ಬೆಂಗಳೂರು: ಆನೇಕಲ್ ತಾಲೂಕಿನ ಸರ್ಜಾಪುರ ಹೋಬಳಿಯ ಹಲವು ಗ್ರಾಮಗಳ ರೈತರಿಗೆ ತಮ್ಮ ಜಮೀನುಗಳನ್ನು ಕೈಗಾರಿಕಾ ಉದ್ದೇಶಕ್ಕಾಗಿ ಸ್ವಾಧೀನಪಡಿಸಿಕೊಳ್ಳುವುದಾಗಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ)ಯಿಂದ ನೋಟಿಸ್ ಬಂದಿದೆ.
ಸರ್ಜಾಪುರದಲ್ಲಿ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಸ್ವಿಫ್ಟ್ ಸಿಟಿ (ಸ್ಟಾರ್ಟ್ಅಪ್ಗಳು, ವರ್ಕ್-ಸ್ಪೇಸ್, ಇನ್ನೋವೇಶನ್, ಫೈನಾನ್ಸ್ ಮತ್ತು ಟೆಕ್ನಾಲಜಿ) ಗಾಗಿ 1,050 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಮಂಡಳಿಯು ಸಜ್ಜಾಗಿದೆ. ಸ್ಟಾರ್ಟ್ಅಪ್ಗಳನ್ನು ಬೆಂಬಲಿಸಲು SWIFT ಸಿಟಿ ಕಚೇರಿಗಳು, ವಸತಿ ಪ್ರದೇಶಗಳನ್ನು ಹೊಂದಿರುತ್ತದೆ.
ನನ್ನ ಕುಟುಂಬಕ್ಕೆ ಮೂರು ಎಕರೆ 16 ಗುಂಟಾ ಪೂರ್ವಿಕರ ಜಮೀನಿದೆ. ನಾವು ಇತ್ತೀಚೆಗೆ ರಾಗಿ ಕಟಾವು ಮುಗಿಸಿದ್ದೇವೆ. ಈಗಲೂ ನಮಗೆ 300 ಅಡಿ ಆಳದಲ್ಲಿ ನೀರು ಸಿಗುತ್ತದೆ. ಕಳೆದ ಅಕ್ಟೋಬರ್ನಲ್ಲಿ ಕೆಐಎಡಿಬಿಯಿಂದ ನೋಟಿಸ್ ಬಂದಿದೆ. ಬಿ ಹೊಸಹಳ್ಳಿಯಲ್ಲಿ 400 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳುವುದಾಗಿ ಕೆಐಎಡಿಬಿ ಅಧಿಕಾರಿಗಳು ನೋಟಿಸ್ನಲ್ಲಿ ತಿಳಿಸಿದ್ದಾರೆ ಎಂದು ಬಿ.ಹೊಸಹಳ್ಳಿ ಗ್ರಾಮದ ರೈತ ಕೆ.ಸಿ.ದೇವರಾಜು ಹೇಳಿದ್ದಾರೆ.
ಕೆಐಎಡಿಬಿಯಿಂದ ನೋಟಿಸ್ ಜಾರಿ ಮಾಡುವ ಮುನ್ನ ದೇವರಾಜು ಅಥವಾ ಇತರ ರೈತರ ಸಲಹೆ ಪಡೆದಿಲ್ಲ. ಬಿ ಹೊಸಹಳ್ಳಿಯ ರೈತರು ಕೆ.ಆರ್.ಮಾರುಕಟ್ಟೆಗೆ ಹಾಗೂ ಬೆಂಗಳೂರಿನ ಮಡಿವಾಳದ ಮಾರುಕಟ್ಟೆಗೆ ನಿತ್ಯ 10 ಟ್ರಕ್ ಲೋಡ್ ತರಕಾರಿ ಮತ್ತು ಹಣ್ಣುಗಳನ್ನು ಕಳುಹಿಸುತ್ತಾರೆ ಎಂದು ದೇವರಾಜ್ ಮಾಹಿತಿ ನೀಡಿದ್ದಾರೆ.
ಅದೇ ರೀತಿ ಹೊಸಹಳ್ಳಿ ಬಳಿಯ ಅಂದೇನಹಳ್ಳಿಯಲ್ಲಿ ಸುಮಾರು 600 ಎಕರೆ ಭೂಮಿಯನ್ನು ಕೆಐಎಡಿಬಿ ಸ್ವಾಧೀನಪಡಿಸಿಕೊಳ್ಳಲಿದೆ. TNIE ನಲ್ಲಿ ಲಭ್ಯವಿರುವ ದಾಖಲೆಗಳ ಪ್ರಕಾರ, ರಾಜ್ಯ ಸರ್ಕಾರವು ಕಳೆದ ಫೆಬ್ರವರಿಯಲ್ಲಿ ನಡೆಸಿದ ಸಚಿವ ಸಂಪುಟ ಸಭೆಯಲ್ಲಿ, ಯೋಜನೆಗಾಗಿ ಒಣಭೂಮಿಯನ್ನು ಮಾತ್ರ ಸ್ವಾಧೀನಪಡಿಸಿಕೊಳ್ಳಲಾಗುವುದು ಎಂದು ಹೇಳಿತ್ತು. ಆದರೆ ಈ ಗ್ರಾಮಗಳ ರೈತರು ಬೋರ್ ವೆಲ್ ಹಾಗೂ ಇತರೆ ಮೂಲಗಳ ನೀರಿನಿಂದ ರಾಗಿ, ತರಕಾರಿ, ಹೂವು ಬೆಳೆಯುತ್ತಾರೆ ಎಂದು ತಿಳಿಸಿದರು.
20 ದಿನಗಳ ಹಿಂದೆ ನೋಟಿಸ್ ಪಡೆದ ಕಿರಣ್ಕುಮಾರ್, ‘ನನಗೆ 2.5 ಎಕರೆ ಜಮೀನಿದ್ದು, ಬೋರ್ವೆಲ್ ಹಾಗೂ ಸಮೀಪದ ಕೆರೆಗಳ ನೀರಿನಿಂದ ತರಕಾರಿ, ಗುಲಾಬಿ ಬೆಳೆದಿದ್ದೇನೆ. ನಮ್ಮ ಜಮೀನು ಕೊಡಲು ನಾವು ಸಿದ್ಧರಿಲ್ಲ. ನಾವು ಮೂರು ಬಾರಿ ಪ್ರತಿಭಟನೆ ನಡೆಸಿದ್ದೇವೆ ಮತ್ತು ಕಾನೂನು ಹೋರಾಟಕ್ಕೂ ನಾವು ಸಿದ್ಧರಿದ್ದೇವೆ ಎಂದಿದ್ದಾರೆ. ಭಾರತೀಯ ಕಿಸಾನ್ ಸಂಘ, ಆನೇಕಲ್ ಘಟಕದ ಜಂಟಿ ಕಾರ್ಯದರ್ಶಿ ಸ್ವರೂಪ್ ರೆಡ್ಡಿ ಮಾತನಾಡಿ, ಎಂಟು ಗ್ರಾಮಗಳ 700 ಕ್ಕೂ ಹೆಚ್ಚು ರೈತರು ಭೂಸ್ವಾಧೀನ ನೋಟಿಸ್ ಪಡೆದಿದ್ದಾರೆ.
ಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಿರುವ 1,050 ಎಕರೆ ಭೂಮಿಯಲ್ಲಿ 800 ಎಕರೆಯಲ್ಲಿ ರೈತರು ಸಾಗುವಳಿ ಮಾಡುತ್ತಿದ್ದಾರೆ. ಯಾವುದೇ ಸರ್ವೆ ನಡೆಸಿಲ್ಲ, ಸ್ಥಳೀಯ ಪಂಚಾಯಿತಿ ಸದಸ್ಯರು ಹಾಗೂ ಅಧಿಕಾರಿಗಳನ್ನು ಸಂಪರ್ಕಿಸಿಲ್ಲ. ಹೀಗೀದ್ದರೂ ಸರ್ಕಾರ ಭೂಸ್ವಾಧೀನ ಪ್ರಕ್ರಿಯೆಯನ್ನು ಚುರುಕುಗೊಳಿಸುತ್ತಿದೆ, ಸರ್ಕಾರ ಹೈಕೋರ್ಟ್ಗೆ ಕೇವಿಯಟ್ ಸಲ್ಲಿಸಿದ್ದು, ಈ ಸಂಬಂಧ ಹಲವು ರೈತರಿಗೆ ನೋಟಿಸ್ಗಳು ಬಂದಿವೆ ಎಂದರು. ಗ್ರಾಮ ಪಂಚಾಯಿತಿ ವ್ಯಾಪ್ತಿಯ 100 ಮೀಟರ್ ವ್ಯಾಪ್ತಿಯಲ್ಲಿ ಭೂಮಿ ಸ್ವಾಧೀನಪಡಿಸಿಕೊಳ್ಳುವಂತಿಲ್ಲ ಎಂಬ ನಿಯಮವಿದೆ. ಆದರೆ ಈ ನಿಯಮ ಉಲ್ಲಂಘಿಸಲಾಗಿದೆ ಎಂದು ಆರೋಪಿಸಿದರು.
ರೈತರು ತಮ್ಮ ಜಮೀನು ಬಿಟ್ಟುಕೊಡಲು ಸಿದ್ಧವಿಲ್ಲ ಎಂದು ಅಧಿಕಾರಿಗಳಿಗೆ ಪತ್ರ ಸಲ್ಲಿಸಿದ್ದಾರೆ. ಭೂ ಸ್ವಾಧೀನಕ್ಕೆ ಮುಂದಾಗಿರುವ ಸರ್ಕಾರದ ಕ್ರಮವನ್ನು ವಿರೋಧಿಸಿ ಆನೇಕಲ್ ತಾಲ್ಲೂಕಿನಾದ್ಯಂತ ಇರುವ ಗ್ರಾಮಗಳ ಸುಮಾರು 5 ಸಾವಿರ ರೈತರು ಜನವರಿ 4 ರಂದು ಸಭೆ ನಡೆಸಲಿದ್ದಾರೆ.
ಭೂ ಸ್ವಾಧೀನದ ಕುರಿತು ಸರ್ಕಾರವು ಸಾರ್ವಜನಿಕ ವಿಚಾರಣೆ ನಡೆಸಬೇಕೆಂದು ನಾವು ಬಯಸುತ್ತೇವೆ. ಶೀಘ್ರದಲ್ಲೇ ಅತ್ತಿಬೆಲೆಯಿಂದ ವಿಧಾನಸೌಧದವರೆಗೆ ಪಾದಯಾತ್ರೆ ನಡೆಸುತ್ತೇವೆ ಎಂದು ಮತ್ತೊಬ್ಬ ರೈತ ತಿಳಿಸಿದ್ದಾರೆ. ಇತ್ತೀಚೆಗಷ್ಟೇ ಜಮೀನು ಸಮೀಕ್ಷೆಗೆ ಬಳಸಲಾಗಿದ್ದ ಡ್ರೋನ್ ಅನ್ನು ರೈತರು ನಾಶಪಡಿಸಿದ್ದರು. ಕೆಐಎಡಿಬಿ ಮೂಲಗಳ ಪ್ರಕಾರ, ರೈತರಿಗೆ ಪ್ರಾಥಮಿಕ ಅಧಿಸೂಚನೆ ಹೊರಡಿಸಿದಾಗ, ಅವರು ಆಕ್ಷೇಪಣೆಗಳನ್ನು ಸಲ್ಲಿಸಬಹುದು. “ಆಕ್ಷೇಪಣೆಗಳನ್ನು ಸಮಿತಿಯ ಮುಂದೆ ಇಡಲಾಗುವುದು ಮತ್ತು ಅವು ನಿಜವಾಗಿದ್ದರೆ, ಅದಕ್ಕೆ ಅನುಗುಣವಾಗಿ ಕ್ರಮ ತೆಗೆದುಕೊಳ್ಳಲಾಗುವುದು” ಎಂದು ಮೂಲಗಳು ತಿಳಿಸಿವೆ.