ನವದೆಹಲಿ: ಸುಪ್ರೀಮ್ ಕೋರ್ಟ್ ಇಂದು ಅದಾನಿ ಮತ್ತು ಹಿಂಡನ್ ಬರ್ಗ್ ಪ್ರಕರಣದ ತನಿಖೆಯನ್ನು ಸೆಬಿಯಿಂದ ಎಸ್ಐಟಿಗೆ ವರ್ಗಾಯಿಸಲು ನಿರಾಕರಿಸಿದೆ.
ಅದಾನಿ ಗ್ರೂಪ್ ವಿರುದ್ಧ ಹಿಂಡನಬರ್ಗ್ ಮಾಡಿದ ಆರೋಪಗಳ ಸಂಬಂಧ ಸೆಬಿ ಸದ್ಯ ತನಿಖೆ ನಡೆಸುತ್ತಿದೆ. ಈ ತನಿಖೆಯನ್ನು ಎಸ್ಐಟಿಗೆ ವರ್ಗಾಯಿಸಲು ಸೂಕ್ತ ಕಾರಣಗಳು ಇಲ್ಲ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ನೇತೃತ್ವದ ನ್ಯಾಯಪೀಠ ಈ ತೀರ್ಮಾನಕ್ಕೆ ಬಂದಿದೆ.
ಹಿಂಡನ್ಬರ್ಗ್ ರಿಸರ್ಚ್ ಅಥವಾ ಇನ್ಯಾವುದಾದರೂ ವರದಿಯ ಆಧಾರದ ಮೇಲೆ ಪ್ರಕರಣವನ್ನು ಪ್ರತ್ಯೇಕವಾಗಿ ತನಿಖೆ ಮಾಡುವ ಅವಶ್ಯಕತೆ ಇಲ್ಲ. ಹಾಗೆ ತನಿಖೆಗೆ ಆದೇಶಿಸುವಂತಹ ಅಂಶಗಳೂ ಕಾಣುತ್ತಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಈ ನ್ಯಾಯಪೀಠದಲ್ಲಿ ಸಿಜೆಐ ಡಿವೈ ಚಂದ್ರಚೂಡ್ ಜೊತೆಗೆ ನ್ಯಾಯಮೂರ್ತಿಗಳಾದ ಜೆಬಿ ಪರ್ದಿವಾಲ ಮತ್ತು ಮನೋಜ್ ಮಿಶ್ರಾ ಅವರಿದ್ದಾರೆ.ಅದಾನಿ ಹಿಂಡನ್ಬರ್ಗ್ ಪ್ರಕರಣದಲ್ಲಿ ಸಂಬಂಧ 22 ವಿಷಯಗಳ ಪೈಕಿ 20ರಷ್ಟನ್ನು ಸೆಬಿ ತನಿಖೆ ಪೂರ್ಣಗೊಳಿಸಿದೆ. ಇನ್ನೆರಡು ಪ್ರಕರಣಗಳು ಬಾಕಿ ಇವೆ. ಮುಖ್ಯ ನ್ಯಾಯಮೂರ್ತಿಗಳು ಈ ಎರಡು ಪ್ರಕರಣದ ತನಿಖೆಯನ್ನು 3 ತಿಂಗಳಲ್ಲಿ ಮುಗಿಸುವಂತೆ ಸೆಬಿಗೆ ಆದೇಶಿಸಿದ್ದಾರೆ.