This is the title of the web page
This is the title of the web page

`ಮಳೆ: ಯಾವುದೇ ಅಹಿತಕರ ಘಟನೆ ನಡೆಯದಂತೆ ಅಗತ್ಯ ಕ್ರಮ ಕೈಗೊಳ್ಳಿ’

ತಿ.ನರಸೀಪುರ: ತಾಲ್ಲೂಕಿನಲ್ಲಿ ಮಳೆಹಾನಿಯಿಂದ ಯಾವುದೇ ಬೆಳೆ ಮತ್ತು ಜೀವಹಾನಿ ಹಾಗೂ ಯಾವುದೇ ಅಹಿತಕರ ಘಟನೆ ನಡೆಯದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ. ವಿ. ರಾಜೇಂದ್ರ ಅಧಿಕಾರಿಗಳಿಗೆ ಸೂಚಿಸಿದರು.
ಸರ್ಕಾರ ಆದೇಶದ ಮೇರೆಗೆ ಪಟ್ಟಣದ ಮಿನಿ ವಿಧಾನಸೌಧದ ಸಭಾಂಗಣದಲ್ಲಿ ಗುರುವಾರ ನಡೆದ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆನಡೆಸಿ ಸೂಚನೆ ನೀಡಿ ಮಾತನಾಡಿದ ಅವರು, ಪ್ರಸ್ತುತ ಮಳೆ ಆರಂಭವಾಗಿದ್ದು,. ಅಲ್ಲಲ್ಲಿ ಬೆಳೆ ಹಾನಿಯಾಗಿದೆ.

ಮಳೆಯಿಂದಾಗುವ ಯಾವುದೇ ಹಾನಿಗೆ 48 ಗಂಟೆಯೊಳಗೆ ಪರಿಹಾರ ಬ್ಯಾಂಕಿನ ಖಾತೆಗೆ ನೇರವಾಗಿ ವಿತರಿಸಲಾಗುವುದು. ಹಾನಿಗೊಳಗಾದ ಪ್ರದೇಶಗಳಿಗೆ ಕಂದಾಯಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ ತುರ್ತಾಗಿ ವರದಿ ನೀಡಬೇಕು. ಮಳೆಯಿಂದ ಮನೆ ಹಾನಿಗೊಳಗಾದರೆ ಗ್ರಾಮ ಲೆಕ್ಕಿಗ, ಪಂಚಾಯಿತಿ ಅಧಿಕಾರಿ ಹಾಗೂ ಇಂಜಿನಿಯರ್ ಪರಿಶೀಲಿಸಿ ವರದಿ ನೀಡಿದರೆ 48 ಗಂಟೆಯೊಳಗೆ ಪರಿಹಾರ ನೀಡಲಾಗುವುದು.

ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗಳಿಗೆ ಅಗತ್ಯವಾದ ಬಿತ್ತನೆ ಬೀಜ, ರಸಗೊಬ್ಬರ, ಕ್ರಿಮಿನಾಶಕ, ಕಳೆನಾಶಕ ಸೇರಿದಂತೆ ಎಲ್ಲಾ ರೀತಿಯ ಸಂಗ್ರಹಣೆ ಇದ್ದು, ಯಾವುದೇ ತೊಂದರೆಯಾಗದಂತೆ ಕ್ರಮ ವಹಿಸಿದ್ದೇವೆ. ಜತೆಗೆ ಕೃತಕ ಅಭಾವ ಸೃಷ್ಟಿಸುವ ಬಗ್ಗೆ ಅಧಿಕಾರಿಗಳು ಜಾಗರೂಕರಾಗುವಂತೆ ತಿಳಿಸಿದ್ದೇವೆ. ರೈತರ ಸಭೆ ಕರೆದು ಚರ್ಚಿಸಿ ಸೂಕ್ತ ಕ್ರಮ ವಹಿಸಲಾಗುವುದು ಎಂದು ಅವರು ತಿಳಿಸಿದರು.
ಮಳೆಯಿಂದ ಬಾಳೆ ಸೇರಿದಂತೆ ಇನ್ನಿತರ ಬೆಳೆ ಸುಮಾರು 60 ಹೆಕ್ಟರ್ ನಷ್ಟು ಬೆಳೆ ಹಾನಿಯಾಗಿರುವ ಬಗ್ಗೆ ಮಾಹಿತಿ ಇದೆ,

ತೋಟಗಾರಿಕೆ ಹಾಗೂ ಕಂದಾಯಿಧಿಕಾರಿಗಳು ಪರಿಶೀಲಿಸಿ ವರದಿ ನೀಡುತ್ತಾರೆ. ಒಂದು ಹೆಕ್ಟೇರ್ ಗೆ 17 ಸಾವಿರ ವಾರ್ಷಿಕ ಬೆಳೆಗೆ 22 ಸಾವಿರ ರೂಪಾಯಿ ಪರಿಹಾರವಿದೆ. ಗ್ರಾಮೀಣ ಭಾಗದಲ್ಲಿ ಕಾರ್ಯ ಪಡೆ ರಚಿಸಲಾಗಿದೆ.ತಹಶೀಲ್ದಾರ್, ಆರ್ ಐ , ವಿಎ ಹಾಗೂ ಇಂಜಿನಿಯರ್ ಗಳಿದ್ದಾರೆ ಅಧಿಕಾರಿಗಳು ಮಾಹಿತಿ ನೀಡಿದ ತಕ್ಷಣ ಪರಿಹಾರ ದೊರಕಿಸಲಾಗುತ್ತದೆ. ಜತೆಗೆ ತಾಲ್ಲೂಕಿನ 16 ಮನೆಗಳು ಪಾರ್ಶ್ವ ವಾಗಿ ತೊಂದರೆ ಗೊಳಗಾಗಿದ್ದು, ವರದಿ ಪಡೆದು ಪರಿಹಾರ ವಿತರಣೆಗೆ ಕ್ರಮವಹಿಸಲಾಗುವುದು.

ಅಧಿಕಾರಿಗಳು ಸ್ಥಳದಲ್ಲಿದ್ದು, ಎಲ್ಲಾ ಅಗತ್ಯ ಸಿದ್ಧತಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಸರ್ಕಾರದ ಯೋಜನೆಗಳು ನೇರವಾಗಿ ಫಲಾನುಭವಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯಪ್ರವೃತ್ತರಾಗುವಂತೆ ಸೂಚಿಸಿದರು. ಸಭೆ ಕೆಲವು ಅಧಿಕಾರಿಗಳು ಗೈರಾಗಿದ್ದರು ಸಭೆಗೆ ಗೈರಾಗಿದ್ದ ಅಧಿಕಾರಿಗಳಿಗೆ ನೋಟೀಸ್ ನೀಡುವಂತೆ ತಹಶೀಲ್ದಾರ್ ಅವರಿಗೆ ಹೇಳಿದರು.

ಚಿರತೆಗೆ ಸಂಬಂಧಿಸಿದಂತೆ ಗ್ರಾಮ ಪಂಚಾಯಿತಿ ಹಂತದಲ್ಲಿ ಅಗತ್ಯ ಎಚ್ಚರಿಕಾ ಕ್ರಮ ತೆಗೆದುಕೊಳ್ಳುವಂತೆ ಅರಣ್ಯಾಧಿಕಾರಿಗಳು, ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಸೂಚಿಸಿದರು. ಮಳೆ ಹಾನಿ ವೇಳೆ ಮರಗಳು ಬಿದ್ದಲ್ಲಿ ಸಂಚಾರ ತೊಂದರೆಯಾದಲ್ಲಿ ತೆರವಿಗೆ ಅರಣ್ಯ ಇಲಾಖೆ ಕಾಯದೇ ತುರ್ತು ಕ್ರಮವಹಿಸಬೇಕು ಎಂದರು.ಹಳೇ ಮರಗಳು ಅಥವಾ ವಿದ್ಯುತ್ ಕಂಬಗಳಿದ್ದಲ್ಲಿ ಅವುಗಳನ್ನು ಪರಿಶೀಲಿಸಿ ತೆರವಿಗೆ ಇಲಾಖಾಧಿಕಾರಿಗಳಿಗೆ ಮಾಹಿತಿ ನೀಡಿ ಅಗತ್ಯ ಕ್ರಮ ವಹಿಸುವಂತೆ ಸೂಚಿಸಿದರು

ತಹಶೀಲ್ದಾರ್ ಗೀತಾ, ಇನ್ ಸ್ಪೆಕ್ಟರ್ ಮಹೇಶ್, ತೋಟಗಾರಿಕೆ ಎಡಿ ಶಶಿಕಲಾ, ಕೃಷಿ ಇಲಾಖೆಯ ರಾಘವೇಂದ್ರ, ಪುರಸಭಾ ಮುಖ್ಯಾಧಿಕಾರಿ ಬಿ.ಕೆ. ವಸಂತಕುಮಾರಿ, ನರೇಗಾ ಎಡಿ ಶಶಿಕುಮಾರ್ ಬಿಇಓ ಶ್ರೀನಿವಾಸ್, ಅಗ್ನಿಶಾಮಕ ದಳದ ಅಧಿಕಾರಿಗಳು ಸೇರಿದಂತೆ ಅನೇಕ ಅಧಿಕಾರಿಗಳು ಇದ್ದರು.