ಮಾಗಡಿ: ಸಾಮಾಜಿಕ ಶೈಕ್ಷಣಿಕ ಆರ್ಥಿಕವಾಗಿ ಹಿಂದುಳಿದಿರುವ ಕಾಡುಗೊಲ್ಲ ಸಮುದಾಯವನ್ನು ರಾಜ್ಯ ಸರಕಾರವು ಈ ಕೂಡಲೇ ಎಸ್ಟಿ ಜನಾಂಗಕ್ಕೆ ಸೇರ್ಪಡೆಗೊಳಿಸಿ ಕಾಡುಗೊಲ್ಲ ಜಾತಿಪ್ರಮಾಣ ಪತ್ರ ನೀಡಬೇಕು ಎಂದು ತಾಲ್ಲೂಕು ಕಾಡುಗೊಲ್ಲ ಸಂಘದ ಅದ್ಯಕ್ಷ ಬಸವೇನಹಳ್ಳಿ ಸುರೇಶ್ ಒತ್ತಾಯಿಸಿದರು.
ಪಟ್ಟಣದ ಕಲ್ಯಾಗೇಟ್ ವೃತ್ತದಿಂದ ತಹಶೀಲ್ದಾರ್ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆಯ ನೇತೃತ್ವವಹಿಸಿದ ನಂತರ ಮಾತನಾಡಿದ ಅವರು ರಾಜ್ಯದನಾನಾ ತಾಲ್ಲೂಕು ಕಚೇರಿಗಳಲ್ಲಿ ನಮ್ಮ ಸಮುದಾಯದವರಿಗೆ “ಕಾಡುಗೊಲ್ಲ”ಜಾತಿ ಪ್ರಮಾಣಪತ್ರ ನೀಡುತ್ತಿದ್ದು ಮಾಗಡಿ ತಾಲ್ಲೂಕು ಕಚೇರಿಯಲ್ಲಿಯೂ ಸಹ “ಕಾಡುಗೊಲ್ಲ”ಎಂದು ನಮಗೆ ಜಾತಿ ಪ್ರಮಾಣಪತ್ರ ನೀಡಬೇಕು.
ತಾಲ್ಲೂಕಿನಲ್ಲಿರುವ ಪ್ರತಿ ಗೊಲ್ಲರಹಟ್ಟಿ ಗ್ರಾಮಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸಬೇಕು. ನಮ್ಮ ಸಮುದಾಯವು ಆರ್ಥಿಕವಾಗಿ ಶೈಕ್ಷಣಿಕವಾಗಿ ಸಾಮಾಜಿಕವಾಗಿ ರಾಜಕೀಯವಾಗಿ ಬಹಳ ಹಿಂದುಳಿದಿದ್ದು ಕೇಂದ್ರ ಸರ್ಕಾರವು ನಮ್ಮ ಸಮುದಾಯವನ್ನು ಎಸ್ಟಿ ಮೀಸಲಾತಿಗೆ ಸೇರ್ಪಡೆ ಮಾಡಬೇಕು.
ನಮ್ಮ ಸಂಘದ ರಾಜ್ಯಾದ್ಯಕ್ಷ ಗೊಲ್ಲರಹಟ್ಟಿ ರಾಜಣ್ಣ ನೇತೃತ್ವದಲ್ಲಿ ಇಂದು ರಾಜ್ಯದ 40 ಕ್ಕೂ ಹೆಚ್ಚಿನ ತಾಲ್ಲೂಕುಗಳಲ್ಲಿ ಆಯಾ ತಾಲ್ಲೂಕು ಕಚೇರಿಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ. ಅದರಂತೆ ಮಾಗಡಿಯಲ್ಲೂ ಪ್ರತಿಭಟನೆ ನಡೆಸಲಾಗು ತ್ತಿದೆ ಎಂದು ಸುರೇಶ್ ತಿಳಿಸಿದರು.
ರಾಜ್ಯ ಕಾಡುಗೊಲ್ಲ ಸಮುದಾಯದ ಕಾರ್ಯಾದ್ಯಕ್ಷ ಡಾ. ಕೆಂಚಪ್ಪ ಮಾತನಾಡಿ ನಮ್ಮ ಜನಾಂಗವನ್ನು ಎಸ್ಟಿಗೆ ಸೇರಿಸುವ ಜೊತೆಗೆ ಅಲೆಮಾರಿ ಪಟ್ಟಿಗೆ ಸೇರಿಸುವ ಕೆಲಸ ಮಾಡಬೇಕು. ನಾವು ಇಡೀ ರಾಜ್ಯದಲ್ಲಿ 6. 25 ಲಕ್ಷ ಸಂಖ್ಯೆಯಲ್ಲಿ ಕಾಡುಗೊಲ್ಲರಿದ್ದು ನಾವು ಕೇವಲ ಚುನಾವಣೆಯಲ್ಲಿ ಮತದಾನ ಮಾಡಲು ಸೀಮಿತವಾಗಿದ್ದು ನಮಗೆ ಯಾವುದರಲ್ಲೂ ಸರಕಾರ ಮೀಸಲಾತಿ ಕಲ್ಪಿಸಿಲ್ಲ. ನಾವು ಕುರಿ ಹಸುಗಳನ್ನು ಕಾಯುತ್ತೇವೆ ಮೌಢ್ಯತೆ ಆಚರಿಸುತ್ತಿದ್ದೇವೆ ಎಂದು ನಮ್ಮನ್ನು ನಿರ್ಲಕ್ಷಿಸಿದರೆ ಮುಂದಿನ ದಿನಗಳಲ್ಲಿ ಜನಪ್ರತಿನಿಧಿಗಳಿಗೆ ತಕ್ಕಪಾಠ ಕಲಿಸಬೇಕಾಗುತ್ತದೆ ಎಂದು ಕೆಂಚಪ್ಪ ಎಚ್ಚರಿಕೆ ನೀಡಿದರು.
ಮನವಿ ಸ್ವೀಕರಿಸಿ ತಹಶೀಲ್ದಾರ್ ಸುರೇಂದ್ರ ಮೂರ್ತಿ ಮಾತನಾಡಿ ನಿಮ್ಮ ಬೇಡಿಕೆಗಳನ್ನು ಪರಿಶೀಲಿಸಿ ಸರಕಾರಕ್ಕೆ ಕಳುಹಿಸ ಲಾಗುವುದು. ಸರಕಾರದಿಂದ ಆದೇಶ ಬಂದ ನಂತರ ತಮ್ಮ ಬೇಡಿಕೆಯನ್ನು ಈಡೇರಿಸುತ್ತೇನೆ ಎಂದು ತಿಳಿಸಿದರು.ಉಪಾಧ್ಯಕ್ಷ ಕಾಂತರಾಜು ಪ್ರಧಾನ ಕಾರ್ಯದರ್ಶಿ ಕಾಂತರಾಜು ಕಾರ್ಯದರ್ಶಿ ಕುಮಾರಸ್ವಾಮಿ ಕಾಂತರಾಜು ಶಿವರಾಜು ಸಮುದಾಯದ ಮುಖಂಡರಾದ ಜಿ. ಎಸ್. ಧನಂಜಯ ಡಿ. ಗೋಪಾಲ್ ದೇವರಾಜು ಡಿ. ಸಿ. ಮಹೇಶ್ ಬಿ. ಯೋಗೇಶ್ ಕಾನೂನು ಸಲಹೆಗಾರರಾದ ಭಾಗ್ಯ ಪಿ. ರಾಜಣ್ಣ ಹೇಮಂತಕುಮಾರ್ ಪೋಲೋಹಳ್ಳಿ ಶಿವಣ್ಣ ಮೋಹನಕುಮಾರ್ ಗಿರಿಯಪ್ಪ ಅತ್ತಿಂಗೆರೆ ಗೋಪಾಲ್ ಗೋಪಾಲಯ್ಯ ದೊಳ್ಳಯ್ಯ ಹನುಮಯ್ಯ ನಾಗರಾಜು ಮಹಾಲಿಂಗಯ್ಯ ಚಿಕ್ಕಣ್ಣ ಕುಮಾರ್ ಸೇರಿದಂತೆ ಮತ್ತಿತರಿದ್ದರು.