ಚಾಮರಾಜನಗರ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಂ. ಶ್ರೀಧರ ಅವರು ಇಂದು ನಗರಸಭಾ ಅಧಿಕಾರಿಗಳೊಂದಿಗೆ ಚಾಮರಾಜನಗರ ಪಟ್ಟಣದಲ್ಲಿರುವ ಸಾರ್ವಜನಿಕ ಹಾಗೂ ಸಮುದಾಯ ಶೌಚಾಲಯಗಳಿಗೆ ದಿಢೀರ್ ಭೇಟಿ ನೀಡಿ ಶೌಚಾಲಯಗಳ ಸ್ವಚ್ಚತೆ ಹಾಗೂ ನಿರ್ವಹಣೆಯನ್ನು ಪರಿಶೀಲಿಸಿದರು.
ನಗರದ ನ್ಯಾಯಾಲಯ ರಸ್ತೆ, ತಾಲ್ಲೂಕು ಕಚೇರಿ, ಸರ್ಕಾರಿ ಆಸ್ಪತ್ರೆ, ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಹತ್ತಿರ, ಸಂತೇಮರಹಳ್ಳಿ ವೃತ್ತ, ದೊಡ್ಡಂಗಡಿ ಬೀದಿ ವೃತ್ತ, ಹಳೆ ಬಸ್ ನಿಲ್ದಾಣ, ಮಾರ್ಕೆಟ್ ಹತ್ತಿರ ಹಾಗೂ ಸತ್ತಿ ರಸ್ತೆಯಲ್ಲಿರುವ ಸಾರ್ವಜನಿಕ ಶೌಚಾಲಯಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಅಲ್ಲಿನ ನಿರ್ವಹಣಾ ವ್ಯವಸ್ಥೆಯನ್ನು ವೀಕ್ಷಿಸಿದರು.
ಚಾಮರಾಜನಗರ ಪಟ್ಟಣದಲ್ಲಿ ಚಾಲ್ತಿಯಲ್ಲಿರುವ ಸಾರ್ವಜನಿಕ ಹಾಗೂ ಸಮುದಾಯ ಶೌಚಾಲಯಗಳನ್ನು ಉತ್ತಮ ಜನೋಪಯೋಗಿಯಾಗಿ ನಿರ್ವಹಣೆ ಮಾಡುವ ನಿಟ್ಟಿನಲ್ಲಿ ಶೌಚಾಲಯಗಳ ಸ್ವಚ್ಚತೆ ಬಗ್ಗೆ ಗಮನಹರಿಸಬೇಕು. ಶೌಚಾಲಯಗಳ ಕಟ್ಟಡದ ದುರಸ್ತಿಗೆ ಸಕಾಲದಲ್ಲೇ ಅಗತ್ಯ ಕ್ರಮ ಕೈಗೊಂಡು ಸುತ್ತಮುತ್ತಲಿನ ಪರಿಸರವನ್ನು ಕಾಪಾಡುವ ನಿಟ್ಟಿನಲ್ಲಿ ಸಾರ್ವಜನಿಕ ಶೌಚಾಲಯಗಳನ್ನು ನಿರ್ವಹಣೆ ಮಾಡಲು ಕ್ರಮ ವಹಿಸುವಂತೆ ನಗರಸಭಾ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ನಗರಸಭೆಯ ಪರಿಸರ ಅಭಿಯಂತರರಾದ ಗಿರಿಜಮ್ಮ, ಹಿರಿಯ ಆರೋಗ್ಯ ನಿರೀಕ್ಷಕರಾದ ಮಂಜುನಾಥ್, ಸುಷ್ಮಾ, ಆರೋಗ್ಯ ನಿರೀಕ್ಷಣಾಧಿಕಾರಿ ನಾರಾಯಣಸ್ವಾಮಿ, ಇತರರು ಇದ್ದರು.