ಚೆನ್ನೈ: ಡಿಎಂಡಿಕೆ ಮುಖ್ಯಸ್ಥ ಹಾಗೂ ನಟ ಕ್ಯಾಪ್ಟನ್ ವಿಜಯಕಾಂತ್ ಚೆನ್ನೈನಲ್ಲಿ ನಿಧನರಾಗಿದ್ದಾರೆ. ಕೊರೊನಾ ಸೋಂಕು ತಗುಲಿ ಚೆನ್ನೈನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ಇದರಿಂದಾಗಿ ವಿಜಯಕಾಂತ್ ಅವರನ್ನು ವೆಂಟಿಲೇಟರ್ನಲ್ಲಿ ಇಡಲಾಗಿತ್ತು.
ಆದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ. ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ ಕ್ಯಾಪ್ಟನ್ ವಿಜಯಕಾಂತ್ ಬೆಂಬಲಿಗರು ಮತ್ತು ಆತ್ಮೀಯರು ಶೋಕ ಸಾಗರದಲ್ಲಿ ಮುಳುಗಿದ್ದಾರೆ.ವಿಜಯಕಾಂತ್ ಅವರ ನಿಜವಾದ ಹೆಸರು ವಿಜಯರಾಜ್. ನಟನೆಯಲ್ಲಿ ಸಾಕಷ್ಟು ಹೆಸರು ಗಳಿಸಿದ ನಂತರ ವಿಜಯಕಾಂತ್ ರಾಜಕೀಯ ಪ್ರವೇಶಿಸಿದರು.
ವಿಜಯಕಾಂತ್ 2011 ರಿಂದ 2016 ರವರೆಗೆ ತಮಿಳುನಾಡಿನ ವಿರೋಧ ಪಕ್ಷದ ನಾಯಕರಾಗಿದ್ದರು. ರಾಜಕೀಯಕ್ಕೆ ಬರುವ ಮುನ್ನ ವಿಜಯಕಾಂತ್ ಹಲವು ತಮಿಳು ಚಿತ್ರಗಳಲ್ಲಿ ನಟಿಸಿದ್ದರು. ನಟನೆಯ ಜೊತೆ ಹಲವು ಚಿತ್ರಗಳನ್ನು ನಿರ್ದೇಶಿಸಿದ್ದರು. 14 ಸೆಪ್ಟೆಂಬರ್ 2005 ರಂದು ತಮ್ಮದೇ ಆದ ಪಕ್ಷವನ್ನು ಕಟ್ಟಿ ಆ ಪಕ್ಷಕ್ಕೆ ದೇಸಿಯ ಮುಪೆರ್ಕ್ಕು ದ್ರಾವಿಡ ಕಳಗಂ (DMDK) ಎಂದು ಹೆಸರಿಟ್ಟರು.
ವಿಜಯಕಾಂತ್ ಅವರ ವೈಯಕ್ತಿಕ ಜೀವನವನ್ನು ನೋಡುವುದಾದರೆ ಅವರುಆಗಸ್ಟ್ 25, 1952 ರಂದು ಜನಿಸಿದ್ದು, ಮಧುರೈ ನಿವಾಸಿಯಾಗಿದ್ದರು. ಇವರ ತಂದೆಯ ಹೆಸರು ಕೆ.ಎನ್.ಅಲಗರಸ್ವಾಮಿ. ಅವರ ಪೂರ್ವಜರು ಆಂಧ್ರಪ್ರದೇಶ ಮೂಲದವರು. ವಿಜಯಕಾಂತ್ ಜನವರಿ 31, 1990 ರಂದು ಪ್ರೇಮಲತಾ ಅವರನ್ನು ವಿವಾಹವಾದರು. ಇವರ ಇಬ್ಬರು ಪುತ್ರರ ಹೆಸರು ವಿಜಯ್ ಪ್ರಭಾಕರ್ ಮತ್ತು ಷಣ್ಮುಗ ಪಾಂಡಿಯನ್.
ವಿಜಯಕಾಂತ್ ಅವರು ಮೊದಲಿನಿಂದಲೂ ನಟನೆಯತ್ತ ಒಲವು ಹೊಂದಿದ್ದರು ಎಂಬುದು ಗಮನಾರ್ಹ. ಚಿತ್ರರಂಗಕ್ಕೆ ಬಂದ ನಂತರ ವಿಜಯಕಾಂತ್ ತಮ್ಮ ಹೆಸರನ್ನು ಬದಲಾಯಿಸಿಕೊಂಡರು. ಅವರು ತಮ್ಮ ಮೂಲ ಹೆಸರಾದ ವಿಜಯ್ ರಾಜ್ ನಿಂದ ವಿಜಯ ಎನ್ನುವುದನ್ನು ಉಳಿಸಿಕೊಂಡು ರಾಜ್ ಬದಲಿಗೆ ಕಾಂತ್ ಎಂದು ಮಾಡಿಕೊಂಡರು. ಜನರೂ ಅವರನ್ನು ಪ್ರೀತಿಯಿಂದ ಕ್ಯಾಪ್ಟನ್ ಎಂದು ಕರೆಯತೊಡಗಿದರು. ಚಿತ್ರದಲ್ಲಿ ಕ್ಯಾಪ್ಟನ್ ಪ್ರಭಾಕರನ್ ಪಾತ್ರವನ್ನು ನಿರ್ವಹಿಸಿದ ನಂತರ ಅವರು ಕ್ಯಾಪ್ಟನ್ ಹೆಸರಿನಿಂದ ಪ್ರಸಿದ್ಧರಾದರು.