ನವದೆಹಲಿ: ಇವಿಎಂ ಮೆಷೀನ್ನಲ್ಲಿ ಬಿದ್ದ ಮತಗಳನ್ನು ಸಂಪೂರ್ಣವಾಗಿ ವಿವಿಪ್ಯಾಟ್ ಚೀಟಿಗಳೊಂದಿಗೆ ತಾಳೆ ಮಾಡಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಗಳನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ. ನ್ಯಾಯಮೂರ್ತಿಗಳಾದ ಸಂಜೀವ್ ಖನ್ನ ಮತ್ತು ದೀಪಂಕರ್ ದತ್ತಾ ಅವರು ಈ ಆದೇಶ ನೀಡಿದ್ದಾರೆ. ಏಪ್ರಿಲ್ 18ರಂದು ಸುಪ್ರೀಂ ನ್ಯಾಯಪೀಠ ಈ ಅರ್ಜಿಗಳ ವಿಚಾರಣೆ ಮುಕ್ತಾಯಗೊಳಿಸಿ ತೀರ್ಪು ಕಾಯ್ದಿರಿಸಿತ್ತು.
ಕಳೆದ 24ರಂದು ಚುನಾವಣಾ ಆಯೋಗದಿಂದ ಕೆಲ ಅಂಶಗಳ ಬಗ್ಗೆ ಸ್ಪಷ್ಟೀಕರಣ ಪಡೆಯಲು ವಿಚಾರಣೆ ನಡೆಸಿತ್ತು. ಇದೀಗ ನ್ಯಾಯಪೀಠ ತನ್ನ ತೀರ್ಪು ನೀಡಿದ್ದು, ಇವಿಎಂ ಮತ್ತು ವಿವಿಪ್ಯಾಟ್ ಪೂರ್ಣ ತಾಳೆಯಾಗಬೇಕೆನ್ನುವ ಮನವಿಯನ್ನು ತಿರಸ್ಕರಿಸಲು ನಿರ್ಧರಿಸಿದೆ.`ವಿವಿಧ ದೃಷ್ಟಿಕೋನ ಇರಬೇಕೆನ್ನುವುದು ಮುಖ್ಯ ಹೌದು. ಆದರೆ, ಒಂದು ವ್ಯವಸ್ಥೆಯನ್ನು ಕುರುಡಾಗಿ ಅನುಮಾನಿಸುವುದು ತಪ್ಪಾಗುತ್ತದೆ.
ನ್ಯಾಯಾಂಗವಾಗಲೀ, ಶಾಸಕಾಂಗವಾಗಲೀ ಅರ್ಥಗರ್ಭಿತ ಟೀಕೆಗಳು ಬೇಕಾಗುತ್ತದೆ. ಪ್ರಜಾತಂತ್ರದ ಎಲ್ಲಾ ಸ್ತಂಭಗಳ ನಡುವೆ ವಿಶ್ವಾಸ ಇರುವುದು ಅಗತ್ಯ. ಈ ರೀತಿ ನಂಬಿಕೆ ಮತ್ತು ಸಹಕಾರದ ಸಂಸ್ಕೃತಿಯನ್ನು ಬೆಳೆಸುವ ಮೂಲಕ ಪ್ರಜಾತಂತ್ರದ ಧ್ವನಿಯನ್ನು ಬಲಪಡಿಸಬಹುದು,’ ಎಂದು ನ್ಯಾಯಮೂರ್ತಿ ದೀಪಂಕರ್ ದತ್ತಾ ತಮ್ಮ ತೀರ್ಪಿನಲ್ಲಿ ಹೇಳಿದ್ದಾರೆ.
ಸುಪ್ರೀಂಕೋರ್ಟ್ನ ದ್ವಿಸದಸ್ಯ ನ್ಯಾಯಪೀಠ ಈ ವೇಳೆ ಎರಡು ಮಹತ್ವದ ನಿರ್ದೇಶನ ನೀಡಿದೆ. ಇವಿಎಂ ಮೆಷೀನ್ಗಳಲ್ಲಿ ಚಿಹ್ನೆ ನಮೂದಾದ ಬಳೀಕ ಸಿಂಬಲ್ ಲೋಡಿಂಗ್ ಯೂನಿಟ್ ಅನ್ನು ಸೀಲ್ ಮಾಡಬೇಕು.ಈ ಯೂನಿಟ್ ಅನ್ನು ಕನಿಷ್ಠ 45 ದಿನಗಳವರೆಗೆ ರಕ್ಷಿಸಿ ಇಡಬೇಕು ಎಂದು ಕೋರ್ಟ್ ಆದೇಶಿಸಿದೆ.
ಚುನಾವಣಾ ಫಲಿತಾಂಶ ಪ್ರಕಟವಾದ ಬಳಿಕ ಅಭ್ಯರ್ಥಿಗಳು ವಿವಿಪ್ಯಾಟ್ ಕ್ರಾಸ್ ವೆರಿಫಿಕೇಶನ್ಗೆ ಮನವಿ ಮಾಡಿದರೆ ಇವಿಎಂ ಮೆಷೀನ್ನಲ್ಲಿರುವ ಮೈಕ್ರೋಕಂಟ್ರೋಲ್ನಲ್ಲಿನ ಬನ್ರ್ಟ್ ಮೆಮೊರಿಯನ್ನು ತಂತ್ರಜ್ಞರ ತಂಡವೊಂದು ಪರಿಶೀಲನೆ ನಡೆಸಲು ಅವಕಾಶ ಕೊಡಬೇಕು. ಇದರ ವೆಚ್ಚವನ್ನು ಅಭ್ಯರ್ಥಿಯೇ ಭರಿಸಬೇಕಾಗುತ್ತದೆ. ಒಂದು ವೇಳೆ ಇವಿಎಂ ತಿರುಚಲಾಗಿರುವುದು ಗೊತ್ತಾದರೆ ಅಭ್ಯರ್ಥಿಗೆ ಆ ಹಣ ರೀಫಂಡ್ ಮಾಡಬಹುದು ಎಂದೂ ಸುಪ್ರೀಂ ಕೋರ್ಟ್ ಸಲಹೆ ನೀಡಿದೆ.