ಚಾಕವೇಲು ಗ್ರಾಮ (ಚೇಳೂರು ತಾಲ್ಲೂಕು, ಚಿಕ್ಕಬಳ್ಳಾಪುರ ಜಿಲ್ಲೆ): ಶ್ರೀ ಕೋದಂಡರಾಮಸ್ವಾಮಿ ರಥೋತ್ಸವದ ಸಂದರ್ಭದಲ್ಲಿ, ದೀಪೋತ್ಸವದ ಅಂಗವಾಗಿ ಮಾರ್ಚ್ 31, 2026ರ ಮಂಗಳವಾರ ಸಂಜೆ 7.30ಕ್ಕೆ ಚಾಕವೇಲು ಗ್ರಾಮದಲ್ಲಿ ಬೆಂಗಳೂರು ಮೂಲದ ಅಂತಾರಾಷ್ಟ್ರೀಯ ಖ್ಯಾತಿಯ `ಸೂರ್ಯ ಕಲಾವಿದರು’ ತಂಡದಿAದ ಭವ್ಯ ನೃತ್ಯನಾಟಕ ಕಾರ್ಯಕ್ರಮ ಆಯೋಜಿಸಲಾಯಿತು. ಮೂರು ಗಂಟೆಗಳ ಕಾಲ ನಡೆದ ಈ ಕಲಾ ವೈಭವ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿ ಮಾಡಿತು.
ಕಾರ್ಯಕ್ರಮದಲ್ಲಿ ಎರಡು ಪ್ರಮುಖ ನೃತ್ಯನಾಟಕಗಳು ಪ್ರದರ್ಶಿಸಲ್ಪಟ್ಟವು. ಮೊದಲನೆಯದಾಗಿ `ಮೋಹಿನಿ ಭಸ್ಮಾಸುರ’ ಎಂಬ ಪೌರಾಣಿಕ ಕಥೆಯನ್ನು ಆಧರಿಸಿದ ನೃತ್ಯನಾಟಕ ಗಮನಸೆಳೆಯಿತು. ಭಸ್ಮಾಸುರನು ಪಡೆದ ವರದಿಂದ ಅವನ ಅಹಂಕಾರ ಹೆಚ್ಚಾಗಿ, ದೇವತೆಗಳಿಗೆ ಭೀತಿ ಉಂಟಾಗುತ್ತದೆ. ಈ ಸಂದರ್ಭದಲ್ಲಿ ಮಹಾವಿಷ್ಣು ಮೋಹಿನಿಯಾಗಿ ಅವತರಿಸಿ, ತನ್ನ ನೃತ್ಯದಿಂದ ಭಸ್ಮಾಸುರನನ್ನು ಮೋಹಗೊಳಿಸಿ, ಅವನಿಂದಲೇ ಅವನ ನಾಶವಾಗುವಂತೆ ಮಾಡುವ ಕಥಾಹಂದರವನ್ನು ಅದ್ಭುತವಾಗಿ ರೂಪಿಸಲಾಗಿದೆ. ವಿಕ್ರಮ್ ಸೂರಿ ಹಾಗೂ ನಮಿತಾ ರಾವ್ ಪ್ರಮುಖ ಪಾತ್ರಗಳಲ್ಲಿ ಮನೋಜ್ಞ ಅಭಿನಯ ಮತ್ತು ನೃತ್ಯ ಪ್ರದರ್ಶನ ನೀಡಿದ್ದು, ಪ್ರೇಕ್ಷಕರಿಂದ ಭಾರಿ ಮೆಚ್ಚುಗೆಗೆ ಪಾತ್ರರಾದರು.
ಮುಂದೆ ಪ್ರದರ್ಶಿತವಾದ `ಪುಣ್ಯಕೋಟಿ’ ನೃತ್ಯನಾಟಕವು ಭಾವನಾತ್ಮಕತೆಯ ಶಿಖರವನ್ನು ತಲುಪಿಸಿತು.
ಸತ್ಯವಂತ ಗೋವು ಪುಣ್ಯಕೋಟಿ ತನ್ನ ಕರುವನ್ನು ಬಿಟ್ಟು ಹಸಿದ ಹುಲಿ ಚಂಡ ವ್ಯಾಘ್ರನ ಮುಂದೆ ಸತ್ಯವನ್ನು ಉಳಿಸುವ ಸಲುವಾಗಿ ಮತ್ತೆ ಮರಳುವ ಕಥೆಯು ಪ್ರೇಕ್ಷಕರ ಹೃದಯ ಸ್ಪರ್ಶಿಸಿತು. ನಮಿತಾ ರಾವ್ ಪುಣ್ಯಕೋಟಿಯಾಗಿ ಅದ್ಭುತ ಅಭಿನಯ ನೀಡಿದರೆ, ಕರು ಪಾತ್ರದಲ್ಲಿ ಅಭಿನಯಿಸಿದ ಪುಟ್ಟ ಬಾಲಕಿ ತನ್ನ ಸೌಂದರ್ಯ ಮತ್ತು ನೈಸರ್ಗಿಕ ಅಭಿನಯದಿಂದ ಎಲ್ಲರ ಮನ ಗೆದ್ದಳು. ಇದರ ನಡುವೆ ವಿರಾಮದ ಸಂದರ್ಭದಲ್ಲಿ ಚಾಕವೇಲಿನ ಸ್ಥಳೀಯ ಬಾಲಕಿಯರಾದ ಈ ಆರ್ ಬೃಂದಾ, ಮತ್ತು ಈ ಆರ್ ಹಿತ ಭರತನಾಟ್ಯ ಪ್ರದರ್ಶನ ನೀಡಿ ಕಾರ್ಯಕ್ರಮಕ್ಕೆ ಮತ್ತಷ್ಟು ರಂಗು ತುಂಬಿದರು.
ಕಾರ್ಯಕ್ರಮದ ಬೆಳಕು, ವೇಷಭೂಷಣ, ಮೇಕಪ್, ಸಂಗೀತ, ನೃತ್ಯ ಸಂಯೋಜನೆ ಹಾಗೂ ಸಮಗ್ರ ಪ್ರಸ್ತುತಿಯು ಉನ್ನತ ಮಟ್ಟದಲ್ಲಿದ್ದು, ಸೂರ್ಯ ಕಲಾವಿದರ ವೃತ್ತಿಪರತೆಯನ್ನು ತೋರಿಸಿತು. ಜನಸಾಗರದ ನಡುವೆ ನಡೆದ ಈ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಯಿತು.
ವಿಶೇಷವಾಗಿ, ಕರ್ನಾಟಕದ ತೆಲುಗು ಪ್ರಾಬಲ್ಯವಿರುವ ಗಡಿಭಾಗವಾದ ಈ ಪ್ರದೇಶದಲ್ಲಿ ಕನ್ನಡದ ನೃತ್ಯನಾಟಕ ಕಾರ್ಯಕ್ರಮವನ್ನು ಪ್ರೇಕ್ಷಕರು ಅಪಾರವಾಗಿ ಮೆಚ್ಚಿ ಸಂಭ್ರಮದಿAದ ಆಚರಿಸಿದುದು ಗಮನಾರ್ಹ ಸಂಗತಿಯಾಗಿತ್ತು.
ಈ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆ ದಿನದ ಪೂಜಾಕರ್ತರು ಗಳಾದ ಚಾಕವೇಲಿನ ಖ್ಯಾತ ಉದ್ಯಮಿಗಳಾದ ಸತೀಶ್ ಎಸ್ ಕೆ, ಜಿ.ವಿ. ಗೀತಾ, ಎಸ್ ಆರ್ ಸೌಮ್ಯ, ಎಸ್ ಆರ್ ವಿಶ್ವನಾಥ್ ಶೆಟ್ಟಿ, ಗೋಪಾಲಕೃಷ್ಣಯ್ಯ, ಎಸ್ ವಿ ರಾಜೇಂದ್ರ ಪ್ರಸಾದ್, ಬಿ ಎಸ್ ವೆಂಕಟೇಶ್, ಎಸ್ ಎ ರವೀಂದ್ರನಾಥ್, ಎಸ್ ಆರ್ ರಮೇಶ್ ಬಾಬು, ಆಡಿ ರಾಧಾಕೃಷ್ಣ ಎಸ್, ಎಸ್ ಎಂ ಬಾಲಾಜಿ, ಎಂ ಬಿ ಈಶ್ವರ್ ರೆಡ್ಡಿ, ಮೂಲಿಂಟಿ ಮದ್ದಿ ರೆಡ್ಡಿ, ಟಿ ಕೆ ವೆಂಕಟರಮಣಪ್ಪ, ಮತ್ತು ಕೆ ಚಂದ್ರಯ್ಯ, ಇವರುಗಳು ಪ್ರಾಯೋಜಿಸಿದ್ದು, ಶ್ರೀ ಜಿ ವಿ ಪ್ರಸನ್ನ ಕುಮಾರ್, ಐಶ್ವರ್ಯ ಕಲಾನಿಕೇತನ,, ಚಿಕ್ಕಬಳ್ಳಾಪುರ, ಅವರ ಸಹಯೋಗದಲ್ಲಿ ಆಯೋಜಿಸಲಾಯಿತು. ಒಟ್ಟಾರೆ, ಶ್ರೀ ಕೊಡಂಡರಾಮಸ್ವಾಮಿ ರಥೋತ್ಸವದ ಅಂಗವಾಗಿ ನಡೆದ ಈ ನೃತ್ಯನಾಟಕೋತ್ಸವ ಗ್ರಾಮೀಣ ಪ್ರದೇಶದಲ್ಲೂ ಉನ್ನತ ಮಟ್ಟದ ಕಲಾ ಪ್ರದರ್ಶನ ಸಾಧ್ಯವೆಂಬುದನ್ನು ಸಾಬೀತುಪಡಿಸಿದ ಒಂದು ಸ್ಮರಣೀಯ ಕಾರ್ಯಕ್ರಮವೆಂದು ಅಭಿಪ್ರಾಯ ವ್ಯಕ್ತವಾಗಿದೆ.
-ಲೇಪಾಕ್ಷಿ ಸಂತೋಷರಾವ್.
ಚಾಕವೇಲಿನಲ್ಲಿ ಸೂರ್ಯ ಕಲಾವಿದರ ನೃತ್ಯ ನಾಟಕ ವೈಭವ



