ರಾಮನಗರ: ಕೀಳು ಮಟ್ಟದಲ್ಲಿ ಮಾತನಾಡುವುದು ಎಚ್.ಸಿ.ಬಾಲಕೃಷ್ಣ ಅವರ ಹುಟ್ಟು ಗುಣವಾಗಿದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ಕುಮಾರಸ್ವಾಮಿ ತಿರುಗೇಟು ನೀಡಿದರು.
ಬಿಡದಿ ಪುರಸಭಾ ವ್ಯಾಪ್ತಿಯ ಜೋಗರದೊಡ್ಡಿ ವಾರ್ಡಿನಲ್ಲಿ ಬುಧವಾರ ಶ್ರೀ ಕಬ್ಬಾಳಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಅವರು ಮಾತನಾಡಿದರು. ಕುಮಾರಣ್ಣ ಅವರು ಈ ರಾಜ್ಯದ ಆಸ್ತಿಯಾಗಿದ್ದು, ರಾಜ್ಯದ ಯಾವುದೇ ಕ್ಷೇತ್ರದಲ್ಲಾದರೂ ಸ್ಪರ್ಧೆ ಮಾಡಿ ಪಕ್ಷ ಮತ್ತು ಕಾರ್ಯಕರ್ತರಿಗೆ ಬಲ ತುಂಬುವ ಕೆಲಸ ಮಾಡುತ್ತಾರೆ. ಇದಕ್ಕೆ ಶಕ್ತಿ ತುಂಬಿರುವವರು ರಾಮನಗರ ಜಿಲ್ಲೆಯ ಜನತೆ ಎಂಬುದನ್ನು ನಾವು ಮರೆಯು ವುದಿಲ್ಲ.
ನಾನು ಬಾಲಕೃಷ್ಣ ಅವರ ರೀತಿ ಲಘುವಾಗಿ ಮಾತನಾಡುವ ವ್ಯಕ್ತಿತ್ವ, ಸ್ವಭಾವ ನನ್ನದಲ್ಲ, ಅದು ನನಗೆ ಬರುವುದು ಇಲ್ಲ ಎಂದು ಎಚ್.ಸಿ.ಬಾಲಕೃಷ್ಣ ಅವರ ಹೇಳಿಕೆಗೆ ಮಾರ್ಮಿಕವಾಗಿ ಗುಡುಗಿದರು.2024ರ ಮಂಡ್ಯ ಲೋಕಸಭೆಯಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರು ಸ್ಪರ್ದಿಸಬೇಕೆಂದು ಅವರ ಮನಸ್ಸಿನಲ್ಲಿರಲಿಲ್ಲ. ಸ್ಥಳೀಯರಿಗೆ ಸ್ಪರ್ಧೆಗೆ ಅವಕಾಶ ಮಾಡಿಕೊಡುವುದಾಗಿತ್ತು.
ಕಳೆದ 2019ರ ಲೋಕಸಭೆ, ವಿಧಾನಸಭಾ ಚುನಾವಣಾ ಫಲಿತಾಂಶಗಳೆಲ್ಲವನ್ನು ಗಮನದಲ್ಲಿರಿಸಿಕೊಂಡು ಮಂಡ್ಯ ಜಿಲ್ಲೆಯ ಕಾರ್ಯಕರ್ತರು, ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಸರ್ಕಾರ ಮಂಡ್ಯ ಜಿಲ್ಲೆಗೆ ಅಭಿವೃದ್ದಿ ವಿಷಯದಲ್ಲಿ ಹೆಚ್ಚಿನ ಸಹಕಾರ ಸಿಗುತ್ತಿಲ್ಲ. ಆಗಾಗಿ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರೇ ಸ್ಪರ್ಧೆ ಮಾಡುವಂತೆ ಕಾರ್ಯಕರ್ತರು ಒತ್ತಾಯ ಮಾಡಿದ್ದರಿಂದ ಸ್ಪರ್ಧಿಸಬೇಕಾಯಿತು ಎಂದರು.
ಎಚ್.ಡಿ.ಕುಮಾರಸ್ವಾಮಿ ಅವರಿಗೆ ರಾಜ್ಯದ ಜನತೆ ಮತ್ತು ರೈತರ ಬಗೆಗೆ ಇರುವ ಕಾಳಜಿ ಹಾಗೂ ಒಡನಾಟವನ್ನು ಗುರ್ತಿಸಿ ಅವರ ನಾಯಕತ್ವಕ್ಕೆ ಶಕ್ತಿ ತುಂಬಲು ಬಿಜೆಪಿ ಪಕ್ಷದ ರಾಷ್ಟ್ರೀಯ ನಾಯಕರು ಒಂದು ಸೂಕ್ತ ಸ್ಥಾನಮಾನ ಕಲ್ಪಿಸಿಕೊಡಲಿದ್ದಾರೆ ಎಂದು ನಾವೆಲ್ಲರೂ ನಂಬಿದ್ದೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು ಯಾವುದೇ ಫಲಾಪೇಕ್ಷೆಯಿಲ್ಲದೆ ಸೇವೆ ಮಾಡಬೇಕೆಂಬ ಹಂಬಲದಿಂದ ಡಾ.ಸಿ.ಎನ್.ಮಂಜುನಾಥ್ ಅವರು ಸ್ಪರ್ಧೆ ಮಾಡಿದ್ದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಎನ್ಡಿಎ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆ ಎಂಬ ಆತ್ಮವಿಶ್ವಾಸವಿದೆ ಎಂದು ಹೇಳಿದರು.
ಈ ವೇಳೆ ಮಾಗಡಿ ಕ್ಷೇತ್ರದ ಮಾಜಿ ಶಾಸಕ ಎ.ಮಂಜುನಾಥ್, ಪುರಸಭೆ ಮಾಜಿ ಅಧ್ಯಕ್ಷೆ ವೆಂಕಟೇಶಮ್ಮರಾಮಕೃಷ್ಣಯ್ಯ, ಮಾಜಿ ಸದಸ್ಯ ದೇವರಾಜು, ಹಾಲಿ ಸದಸ್ಯೆ ಸರಸ್ವತಮ್ಮಬಸವರಾಜು, ಬಿಡದಿ ರೋಟರಿ ಸಂಸ್ಥೆ ಮಾಜಿ ಕಾರ್ಯದರ್ಶಿ ಬಿ.ಎಂ.ವಸಂತ್ಕುಮಾರ್, ಬಾನಂದೂರುಪಾಪಣ್ಣ, ರಾಮಣ್ಣ ಮತ್ತಿತರರು ಇದ್ದರು.