ಹೈದರಾಬಾದ್: ‘ಶಕ್ತಿಶಾಲಿ’ ಬ್ಯಾಟಿಂಗ್ ಸರದಿಯ ಮೂಲಕ ಎದುರಾಳಿಗಳ ಬೌಲಿಂಗ್ ಅನ್ನು ನಿರ್ದಯವಾಗಿ ದಂಡಿಸುತ್ತಿರುವ ಸನ್ರೈಸರ್ಸ್ ಹೈದರಾಬಾದ್ ತಂಡ, ಅಂಕಪಟ್ಟಿಯ ತಳದಲ್ಲಿರುವ ರಾಯಲ್ ಚಾಲೆಂಜರ್ ಬೆಂಗಳೂರು ತಂಡವನ್ನು ಗುರುವಾರ ನಡೆಯಲಿರುವ ಐಪಿಎಲ್ ಪಂದ್ಯದಲ್ಲಿ ಎದುರಿಸಲಿದೆ.
ಐಪಿಎಲ್ನ ಈ ಆವೃತ್ತಿಯೊಂದರಲ್ಲೇ ಹೈದರಾಬಾದ್ ತಂಡ ಮೂರು ಬಾರಿ 250ಕ್ಕಿಂತ ಹೆಚ್ಚು ಮೊತ್ತ ಪೇರಿಸಿದೆ. ದಾಖಲೆಗಳ ಮೇಲೆ ದಾಖಲೆಗಳನ್ನು ಬರೆಯುತ್ತಿದೆ. ಮುಂಬೈ ಇಂಡಿಯನ್ಸ್ ಮೇಲೆ 277 ರನ್ ಹೊಡೆದಿದ್ದ ಪ್ಯಾಟ್ ಕಮಿನ್ಸ್ ಬಳಗ, ನಂತರ ಆರ್ಸಿಬಿ ವಿರುದ್ಧ ಬೆಂಗಳೂರಿನಲ್ಲಿ 3 ವಿಕೆಟ್ಗೆ 287 ರನ್ಗಳ ದಾಖಲೆ ಮೊತ್ತ ಗಳಿಸಿತು.
ಇದು ಸಾಲದೆಂಬಂತೆ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಪವರ್ಪ್ಲೇ ಅವಧಿಯಲ್ಲೇ ವಿಕೆಟ್ ನಷ್ಟವಿಲ್ಲದೇ 125 ರನ್ ಚಚ್ಚಿ ಐಪಿಎಲ್ನಲ್ಲಿ ಮೊದಲ ಬಾರಿ 300ರ ಬಳಿ ಸಾಗುವ ಸೂಚನೆ ನೀಡಿತ್ತು. ದುರ್ಬಲ ಬೌಲಿಂಗ್ ಹೊಂದಿರುವ ಆರ್ಸಿಬಿ ವಿರುದ್ಧವೂ ಹೈದರಾಬಾದ್ ತನ್ನ ದಂಡಯಾತ್ರೆಯನ್ನು ಮುಂದುವರಿಸಿದಲ್ಲಿ ಅಚ್ಚರಿಯೇನಿಲ್ಲ. ಏಳು ವಿಕೆಟ್ಗಳೊಡನೆ ಆರ್ಸಿಬಿಯ ಉತ್ತಮ ಬೌಲರ್ ಎನಿಸಿರುವ ಯಶ್ ದಯಾಳ್ ಬೌಲರ್ಗಳ ಪಟ್ಟಿಯಲ್ಲಿ 24ನೇ ಸ್ಥಾನದಲ್ಲಿದ್ದಾರೆ ಎಂದರೆ ತಂಡದ ಬೌಲಿಂಗ್ ಶಕ್ತಿ ಊಹಿಸಬಹುದು.