ದೆಹಲಿ: ವೈದ್ಯಕೀಯ ಕಾರಣಗಳಿಗಾಗಿ ಮಧ್ಯಂತರ ಜಾಮೀನು ಅವಧಿಯನ್ನು ಏಳು ದಿನಗಳವರೆಗೆ ವಿಸ್ತರಿಸುವಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಲ್ಲಿಸಿದ್ದ ಅರ್ಜಿಯ ತುರ್ತು ವಿಚಾರಣೆಗೆ ಅನುಮತಿ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ತಮಗೆ ಗಂಭೀರ ಸ್ವರೂಪದ ಕಾಯಿಲೆ ಇದ್ದು, ಪಿಇಟಿ ಹಾಗೂ ಸಿಟಿ ಸ್ಕ್ಯಾನ್ ಮಾಡಬೇಕಾಗಿರುವ ಹಿನ್ನೆಲೆಯಲ್ಲಿ 7 ದಿನಗಳ ಕಾಲ ಜಾಮೀನು ವಿಸ್ತರಿಸುವಂತೆ ಕೇಳಿದ್ದರು. ಸುಪ್ರೀಂ ಕೋರ್ಟ್ ಜೂನ್ 1ರವರೆಗೆ ಮಧ್ಯಂತರ ಜಾಮೀನು ನೀಡಿದೆ. ಅವರು ಜೂನ್ 2 ರಂದು ಮತ್ತೆ ತಿಹಾರ್ ಜೈಲಿಗೆ ಹೋಗಬೇಕಾಗಿದೆ.
ನಡೆಯುತ್ತಿರುವ ಸಾರ್ವತ್ರಿಕ ಚುನಾವಣೆಯ ಕೊನೆಯ ಹಂತದ ಮತದಾನದ ಒಂದು ದಿನದ ನಂತರ ಜೂನ್ 2 ರಂದು ದೆಹಲಿ ಸಿಎಂ ತಿಹಾರ್ ಜೈಲಿನಲ್ಲಿ ಶರಣಾಗಬೇಕಾಗುತ್ತದೆ.
ಕೇಜ್ರಿವಾಲ್ಗೆ ಮಧ್ಯಂತರ ಜಾಮೀನು ನೀಡುವ ಸಂದರ್ಭದಲ್ಲಿ ಸುಪ್ರೀಂಕೋರ್ಟ್, ಲೋಕಸಭಾ ಚುನಾವಣೆಯ ದೃಷ್ಟಿಯಿಂದ ಈ ನಿರ್ಧಾರ ಸೂಕ್ತ, ಅವರಿಗೆ ಯಾವುದೇ ಅಪರಾಧ ಇತಿಹಾಸವಿಲ್ಲ.ಅವರು ಸಮಾಜಕ್ಕೆ ಬೆದರಿಕೆಯಲ್ಲ, ಅವರ ವಿರುದ್ಧ ಗಂಭೀರ ಆರೋಪಗಳಿವೆ ಆದರೆ ಅದ್ಯಾವುದರಲ್ಲೂ ಸಾಬೀತಾಗಿ ಶಿಕ್ಷೆಯಾಗಿಲ್ಲ ಎಂದು ಹೇಳಿತ್ತು. ಅಷ್ಟೇ ಅಲ್ಲದೆ ಯಾವುದೇ ಸಾಕ್ಷಿ ಜತೆ ಮಾತನಾಡದಂತೆ ಸೂಚಿಸಿತ್ತು.