ರಾಮನಗರ: ನಗರಸಭೆ ವ್ಯಾಪ್ತಿಯಲ್ಲಿ ವಾಸ ಮಾಡುತ್ತಿರುವ ಅಸಂಘಟಿತ ಕಾರ್ಮಿಕರನ್ನು ನಗರಸಭೆ ವತಿಯಿಂದ ವಿಮಾ ಯೋಜನೆ ವ್ಯಾಪ್ತಿಗೆ ತರಲು ಉದ್ದೇಶಿಸಲಾಗಿದೆ. ಅಸಂಘಟಿತ ಕಾರ್ಮಿಕರ ಮಾಹಿತಿ ಸಂಗ್ರಹಿಸಲು ಸಮೀಕ್ಷಾ ಕಾರ್ಯ ಆರಂಭಿಸಲಾಗುತ್ತಿದೆ ಎಂದು ನಗರಸಭಾಧ್ಯಕ್ಷ ಕೆ.ಶೇಷಾದ್ರಿ,(ಶಶಿ)ತಿಳಿಸಿದರು.ನಗರಸಭೆಯಲ್ಲಿ ನಡೆದ ಸುದ್ದಿಗೋಷ್ಠಿ ಯಲ್ಲಿ ಅವರು ಮಾತನಾಡಿದರು. ಕೇಂದ್ರ ಸರ್ಕಾರದ ಪಿ.ಎಂ.ಜೆ.ಜೆ.ವೈ, ಪಿ.ಎಂ.ಎಸ್.ಬಿ.ವೈ ವiತ್ತು ಪಿ.ಎಂ-ವೈ.ಎಂ ವಿಮಾ ಯೋಜನೆಗಳ ಮೊದಲ ಕಂತನ್ನು ನಗರಸಭೆ ಪಾವತಿಸುವ ಮೂಲಕ ಅಸಂಘಟಿತ ಕಾರ್ಮಿಕರು ಈ ವಿಮಾ ಯೋಜನೆಗಳ ಸವಲತ್ತುಗಳನ್ನು ಪಡೆಯಲು ಪ್ರೋತ್ಸಾಹಿಸುತ್ತಿದೆ ಎಂದರು. 2026-27ನೇ ಸಾಲಿನ ಬಜೆಟ್ನಲ್ಲಿ ಘೋಷಿಸಿರುವಂತೆ ನಗರಸಭಾ ವ್ಯಾಪ್ತಿಯಲ್ಲಿನ ಅಸಂಘಟಿತ ಕಾರ್ಮಿಕರಾದ ಆಟೋ ಚಾಲಕರು, ಇತರೆ ವಾಹನಗಳ ಚಾಲಕರು, ಗಾರೆ ಕೆಲಸ, ಕಾರ್ಪೆಂಟರ್, ಕೂಲಿ ಕೆಲಸ, ಫಿಲೇಚರ್, ಹೋಟೆಲ್, ಅಂಗಡಿಗಳಲ್ಲಿ ಕೆಲಸ ಮಾಡುವ ಕಾರ್ಮಿಕರು, ಬೀದಿ ಬದಿ ವ್ಯಾಪಾರಸ್ಥರು, ಮಡಿವಾಳರು, ಅಕ್ಕಸಾಲಿಗರು, ಪೈಂಟಿಂಗ್, ಕಟ್ಟಡ, ಪ್ಲಂಬಿಗ್, ಟೈಲರಿಂಗ್ ವೃತ್ತಿನಿರತರು ಹೀಗೆ ಜೀವನೋಪಾಯಕ್ಕಾಗಿ ಕಸಬು ಮಾಡುತ್ತಿರುವ ಅಸಂಘಟಿತ ಕಾರ್ಮಿಕರಿಗೆ ವಿಮಾ ಯೋಜನೆಯನ್ನು ಕಲ್ಪಿಸಲು ಉದ್ದೇಶಿಸಲಾಗಿದೆ ಎಂದರು. ಬಹುಶಃ ದೇಶದಲ್ಲೇ ಪ್ರಥಮ ಬಾರಿಗೆ ರಾಮನಗರ ನಗರಸಭೆ ಇಂತಹ ಮಹತ್ವದ ಕಾರ್ಯ ಕೈಗೊಂಡಿದೆ ಎಂದರು. ಅಸಂಘಟಿತ ಕಾರ್ಮಿಕರ ಪೈಕಿ ಬಹುತೇಕರಿಗೆ ವಿಮಾ ಯೋಜನೆಗಳ ಮಹತ್ವ ತಿಳಿದಿಲ್ಲ, ಹೀಗಾಗಿ ನಗರ ಸಭೆವತಿಯಿಂದ ವಿಮಾ ಸವಲತ್ತಿನ ಮಹತ್ವವನ್ನು ತಿಳಿಸಿಕೊಡುವ ಪ್ರಯತ್ನ ಆರಂಭಿಸಿದ್ದೇವೆ. ಪ್ರಥಮ ಕಂತನ್ನು ನಗರಸಭೆಯಿಂದ ಪಾವತಿಸ ಲಾಗುವುದು, ಉಳಿದ ಕಂತುಗಳನ್ನು ಫಲಾನುಭವಿಗಳೇ ನೇರವಾಗಿ ತಮ್ಮ ಬ್ಯಾಂಕು ಖಾತೆಯಿಂದ ಪಾವತಿಸಿ ಕೊಳ್ಳುತ್ತಾರೆ ಎಂದರು.ಈ ಕಾರ್ಮಿಕರಿಗೆ ಅವರ ಜೀವನ ಸಂಧ್ಯಾ ಕಾಲದಲ್ಲಿ ದುಡಿದು ತಮ್ಮನ್ನು ಪೋಷಿಸಿಕೊಳ್ಳಲು ಆರ್ಥಿಕ ಮೂಲಗಳು ಇರುವುದಿಲ್ಲ. ಇಂತಹ ಅಸಂಘಟಿತ ವಲಯದ ಕಾರ್ಮಿಕರಿಗೆ ಅವರ ವಯೋವೃದ್ದ ವೇಳೆಯಲ್ಲಿ ಸಾಮಾಜಿಕ ಭದ್ರತೆ ಕಲ್ಪಿಸಲು ಭಾರತ ಸರ್ಕರವುಪ್ರಧಾನ ಮಂತ್ರಿ ಶ್ರಮ್ಯೋಗಿ ಮಾನ್-ಧನ್ (ಪಿಎಂ ಎಸ್ವೈಎಂ) ಎಂಬ ಮಹತ್ವಾಕಾಂಕ್ಷಿ ವಂತಿಗೆ ಆಧಾರಿ ಪಿಂಚಣಿ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯ ಸವಲತ್ತನ್ನು ನಗರಸಭೆ ವ್ಯಾಪ್ತಿಯಲ್ಲಿ ವಾಸ ಮಾಡುತ್ತಿರುವ ಕಾರ್ಮಿಕರಿಗೆ ಒದಗಿಸಿಕೊಡಬೇಕಾಗಿದೆ. 60 ವರ್ಷದ ನಂತರ ಮೂರು ಸಾವಿರ ಮಾಸಿಕ ಪಿಂಚಣಿ ಪಡೆಯಲು ಸಾಧ್ಯವಾಗುತ್ತದೆ ಎಂದರು. ನಗರಸಭೆ ವ್ಯಾಪ್ತಿಯಲ್ಲಿ ವಾಸ ಮಾಡುತ್ತಿರುವ ಕಾರ್ಮಿಕರ ಸಮೀಕ್ಷೆಗಾಗಿ 85 ಮಂದಿಯ ಗುಂಪು ರಚಿಸಲಾಗಿದೆ. ಈ ಪೈಕಿ 8 ಮಂದಿ ಮೇಲುಸ್ತುವರಿ ವಹಿಸಲಿದ್ದಾರೆ. ಈ ಗುಂಪುಗಳು ತಕ್ಷಣದಿಂದಲೇ ಕಾರ್ಯ ಪ್ರವೃತ್ತರಾಗಲಿದ್ದಾರೆ. ಇವರಿಗೆ ಬೇಕಾದೆ ಎಲ್ಲ ಪರಿಕರಗಳನ್ನು ನಗರಸಭೆಯ ಮೂಲಕ ಒದಗಿಸಲಾಗುತ್ತಿದೆ. ಸಮೀಕ್ಷಾದಾರರು ಆಯಾ ವಾರ್ಡುಗಳ ನಗರಸಭಾ ಸದಸ್ಯರ ಸಹಕಾರದಲ್ಲಿ ತಮ್ಮ ಕಾರ್ಯ ನಿರ್ವವಹಿಸುವರು ಎಂದರು.ನಗರಸಭೆಯ ಆಯುಕ್ತ ಡಾ.ಜಯಣ್ಣ ಮಾತನಾಡಿ, ನಗರಸಭಾ ವ್ಯಾಪ್ತಿಯಲ್ಲಿನ ಆಸ್ತಿಗಳಿಗೆ ಕಂದಾಯ ಪಾವತಿಸಿದರೆ ಶೇ 5 ರಷ್ಟು ರಿಯಾಯಿತಿಗೆ ಅರ್ಹತೆ ಪಡೆಯುತ್ತಾರೆ ಎಂದು ತಿಳಿಸಿದರು. ಮೇ, ಜೂನ್ನಲ್ಲಿ ಕಂದಾಯ ಪಾವತಿಸಿದರೆ ದಂಡ ರಹಿತ ಕಂದಾಯದ ಮೊತ್ತ ಪಾವತಿಸಿಕೊಳ್ಳಲಾಗುವುದು. ತದನಂತರ ಪಾವತಿಸಿದರೆ ಮಾಸಿಕ ಶೇ 2ರಷ್ಟು ದಂಡ ವಿಧಿಸಲಾಗುತ್ತದೆ. ಹೀಗಾಗಿ ಆಸ್ತಿ ಮಾಲೀಕರು ರಿಯಾಯಿತಿ ಅವಧಿಯ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.ನಗರಸಭಾ ಸದಸ್ಯರುಗಳಾದ ಪವಿತ್ರ, ಪಾರ್ವತಮ್ಮ, ನಿಜಾಮುದ್ದಿನ್, ಅಜ್ಮತ್, ಮಂಜುನಾಥ್, ಮುನಜಿಲ್ ಆಗಾ, ಸಮದ್, ನಾಗಮ್ಮ, ಖುರೇಷಿ ಮತ್ತಿತರರು ಭಾಗವಹಿಸಿದ್ದರು.



