ಬೆಂಗಳೂರು: ಈಗಾಗಲೇ ಲೋಕಸಭೆ ಚುನಾವಣೆ ಸಂಬಂಧ ಪ್ರಮುಖ ರಾಜಕೀಯ ಪಕ್ಷಗಳಲ್ಲಿ ತೀವ್ರ ಕಸರತ್ತು ನಡೆದಿದ್ದು, ಅಭ್ಯರ್ಥಿಗಳ ಆಯ್ಕೆಗಾಗಿ ಪಕ್ಷದ ವರಿಷ್ಠರು ಅಂತಿಮವಾಗಿ ಕಣಕ್ಕಿಳಿಯುವ ಅಭ್ಯರ್ಥಿಗಳ ಆಯ್ಕೆಗಾಗಿ ಮಹತ್ವದ ಸಭೆ ನಡೆಸುತ್ತಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ತುಮಕೂರು ಕ್ಷೇತ್ರಕ್ಕೆ ಬಿಜೆಪಿಯಿಂದ ಸ್ಪರ್ಧಾ ಕಣಕ್ಕಿಳಿಯಲು ಇಬ್ಬರು ಮಾಜಿ ಸಚಿವರ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿರುವ ಬೆನ್ನಲ್ಲೇ ಮೂರನೇ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಪಕ್ಷದ ವರಿಷ್ಠರು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.
ಮಾಜಿ ಸಚಿವರಾದ ವಿ. ಸೋಮಣ್ಣ ಜೆ.ಸಿ. ಮಾಧುಸ್ವಾಮಿ ಅವರನ್ನು ಹೊರತುಪಡಿಸಿ ಮತ್ತೊಬ್ಬರನ್ನು ಕಣಕ್ಕಿಳಿಸಲು ಯತ್ನಿಸಿರುವ ಬಿಜೆಪಿ ನಾಯಕರು ಮೂರನೇ ಅಭ್ಯರ್ಥಿ ಹೆಸರು ಮತ್ತು ಅವರ ಪೂರ್ವ ಪರಗಳನ್ನು ಪರಿಶೀಲನೆ ನಡೆಸಲು ನಿನ್ನೆಯಿಂದ ಮುಂದಾಗಿದ್ದಾರೆ ಎಂದು ಹೇಳಲಾಗಿದೆ.
ಈ ಹಿಂದೆ 1996ರಲ್ಲಿ ದೇವೇಗೌಡರು ಮುಖ್ಯಮಂತ್ರಿಯಾಗಿದ್ದಾಗ ಎದುರಾದ ಲೋಕಸಭೆ ಚುನಾವಣೆಯಲ್ಲಿ ತುಮಕೂರು ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಲು ಅನುಸರಿಸಿದ ಸೂತ್ರವನ್ನು ಇದೀಗ ಬಿಜೆಪಿಯವರು ಅನುಸರಿಸಲು ಮುಂದಾಗಿದ್ದಾರೆ ಎನ್ನಲಾಗಿದೆ.
ರಾಜ್ಯ ಬಿಜೆಪಿ ಪದಾಧಿಕಾರಿಗಳಲ್ಲಿ ಒಬ್ಬರಾಗಿರುವ ಮಹಿಳಾ ಘಟಕದಲ್ಲಿ ಗುರುತಿಸಿಕೊಂಡಿರುವ ತುಮಕೂರಿನ ಮಾಜಿ ವಿಧಾನಪರಿಷತ್ ಸದಸ್ಯ ಡಾ. ಹುಲಿನಾಯ್ಕರ್ ಅವರ ಪುತ್ರಿ ಅಂಬಿಕ ಹುಲಿನಾಯ್ಕರ್ ಅವರನ್ನು ಕಣಕ್ಕಿಳಿಸಿದರೆ ಹೇಗೆ ಎಂಬ ಲೆಕ್ಕಾಚಾರದಲ್ಲಿ ಬಿಜೆಪಿವರು ಇದ್ದಾರೆ ಎನ್ನಲಾಗಿದೆ.
ಈಗಾಗಲೇ ಹಾಲಿ ಸಂಸದ ಜಿ.ಎಸ್. ಬಸವರಾಜು ಅವರು ಚುನಾವಣೆ ನಿವೃತ್ತಿ ಘೋಷಿಸಿರುವುದರಿಂದ ಹೊಸ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಮುಂದಾಗಿರುವ ಬಿಜೆಪಿಯವರು ಇಬ್ಬರು ಮಾಜಿ ಸಚಿವರ ಪೈಪೋಟಿಯಲ್ಲಿ ಮೂರನೇ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಮಾಡುತ್ತಿರುವ ಯತ್ನ ಫಲಿಸುವುದೇ ಎಂಬುದನ್ನು ಕಾದು ನೋಡಬೇಕಿದೆ.