ನವದೆಹಲಿ: ಐಪಿಎಲ್ ಮುಕ್ತಾಯದ ಹಂತಕ್ಕೆ ಬರುತ್ತಿರುವಾಗಲೇ ಟಿ20 ವಿಶ್ವಕಪ್ ಕಾವೇರುತ್ತಿದೆ. ಜೂ.9ಕ್ಕೆ ನ್ಯೂಯಾರ್ಕ್ನಲ್ಲಿ ನಡೆಯಲಿರುವ ಭಾರತ-ಪಾಕಿಸ್ತಾನ ಪಂದ್ಯವಂತೂ, ವಿಪರೀತ ಟಿಕೆಟ್ ಬೆಲೆಯ ಕಾರಣಕ್ಕೆ ವಿವಾದ ಸೃಷ್ಟಿಸಿದೆ. ಈ ಪಂದ್ಯದ ಟಿಕೆಟ್ಗಳಿಗೆ ಭಾರೀ ಬೇಡಿಕೆಯಿದ್ದು, ಡೈಮಂಡ್ ಕ್ಲಬ್ನ ಒಂದು ಟಿಕೆಟ್ ಬೆಲೆ 16.65 (20 ಸಾವಿರ ಡಾಲರ್) ಲಕ್ಷ ರೂ.ಗೇರಿದೆ ಎಂದು ಐಪಿಎಲ್ ಮಾಜಿ ಮುಖ್ಯಸ್ಥ ಲಲಿತ್ ಮೋದಿ ಆರೋಪಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಲಲಿತ್, ಭಾರತ-ಪಾಕಿಸ್ತಾನ ಪಂದ್ಯದ ಡೈಮಂಡ್ ಕ್ಲಬ್ (ಐಷಾರಾಮಿ ಸೌಲಭ್ಯಗಳನ್ನು ನೀಡುವ ವೀಕ್ಷಕರ ಆಸನಗಳಿರುವ ಜಾಗ) ಟಿಕೆಟ್ಗಳನ್ನು 16.65 ಲಕ್ಷ ರೂ.ಗಳಿಗೆ ಮಾರುತ್ತಿದೆ ಎಂದು ಕೇಳಿ ಆಘಾತವಾಗಿದೆ. ಅಮೆರಿಕದಲ್ಲಿ ವಿಶ್ವಕಪ್ ನಡೆಸುತ್ತಿರುವುದು ಕ್ರೀಡೆಯನ್ನು ಬೆಳೆಸಲು, ಅಭಿಮಾನಿಗಳನ್ನು ತೊಡಗಿಸಿಕೊಳ್ಳಲು. ಗೇಟ್ನಲ್ಲಿ ಹಣ ಸಂಗ್ರಹಿಸಿ ಲಾಭ ಮಾಡಿಕೊಳ್ಳಲು ಅಲ್ಲ ಎಂದು ಐಸಿಸಿ ವಿರುದ್ಧ ಕಿಡಿಕಾರಿದ್ದಾರೆ.
ಐಸಿಸಿ ಹೇಳುವ ಪ್ರಕಾರ ಭಾರತ-ಪಾಕ್ ಪಂದ್ಯದ ಟಿಕೆಟ್ಗಳ ಬೆಲೆ 300 ಡಾಲರ್ (24,983 ರೂ.)ಗಳಿಂದ 10000 ಡಾಲರ್ (8.32 ಲಕ್ಷ ರೂ.) ಇದೆ. ಆದರೆ ಯುಎಸ್ಎ ಟುಡೇ ವರದಿಗಳ ಪ್ರಕಾರ, ಟಿಕೆಟ್ಗಳ ಮರು ಮಾರಾಟದ ವೇಳೆ ಈ ಬೆಲೆಗಳು ವಿಪರೀತ ಏರಿವೆ. ಟಿಕೆಟ್ಗಳ ಬೆಲೆ ಹೆಚ್ಚಿರುವುದಕ್ಕೆ ಬೇರೆ ಬೇರೆ ವಲಯಗಳಲ್ಲೂ ಆಕ್ಷೇಪಗಳು ಕೇಳಿ ಬಂದಿವೆ.