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದ ಬಿಜೆಪಿಯ ಮುಖಂಡ ಡಾ.ಕೆ.ಸಿ. ನಾರಾಯಣಗೌಡರ ನಿವಾಸಕ್ಕೆ ದಿಢೀರ್ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಭೇಟಿ ನೀಡಿದ್ದು, ಲೋಕಸಭಾ ಚುನಾವಣೆಯಲ್ಲಿ ತಮ್ಮ ಜೊತೆಗೆ ನಿಲ್ಲುವಂತೆ ನಾರಾಯಣಗೌಡರ ಜೊತೆಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಇನ್ನು ಈ ಭೇಟಿಗೆ ವೇದಿಕೆ ಕಲ್ಪಿಸಿಕೊಟ್ಟಿದ್ದು, ಮಾಜಿ ಉಪ-ಮುಖ್ಯಮಂತ್ರಿ ಡಾ.ಸಿ. ಎನ್.ಅಶ್ವತ್ಥ್ನಾರಾಯಣ್ ಎನ್ನಲಾಗಿದ್ದು, ತಡರಾತ್ರಿ ಡಾಲರ್ಸ್ ಕಾಲೋನಿಯ ನಾರಾಯಣಗೌಡರ ನಿವಾಸದಲ್ಲಿ ಸುದೀರ್ಘವಾದ ಒಂದೂವರೆ ಘಂಟೆಗಳ ಕಾಲ ಚರ್ಚೆ ನಡೆದಿದ್ದು, ನಾರಾಯಣಗೌಡ್ರು ಕೂಡ ಬಿಜೆಪಿ- ಜೆಡಿಎಸ್ ಮೈತ್ರಿಗೆ ಸ್ಪಂದಿಸುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ.
ರಿವರ್ಸ್ ಆಪರೇಷನ್ಗೆ ಮುಂದಾದ ಮೈತ್ರಿ ಮುಖಂಡರು!ಮಂಡ್ಯದಲ್ಲಿ ಮಾಜಿ ಸಚಿವ ಡಾ.ಕೆ. ಸಿ.ನಾರಾಯಣಗೌಡರನ್ನು ಸೆಳೆಯಲು ಯತ್ನಿಸಿದ್ದ ಕಾಂಗ್ರೆಸ್ ನಾಯಕರಿಗೆ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಡಾ.ಸಿ. ಎನ್.ಅಶ್ವತ್ಥ್ನಾರಾಯಣ್ ಸಖತ್ ಆಗಿಯೇ ಶಾಕ್ ಕೊಟ್ಟಿದ್ದಾರೆ. ಮಂಡ್ಯದಲ್ಲಿ ಆಪರೇಷನ್ಗೆ ರಿವರ್ಸ್ ಆಪರೇಷನ್ ಮಾಡಲು ಬಿಜೆಪಿ-ಜೆಡಿಎಸ್ ನಾಯಕರುಗಳು ಮುಂದಾಗಿದ್ದಾರೆ. ಇನ್ನು, ರಾಜ್ಯದ 28 ಕ್ಷೇತ್ರಗಳಲ್ಲಿ ಬಿಜೆಪಿ- ಜೆಡಿಎಸ್ ಮೈತ್ರಿಯಾಗಿ ಎದುರಿಸಲು ಸಜ್ಜಾದ ಹಿನ್ನೆಲೆಯಲ್ಲಿ, ಮಂಡ್ಯ ಬಿಜೆಪಿಗೆ ಬಿಟ್ಟುಕೊಡಬೇಕೆಂದು ಪಟ್ಟು ಹಿಡಿದಿದ್ದ ಕೆ.ಸಿ. ನಾರಾಯಣಗೌಡರನ್ನು ಮನವೊಲಿಸುವಲ್ಲಿ ಬಿಜೆಪಿ- ಜೆಡಿಎಸ್ ನಾಯಕರು ಸಫಲರಾಗಿದ್ದಾರೆ.
ಕೆ.ಸಿ.ನಾರಾಯಣಗೌಡ. ಮಾಜಿ ಸಚಿವ. ಹಾಲಿ ಸಂಸದೆ ಸುಮಲತಾ ಅಂಬರೀಶ್ ಅವರಿಗೆ ಬಿಜೆಪಿ ಟಿಕೆಟ್ ಕೊಡಬೇಕೆಂದು ಪಟ್ಟು ಹಿಡಿದಿದ್ರು. ಕೆ.ಸಿ. ನಾರಾಯಣಗೌಡರ ಮಾತಿಗೆ ಸೊಪ್ಪು ಹಾಕದ ಬಿಜೆಪಿ ಹೈಕಮಾಂಡ್ ನಾಯಕರು, ಮಂಡ್ಯ ಕ್ಷೇತ್ರವನ್ನು ಜೆಡಿಎಸ್ಗೆ ಬಿಟ್ಟು ಕೊಟ್ಟಿತ್ತು. ಈ ಹಿನ್ನಲೆಯಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಲು ತೆರೆಮರೆಯಲ್ಲಿ ವೇದಿಕೆ ಕೆ.ಸಿ.ನಾರಾಯಣಗೌಡ ಸಿದ್ಧಪಡಿಸಿಕೊಳ್ಳುತ್ತಿದ್ದರು.ಜೆಡಿಎಸ್-ಬಿಜೆಪಿ ಮುಖಂಡರು ನಾರಾಯಣಗೌಡರ ಮನೆಗೆ ಆಶ್ಚರ್ಯಕರವಾಗಿ ಭೇಟಿ ನೀಡಿ ಅವರನ್ನು ತಮ್ಮತ್ತ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನಲಾಗಿದೆ.