ಬೆಂಗಳೂರು: ನಾವೆಲ್ಲರೂ ಒಂದಲ್ಲ ಒಂದು ಕ್ಷಣದಲ್ಲಿ ಸ್ವಾಮಿ ವಿವೇಕಾನಂದರಿಂದ ಪ್ರೇರಣೆ ಪಡೆದಿದ್ದೇವೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್ ಅವರು ತಿಳಿಸಿದ್ದಾರೆನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿಂದು ಸ್ವಾಮಿ ವಿವೇಕಾನಂದರ ಜಯಂತಿಯ ಪ್ರಯುಕ್ತ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡಿದರು.
ಸ್ವಾಮಿ ವಿವೇಕಾನಂದರು ಉತ್ಸಾಹ, ಶಕ್ತಿ ಮತ್ತು ದೇಶಪ್ರೇಮಗಳನ್ನು ತಮ್ಮ ಜೀವನದ ಉದ್ದಕ್ಕೂ ತಮ್ಮ ತತ್ವವನ್ನಾಗಿ ಜಗತ್ತಿಗೇ ಸಾರಿದವರು ಎಂದರು. ಸ್ವಾಮಿ ವಿವೇಕಾನಂದರು ಪ್ರತಿ ಹಂತದಲ್ಲೂ ಅನೇಕ ಸವಾಲುಗಳನ್ನು ಬದುಕಿನ ಉದ್ದಕ್ಕೂ ಎದುರಿಸಿದವರು. ಅವರು ಅಧ್ಯಾತ್ಮದ ಮೇರು ಪರ್ವತವಿದ್ದಂತೆ;ಅವರಿಂದ ಜೀವನಪ್ರೀತಿಯನ್ನು ಕಲಿಯಬಹುದು ಎಂದು ವಿಶ್ಲೇಷಿಸಿದರು.
ಸ್ವಾಮಿ ವಿವೇಕಾನಂದರ ಚಿಕಾಗೋ ಭಾಷಣ ಎಲ್ಲರಿಗೂ ಗೊತ್ತು; ಜಗತ್ತಿಗೇ ಅದು ಚಿರಪರಿಚಿತ. ಆ ಮೂಲಕ ಅವರು ಜಗತ್ ಪ್ರಸಿದ್ಧರಾದರು ಎಂದು ವಿವರಿಸಿದರು. ನನ್ನ ಗ್ರಂಥ ಭಗವದ್ಗೀತೆ ಎಲ್ಲ ಗ್ರಂಥಗಳಿಗಿಂತ ಕೆಳಗಿದೆ. ಎಲ್ಲ ಗ್ರಂಥಗಳನ್ನು ಹೊತ್ತುಕೊಳ್ಳುವ ಶಕ್ತಿ ನನ್ನ ಭಗವದ್ಗೀತೆಗೆ ಇದೆ ಎಂದು ತಿಳಿಸಿದ್ದರು ಎಂದು ಹೇಳಿದರು. ಅದು ಸಾಂದರ್ಭಿಕ ಮಾತಲ್ಲ; ಜಗತ್ತಿನ ಎಲ್ಲ ಧಾರ್ಮಿಕ ಗ್ರಂಥಗಳ ಭಾಗವಾಗಿ ಭಗವದ್ಗೀತೆ ಇದೆ ಎಂದು ಹೇಳಿದರು.
ಜೀವನದಲ್ಲಿ ಸಮಸ್ಯೆಗಳ ಬಂದರೆ ಆಗುವಂಥದ್ದು ಆಗುತ್ತದೆ. ಅದನ್ನು ಎದುರಿಸುವುದು ಹೇಗೆ ಎಂದು ವಿಶ್ಲೇಷಿಸಬೇಕು ಎಂಬುದನ್ನು ಅವರು ವಿವೇಕಾನಂದರು ಗೂಳಿಯನ್ನು ಎದುರಿಸಿದ ಕ್ಷಣದ ಕುರಿತು ತಿಳಿಸುವ ಮೂಲಕ ವಿವರಿಸಿದರು.ಸ್ವಾಮಿ ವಿವೇಕಾನಂದರು ನಮ್ಮ ಜೀವನದ ಅವಿಭಾಜ್ಯ ಅಂಗವಾಗಬೇಕಿದೆ. ನಮ್ಮ ಮನೆಯಲ್ಲಿ ಅವರ ಪುಸ್ತಕ ಇರಬೇಕು. ಮಕ್ಕಳ ಕೈಗೆ ಅವನ್ನು ಕೊಟ್ಟು ಪ್ರೇರಣೆ ನೀಡಬೇಕು ಎಂದು ಕಿವಿಮಾತು ಹೇಳಿದರು.
ರಾಜ್ಯ ಉಪಾಧ್ಯಕ್ಷ ಡಾ. ಬಸವರಾಜ ಕೇಲಗಾರ, ವಿಧಾನಪರಿಷತ್ ಮಾಜಿ ಸದಸ್ಯ ಡಾ. ಶಿವಯೋಗಿ ಸ್ವಾಮಿ, ರಾಜ್ಯ ಕಾರ್ಯಾಲಯ ಕಾರ್ಯದರ್ಶಿ ಲೋಕೇಶ್ ಅಂಬೆಕಲ್ಲು, ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.